ಕೋವಿಡ್ -19ರ ಕಾರಣದಿಂದ ಹೇರಲಾದ ಲಾಕ್‌ಡೌನ್ ಮತ್ತು ಅದರ ಪರಿಣಾಮದಿಂದಾಗಿ ಉದ್ಯೋಗ ಮಾರುಕಟ್ಟೆ ತೀವ್ರ ಅಸ್ಥಿರವಾಯಿತು. ಆರ್ಥಿಕ ನಷ್ಟದಿಂದ ಹಲವು ಉದ್ಯೋಗಗಳಿಗೆ ಕತ್ತರಿ ಬಿದ್ದವು. ಹೀಗಾಗಿ ಸ್ವತಂತ್ರ ಉದ್ಯೋಗ (freelance) ಮಾರುಕಟ್ಟೆ ಗೊಂದಲದಲ್ಲಿ ಸಿಲುಕಿತು. ಮುಂದಿನ ವರ್ಷದ ಬಗ್ಗೆ ಗೊಂದಲ ಫ್ರೀಲಾನ್ಸಿಂಗ್ ಉದ್ಯೋಗ ವಲಯವನ್ನು ಕಾಡತೊಡಗಿತ್ತು. ಆದರೆ ಈ ವಲಯವೀಗ ನಿಟ್ಟುಸಿರು ಬಿಡುವಂಥ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವತಂತ್ರ ಉದ್ಯೋಗಗಳಿಗೆ ನೇಮಕಾತಿ ಈ ವರ್ಷದ ಜನವರಿಯಲ್ಲಿ ಶೇ. 22ರಷ್ಟು ಹೆಚ್ಚಾಗಿದೆ ಎಂದು ಜಾಬ್ ಸೈಟ್ ಸಂಸ್ಥೆ ಇನ್‌ಡೀಡ್ ಹೇಳಿದೆ.
ದುಪ್ಪಟ್ಟು ಹೆಚ್ಚಳ!: ಕಳೆದ ವರ್ಷ ಮೇ ಮತ್ತು ಜೂನ್‌ನಲ್ಲಿ ಸ್ವತಂತ್ರ ಉದ್ಯೋಗ ನೇಮಕಾತಿಗಳಿಗೆ ಸಂಬಂಧಿಸಿದ ಇನ್‌ಡೀಡ್ ದತ್ತಾಂಶದಲ್ಲಿ ತೀವ್ರ ಏರಿಕೆ ಕಂಡಿರುವುದು ದೃಢಪಟ್ಟಿದೆ. ಆ ಎರಡು ತಿಂಗಳುಗಳಲ್ಲಿ ಸ್ವತಂತ್ರ ಉದ್ಯೋಗ ಪೋಸ್ಟಿಂಗ್‌ಗಳ ಸಂಖ್ಯೆ 2019ಕ್ಕಿಂತ ಎರಡು ಪಟ್ಟು ಹೆಚ್ಚಾಗಿತ್ತು.
ಹಳಿಗೆ ಬಂದ ಜಾಬ್ ಮಾರ್ಕೆಟ್: ಮಾರ್ಚ್ 2020ರ ಅನಂತರ, ಕೋವಿಡ್ -19ರ ಕಾರಣದಿಂದಾಗಿ ಕಂಪೆನಿಗಳು ವರ್ಕ್ ಫ್ರಂ ಹೋಮ್‌ಗೆ ಆದ್ಯತೆ ನೀಡುತ್ತಿರುವುದರಿಂದಾಗಿ ಉದ್ಯೋಗ ಹುಡುಕಾಟವು ಸಾಂಕ್ರಾಮಿಕ ಪೂರ್ವಕ್ಕಿಂತ ಹೆಚ್ಚಾಗಿದೆ. ಎಪ್ರಿಲ್ 2020ರಲ್ಲಿ ಉದ್ಯೋಗ ಹುಡುಕಾಟ ಉತ್ತುಂಗಕ್ಕೇರಿದ್ದು, 2020ರಿಂದ ಇಲ್ಲಿಯವರೆಗೆ ಉದ್ಯೋಗ ಮಾರುಕಟ್ಟೆಯಲ್ಲಿ ಸ್ವತಂತ್ರ ಉದ್ಯೋಗಿಗಳ ಸಂಖ್ಯೆ ಏರಿಕೆ ಕಂಡಿದೆ.
ಯಾವ ವಯೋಮಾನದವರು ಹೆಚ್ಚು: 20ರಿಂದ 29 ವರ್ಷ ವಯಸ್ಸಿನ ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಫ್ರೀಲಾನ್ಸ್ ಉದ್ಯೋಗವನ್ನು ಬಯಸುತ್ತಿದ್ದಾರೆ.
ಯಾರಿಗೆ ಬೇಡಿಕೆ?
ಈ ವರ್ಷದ ಜನವರಿಯಲ್ಲಿ ಒದಗಿಸಲಾದ ಫ್ರೀಲಾನ್ಸ್ ಉದ್ಯೋಗಗಳ ಪೈಕಿ ಬರಹಗಾರರಿಗೆ ಹೆಚ್ಚು ಬೇಡಿಕೆ ಬಂದಿದೆ. ಜತೆಗೆ ವಿನ್ಯಾಸಕ, ನೇಮಕಾತಿ ( recruiter), ಡೆವಲಪರ್ ಮತ್ತು ಡಿಜಿಟಲ್ ಮಾರುಕಟ್ಟೆಗಾರರಿಗೆ ಸಾಕಷ್ಟು ಬೇಡಿಕೆ ಇದೆ.
ಫ್ರೀಲಾನ್ಸ್‌ನತ್ತ ಹೆಚ್ಚಿದ ಬೇಡಿಕೆ
ಕೋವಿಡ್ -19 ಫ್ರೀಲಾನ್ಸ್ ಬೇಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಕಳೆದ ವರ್ಷ ಸ್ವತಂತ್ರ ಉದ್ಯೋಗ ಹುಡುಕಾಟ ಮತ್ತು ನೇಮಕಾತಿಯಲ್ಲಿ ಇನ್‌ಡೀಡ್‌ನ ಅಂಕಿಅಂಶಗಳ ಪ್ರಕಾರ ತೀವ್ರ ಏರಿಕೆ ಕಂಡುಬಂದಿದೆ. ಕೆಲಸದ ವಾತಾವರಣದಲ್ಲಿನ ಬದಲಾವಣೆಗಳು ಮತ್ತು ಮನೆಯಿಂದ ಕೆಲಸ (ವರ್ಕ್ ಫ್ರಮ್ ಹೋಂ)ದಿಂದ ಫ್ರೀಲಾನ್ಸ್ ಉದ್ಯೋಗಗಳತ್ತ ಟ್ರೆಂಡ್ ಸಾಗಿದೆ.