Advertisement

ಶೌಚ ಗುಂಡಿಗಳಿಂದ ಹೆಚ್ಚು ಸಾವು

12:03 PM Sep 16, 2018 | Team Udayavani |

ಬೆಂಗಳೂರು: ಕೇಂದ್ರದ ಮಹತ್ವಾಕಾಂಕ್ಷಿ “ಸ್ವತ್ಛ ಭಾರತ ಅಭಿಯಾನ’ದಿಂದ ಮಲಹೊರುವ ಪದ್ಧತಿ ನಿರ್ಮೂಲನೆ ಆಗುವುದಿಲ್ಲ. ಬದಲಿಗೆ ಈ ಯೋಜನೆ ಅಡಿ ನಿರ್ಮಾಣಗೊಳ್ಳುವ ಶೌಚ ಗುಂಡಿಗಳು ಹೆಚ್ಚು ಜನರ ಬಲಿ ಪಡೆಯಲಿವೆ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೇಜವಾಡ ವಿಲ್ಸನ್‌ ಆರೋಪಿಸಿದರು.

Advertisement

ಸ್ವತ್ಛ ಭಾರತ ಅಭಿಯಾನದ ಉದ್ದೇಶ ದೇಶವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವುದು. ಈ ಯೋಜನೆಗಾಗಿ ಸರ್ಕಾರ 2 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದು, ಐದು ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಆದರೆ, ಈ ಶೌಚಾಲಯ ಗುಂಡಿಗಳ ಸ್ವತ್ಛತೆಗೆ ಅಗತ್ಯವಿರುವ ಸಕ್ಕಿಂಗ್‌ ಯಂತ್ರಗಳನ್ನೇ ನೀಡಿಲ್ಲ. ಅಂದರೆ ಶೌಚ ಗುಂಡಿಗಳ ಸ್ವತ್ಛತೆ ಮನುಷ್ಯರಿಂದಲೇ ಆಗಬೇಕು.

ಹಾಗಿದ್ದರೆ, ಈ ಶೌಚಾಲಯಗಳು ಭವಿಷ್ಯದಲ್ಲಿ ಹೆಚ್ಚು ಜನರ ಸಾವಿಗೆ ಕಾರಣ ಆಗಲಿವೆ ಎಂದು ದೂರಿದರು. ನಗರದ ನಯನ ಸಭಾಂಗಣದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ “ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ಸಭಿಕರೊಬ್ಬರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.  

ಸ್ವತ್ಛ ಭಾರತ ಅಭಿಯಾನಕ್ಕೂ ಮತ್ತು ಮಲ ಹೊರುವ ಪದ್ಧತಿ ನಿರ್ಮೂಲನೆಗೂ ವಾಸ್ತವವಾಗಿ ಯಾವುದೇ ಸಂಬಂಧ ಇಲ್ಲ. ಹಾಗೂ ಈ ಪದ್ಧತಿ ನಿರ್ಮೂಲನೆಗಾಗಿ ಕ್ರಿಯಾ ಯೋಜನೆಯಲ್ಲಿ ಯಾವುದೇ ಕಾರ್ಯಕ್ರಮವೂ ಇಲ್ಲ. ನಮ್ಮಲ್ಲಿ ಸ್ವತ್ಛತೆ ಯಾವೊಂದು ಜಾತಿಗೆ ಸೀಮಿತವಾಗಿಲ್ಲ. ಪ್ರಧಾನಿ, ಸಚಿವರಿಂದ ಹಿಡಿದು ಎಲ್ಲರೂ ಸ್ವತ್ಛಗೊಳಿಸುತ್ತಾರೆ ಎಂಬ ಭಾವನೆಯನ್ನು ಬಿತ್ತುವುದಾಗಿದೆ ಎಂದು ಅಭಿಪ್ರಾಯಪಟ್ಟರು.

ಪುನರ್ವಸತಿಗೆ ಪುಡಿಗಾಸು!: 2014ರ ಅಕ್ಟೋಬರ್‌ 2ರಂದು ಸ್ವತ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ಸರ್ಕಾರ ಎರಡು ಲಕ್ಷ ಕೋಟಿ ರೂ. ಕೊಡುತ್ತದೆ. ಆದರೆ, ಮಲ ಹೊರುವ ಪದ್ಧತಿಯಿಂದ ವಿಮುಖರಾದ ಕುಟುಂಬಗಳ ಪುನರ್ವಸತಿಗೆ ಕೇವಲ 4 ಕೋಟಿ ರೂ. ನೀಡಿದೆ. ಯೋಜನೆ ಆರಂಭದಿಂದ ಈವರೆಗೆ 340 ಜನ ಶೌಚಗುಂಡಿಗಳಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಈ ಸಾವುಗಳ ಹೊಣೆ ಹೊರಲು ಯಾವೊಬ್ಬ ರಾಜಕಾರಣಿಯೂ ಮುಂದೆಬರುವುದಿಲ್ಲ. ಬರೀ ನಾವು ಜವಾಬ್ದಾರರಲ್ಲ ಎಂಬ ಹೇಳಿಕೆಗಳೇ ಬರುತ್ತವೆ. ಆದ್ದರಿಂದ ನಮಗೆ ಜವಾಬ್ದಾರಿಯುತ ಮತ್ತು ಮಾನವೀಯ ಮೌಲ್ಯಗಳಿರುವ ನಾಯಕರ ಅವಶ್ಯಕತೆ ಇದೆ ಎಂದು ಬೇಜವಾಡ ವಿಲ್ಸನ್‌ ಪ್ರತಿಪಾದಿಸಿದರು.

ಶ್ರೀಮಂತರಿಗೆ ಸುಂದರ: ಪ್ರಜಾಪ್ರಭುತ್ವ ಭಾರತ ಶ್ರೀಮಂತರಿಗೆ ಸುಂದರವಾಗಿ ಕಾಣುತ್ತದೆ. ಆದರೆ, ಬಡವರಿಗೆ ಇದು ಈಗಲೂ ಕುರೂಪವಾಗಿಯೇ ಇದೆ. ಆಕ್ರೋಶದಿಂದ ಈ ಮಾತು ಹೇಳುತ್ತಿಲ್ಲ; ಇದು ವ್ಯವಸ್ಥೆಯ ಕಟು ಸತ್ಯ ಎಂದಬೇಜವಾಡ ವಿಲ್ಸನ್‌ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೇವೆ ಎನ್ನುವುದು ದೊಡ್ಡ ಹೋರಾಟ ಎಂದು ಸೂಚ್ಯವಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಇದ್ದರು. 

ಹತ್ಯೆಗಳಿಂದ ಸಂಸ್ಕೃತಿ ನಾಶ: ಗೌರಿ ಲಂಕೇಶ್‌ ಮತ್ತು ಪ್ರೊ.ಎಂ.ಎಂ. ಕಲಬುರ್ಗಿ ಅವರಂತಹ ಪ್ರಗತಿಪರರ ಹತ್ಯೆಗಳು ನಮ್ಮ ಸಂಸ್ಕೃತಿಯನ್ನು ನಾಶಮಾಡುತ್ತವೆ ಎಂದು ಬೇಜವಾಡ ವಿಲ್ಸನ್‌ ತಿಳಿಸಿದರು. ಎಲ್ಲರನ್ನೂ ಮತ್ತು ಎಲ್ಲವನ್ನೂ ಅಪ್ಪಿಕೊಳ್ಳುವ ಸಂಸ್ಕೃತಿ ಕರ್ನಾಟಕದಲ್ಲಿದೆ.

ಕರ್ನಾಟಕ ಎಲ್ಲಕ್ಕಿಂತ ಶ್ರೇಷ್ಠವಾದುದು ಎಂದು ನಾನು ಹೇಳುವುದಿಲ್ಲ. ಕಾರಣ, ಇಲ್ಲಿಯೂ ಗೌರಿ ಮತ್ತು ಕಲಬುರ್ಗಿ ಅವರಂತಹ ಹತ್ಯೆಗಳು ನಡೆದಿವೆ. ಆದರೆ, ಕನ್ನಡ ಸಂಸ್ಕೃತಿಯಲ್ಲಿ ಹತ್ಯೆಗೆ ಅವಕಾಶ ಇಲ್ಲ. ಈ ಕೃತ್ಯಗಳು ಸಂಸ್ಕೃತಿ ನಾಶಮಾಡುತ್ತವೆ ಎಂದು ಹೇಳಿದರು.

ಮೆ ಐ ಕಮ್‌ಇನ್‌ ಸರ್‌?: ಕಾಲೇಜಿನಲ್ಲಿ ವಿದ್ಯಾರ್ಥಿಗಳು ತರಗತಿ ಪ್ರವೇಶಿಸುವ ಮುನ್ನ ಶಿಕ್ಷಕರನ್ನು ಕೇಳಿ ಒಳಗೆ ಹೋಗುತ್ತಿದ್ದರು. ಆದರೆ, ಏನು ಕೇಳುತ್ತಿದ್ದರು ಎನ್ನುವುದು ನನಗೆ ಗೊತ್ತಾಗುತ್ತಿರಲಿಲ್ಲ. ಹಾಗಾಗಿ, ಹೊರಗಡೆ ನಿಲ್ಲುವ ಪ್ರಸಂಗ ಬರುತ್ತಿತ್ತು. ಕೊನೆಗೊಮ್ಮೆ ಅವರೆಲ್ಲಾ “ಮೆ ಐ ಕಮ್‌ಇನ್‌ ಸರ್‌’ ಎಂದು ಕೇಳುತ್ತಿದ್ದರು ಎಂಬುದು ಆಮೇಲೆ ಗೊತ್ತಾಯ್ತು!

ಕೋಲಾರದ ಪ್ರಥಮದರ್ಜೆ ಕಾಲೇಜು ದಿನಗಳನ್ನು ವಿಲ್ಸನ್‌ ಮೆಲುಕು ಹಾಕಿದ್ದು ಹೀಗೆ. ಎಸ್ಸೆಸ್ಸೆಲ್ಸಿವರೆಗೂ ಒಂದೇ ಒಂದು ಇಂಗ್ಲಿಷ್‌ ಅಕ್ಷರ ಬರುತ್ತಿರಲಿಲ್ಲ. ಆದರೆ, ಒಂದೇ ತರಗತಿ ಇರುವುದರಿಂದ ಸಮಸ್ಯೆ ಆಗುತ್ತಿರಲಿಲ್ಲ. ಕಾಲೇಜಿಗೆ ಬಂದ ನಂತರ ಪ್ರತಿ ಅವಧಿಯಲ್ಲಿ ಬೇರೆ ಬೇರೆ ತರಗತಿಗಳಿಗೆ ಹೋಗಬೇಕಿತ್ತು. ಆಗ ಸಮಸ್ಯೆ ಆಯಿತು. ತರಗತಿ ಒಳಗೆ ಶಿಕ್ಷಕರಿದ್ದಾಗ “ಮೆ ಐ ಕಮ್‌ಇನ್‌ ಸರ್‌’  ಎಂದು ಕೇಳಿ ಹೋಗಬೇಕು ಎನ್ನುವುದು ಎಷ್ಟೋ ದಿನಗಳ ನಂತರ ಗೊತ್ತಾಯಿತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next