Advertisement

ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೆಚ್ಚು ಒತ್ತು: ಸಚಿವ ಲಕ್ಷ್ಮಣ ಸವದಿ

10:58 AM Aug 31, 2019 | Suhan S |

ಬೈಲಹೊಂಗಲ: ಸಿಕ್ಕ ಅವಕಾಶವನ್ನು ಬಳಸಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪವರ ಕೈ ಬಲಪಡಿಸುವ ಮೂಲಕ ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

Advertisement

ಶುಕ್ರವಾರ ಪಟ್ಟಣದಲ್ಲಿ ಶಾಸಕ ಮಹಾಂತೇಶ ದೊಡಗೌಡರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರು ನನ್ನ ಮೇಲೆ ಭರವಸೆ ಇಟ್ಟು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನಾಗಿ ಮಾಡಿದ್ದಾರೆ. ಅವರ ಭರವಸೆಯನ್ನು ಈಡೇರಿಸಿ, ಉಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಇನ್ನೊಂದು ಹತ್ತೆಂಟು ಸೀಟ್ ಬರದ ಕಾರಣ ಬಿಜೆಪಿ ಪಕ್ಷ ಅಧಿಕಾರದಿಂದ ಅವಕಾಶ ವಂಚಿತವಾಗಿತ್ತು. ಇದೀಗ ಅದು ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಪಕ್ಷ ವಿಶೇಷವಾದ ಪಕ್ಷವಾಗಿದೆ ಎಂದರು.

ಈ ಬಾರಿ ಕರ್ನಾಟಕದಲ್ಲಿ ಅತ್ಯಂತ ಭೀಕರವಾದ ಮಹಾಪೂರ ಬಂದು ಒಂದು ಕಡೆ ಅತಿವೃಷ್ಟಿಯಾಗಿ ಲಕ್ಷಾಂತರ ಜನರು ತೊಂದರೆಗೊಳಗಾಗಿದ್ದಾರೆ. ಹೀಗಾಗಿ ಸೆ. 2ರಂದು ಶಾಸಕ ಮಹಾಂತೇಶ ದೊಡಗೌಡರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುವ ಬದಲಿಗೆ ಆ ಹಣವನ್ನು ಅವರ ಅಭಿಮಾನಿಗಳು ನೆರೆ ಸಂತಸ್ತರಿಗೆ ಉಪಯೋಗ ಆಗಲಿ ಎಂದು ಹೇಳಿ 5 ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಟ್ಟಿರುವುದು ಒಳ್ಳೆಯ ನಿರ್ಣಯವಾಗಿದೆ ಎಂದರು.

ನೆರೆ ಸಂತ್ರಸ್ತರಿಗೆ ಇಂಥ ಸಂದರ್ಭದಲ್ಲಿ ಹಣಕಾಸಿನ ನೆರವು ಕೂಡ ಅವಶ್ಯವಾಗಿರುತ್ತದೆ. ಅದ್ಧೂರಿ ಕಾರ್ಯಕ್ರಮ, ಜನ್ಮದಿನ ಆಚರಿಸಿಕೊಳ್ಳುವ ಬದಲಿಗೆ ಅದೇ ಹಣವನ್ನು ನೆರೆ ಪರಿಹಾರ ನಿಧಿಗೆ ಬಳಸುವುದು ಸೂಕ್ತವಾಗಿದೆ ಎಂದರು.

Advertisement

ಇದಕ್ಕೂ ಮೊದಲು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಿತ್ತೂರ ರಾಣಿ ಚನ್ನಮ್ಮನ ಸಮಾಧಿಗೆ ನಮಿಸಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ವೇಳೆ ಶಾಸಕ ಮಹಾಂತೇಶ ದೊಡಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಜಿಪಂ ಮಾಜಿ ಅಧ್ಯಕ್ಷ ಎಸ್‌.ಎಫ್‌.ದೊಡಗೌಡರ, ಬಿ.ಎಫ್‌.ಕೊಳದೂರ, ಗುರು ಮೆಟಗುಡ್ಡ, ಶ್ರೀಕರ ಕುಲಕರ್ಣಿ, ಪ್ರಕಾಶ ಮೂಗಬಸವ, ಕುಮಾರಗೌಡ ಪಾಟೀಲ, ವಿಜಯ ಮೆಟಗುಡ್ಡ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next