ಚಿತ್ರದುರ್ಗ: ಕೋಟೆಯನ್ನು ಪ್ರವಾಸಿಗರು ನಿಂತು ನೋಡುವಷ್ಟರ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕೆಂಬ ಮಹಾದಾಸೆ ಇತ್ತು. ಆದರೆ ನೌಕರರಿಗೆ ವರ್ಗಾವಣೆ ಅನಿವಾರ್ಯವಾಗಿದ್ದು, ನಾನು ಧಾರವಾಡಕ್ಕೆ ವರ್ಗವಾಗಿ ಹೋಗುತ್ತಿದ್ದೇನೆ ಎಂದು ಪುರಾತತ್ವ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿ ಗಿರೀಶ್ ಹೇಳಿದರು.
ಚಿತ್ರದುರ್ಗ ಕೋಟೆ ಆವರಣದಲ್ಲಿ ಕೋಟೆ ವಾಯು ವಿಹಾರಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋಟೆಯೊಳಗೆ ಎರಡು ಹೈಟೆಕ್ ಶೌಚಾಲಯ, ಆರು ಕಡೆ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕೆಂಬ ಉದ್ದೇಶದಿಂದ ಆರು ಕಡೆ ಶುದ್ಧ ಕುಡಿಯುವ ನೀರಿನ ಘಟಕ, ಐವತ್ತು ಬೆಂಚ್‌ಗಳು, ಕೋಟೆಯ ಮಾಹಿತಿಯುಳ್ಳ 36 ನಾಮಫಲಕ, ವಿದ್ಯುತ್, ಲಗೇಜ್ ರೂಂ, ಪುಸ್ತಕಗಳನ್ನು ಮಾರಾಟ ಮಾಡಲು ಸ್ಥಳ ನಿಯೋಜನೆ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಹೀಗಾಗಿ ನಾನು ವರ್ಗಾವಣೆಯಾಗಿರುವುದರಿಂದ ನನ್ನ ಜಾಗಕ್ಕೆ ಬಂದಿರುವ ಗೋಕುಲ್ ಅವರು ಎಲ್ಲ ಸೌಲಭ್ಯಗಳನ್ನು ಕೋಟೆಯಲ್ಲಿ ಪ್ರವಾಸಿಗರಿಗೆ ಒದಗಿಸುತ್ತಾರೆ ಎಂದು ತಿಳಿಸಿದರು.
ಕೋಟೆ ವಾಯು ವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಮಾತನಾಡಿ, ಕೋಟೆ ಮೇಲ್ಭಾಗದಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವಂತೆ ಹಿಂದಿನಿಂದಲೂ ಗಿರೀಶ್ ಅವರಿಗೆ ಒತ್ತಾಯಿಸುತ್ತಲೆ ಬರುತ್ತಿದ್ದೆವು. ಅದು ಸಾಧ್ಯವಾಗಲಿಲ್ಲ. ಹೊಸದಾಗಿ ಆಗಮಿಸಿರುವ ಸಹಾಯಕ ಸಂರಕ್ಷಣಾಧಿಕಾರಿ ಗೋಕುಲ್ ಅವರು ಕೋಟೆ ಅಭಿವೃದ್ಧಿ ಕಡೆ ಗಮನ ನೀಡಬೇಕು ಎಂದು ಮನವಿ ಮಾಡಿದರು.
ಕೋಟೆ ವಾಯು ವಿಹಾರಿಗಳ ಸಂಘದ ಕೂಬಾನಾಯ್ಕ ಮಾತನಾಡಿ, ಗಿರೀಶ್ ಅವರು ಐತಿಹಾಸಿಕ ಚಿತ್ರದುರ್ಗದ ಕೋಟೆಯ ಮೇಲೆ ವಿಶೇಷ ಅಭಿಮಾನವಿಟ್ಟು ಅನೇಕ ಅಭಿವೃದ್ಧಿ ಕೈಗೊಂಡಿದ್ದರು. ಅಷ್ಟರೊಳಗೆ ಬೇರೆ ಕಡೆ ವರ್ಗಾವಣೆಗೊಂಡಿದ್ದಾರೆ. ಅಲ್ಲಿಯೂ ಅವರು ಕರ್ತವ್ಯದಲ್ಲಿ ಯಶಸ್ಸು ಕಾಣಲಿ ಎಂದು ಶುಭಾ ಹಾರೈಸಿದರು.
ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ, ಕೋಟೆಗೆ ಗಿರೀಶ್ ಆಗಮಿಸಿದ ಮೇಲೆ ಅನೇಕ ಅಭಿವೃದ್ಧಿ ಕಾರ್ಯಗಳು ಚುರುಕಿನಿಂದ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಗಿರೀಶ್ ಅವರು ಮತ್ತೆ ಚಿತ್ರದುರ್ಗಕ್ಕೆ ಆಗಮಿಸಿ ಕೋಟೆಯನ್ನು ಅಭಿವೃದ್ಧಿ ಪಡಿಸಲಿ ಎಂದರು.
ಕೋಟೆ ವಾಯು ವಿಹಾರಿಗಳ ಸಂಘದ ಗೌರವಾಧ್ಯಕ್ಷ ಜಯಣ್ಣ, ನೂತನವಾಗಿ ಆಗಮಿಸಿರುವ ಸಹಾಯಕ ಸಂರಕ್ಷಣಾಧಿಕಾರಿ ಗೋಕುಲ್, ಕೋಟೆ ವಾಯುವಿಹಾರಿಗಳ ಸಂಘದ ಉಪಾಧ್ಯಕ್ಷ ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಮಂಜಪ್ಪ, ನಿರ್ದೇಶಕ ನರಸಿಂಹಪ್ಪ, ಉಡುಸಾಲಪ್ಪ, ಭದ್ರಣ್ಣ, ಮಹಿಳಾ ನಿದೇಶಕಿಯರಾದ ರತ್ನಮ್ಮ, ಲತ, ವೀಣಾ ಇನ್ನಿತರರಿದ್ದರು.