Advertisement

Kannada: ಗಡಿನಾಡ ಕನ್ನಡಿಗರಿಗಾಗಿ ತೋರಬೇಕಿದೆ ಮತ್ತಷ್ಟು ಕಾಳಜಿ

11:50 PM Nov 01, 2023 | Team Udayavani |

ಕರ್ನಾಟಕದ 19 ಜಿಲ್ಲೆಗಳು ಹಾಗೂ 3 ತಾಲೂಕುಗಳಿಗೆ ವ್ಯಾಪಿಸಿರುವ ಕರ್ನಾಟಕದ ಗಡಿ ಭಾಗಗಳು ಹಾಗೂ ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿನ ಗಡಿ ಭಾಗಗಳಲ್ಲಿ ತಮ್ಮ ಬದುಕು ರೂಪಿಸಿಕೊಂಡಿರುವ ಕನ್ನಡಿಗರಿಗೆ ಸಂಘ ಸಂಸ್ಥೆಗಳಿಗೆ ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಗತ್ಯವಾದ ಮೂಲಸೌಲಭ್ಯಗಳನ್ನು ಒದಗಿಸು ವುದರ ಜತೆಗೆ ಅಲ್ಲಿನ ಜನರಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ, ಅಭಿಮಾನ ಮತ್ತು ಗೌರವ ಮೂಡುವಂತೆ ಮಾಡುವ ದಿಸೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಅಲ್ಲಿಂದ ಇಲ್ಲಿಯವರೆಗೆ ತನ್ನ ಆರ್ಥಿಕ ಇತಿಮಿತಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಾ ಬಂದಿದೆ.

Advertisement

ಕೇರಳದ ಕಾಸರಗೋಡುವಿನಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಮಾನ್ಯತೆ ನೀಡಬೇಕು, ಅಲ್ಲಿನ ದೈನಂದಿನ ವ್ಯವಹಾರವೂ ಕನ್ನಡದಲ್ಲೇ ನಡೆಯಬೇಕು ಎಂಬುದು ನನ್ನ ಒತ್ತಾಸೆಯಾಗಿದ್ದು, ಇದಕ್ಕೆ ಅಲ್ಲಿನ ಕೇರಳ ಸರಕಾರವೂ ಸ್ಪಂದಿಸಿತ್ತು. ಆದರೆ ಅನಂತರದಲ್ಲಿ ಸಂಪೂರ್ಣವಾಗಿ ಜಾರಿಗೆ ಬರಲಿಲ್ಲ. ಮಲಯಾಳ ಗೊತ್ತಿದ್ದರೆ ಮಾತ್ರ ಕೇರಳದಲ್ಲಿ ಸರಕಾರಿ ಉದ್ಯೋಗ ಎಂಬುದೂ ಕನ್ನಡಿಗರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಜತೆಗೆ ಕಾಸರಗೋಡು ಜಿಲ್ಲೆಯ ಕೆಲವು ಗ್ರಾಮಗಳ ಹೆಸರನ್ನು ಏಕಾಏಕಿ ಬದಲಾವಣೆ ಮಾಡಿದ ವಿಷಯವೂ ತುಂಬಾ ಆತಂಕಕಾರಿಯಾಗಿದೆ.

ಮಹಾರಾಷ್ಟ್ರವು ಪದೇ ಪದೆ ರಾಜ್ಯದಲ್ಲಿನ 865 ಗ್ರಾಮಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹುನ್ನಾರ ಮಾಡುತ್ತಲೇ ಇದೆ. ಮಹಾರಾಷ್ಟ್ರದ ಈ ಪುಂಡಾಟಕ್ಕೆ ತಡೆ ತರಬೇಕಾದ ಅಗತ್ಯತೆ ಇದ್ದು, ಸರಕಾರ ಸದಾ ಎಚ್ಚರದಿಂದ ಇರಬೇಕಾಗಿದೆ.

ಗೋವಾದಲ್ಲಿ ಸಮುದ್ರ ತೀರದಲ್ಲಿದ್ದ ಸಾವಿರಾರು ಕನ್ನಡಿಗರ ವಸತಿ ಪ್ರದೇಶ ನಾಶ ಮಾಡಿ ಗೋವಾ ಸಮಗ್ರ ನಿರ್ಮಾಣದಲ್ಲಿ ತಮ್ಮ ಶ್ರಮವನ್ನು ಧಾರೆ ಎರದಿದ್ದ ಅಲ್ಲಿನ ಕನ್ನಡಿಗರನ್ನು ನಿರ್ವಸಿತರನ್ನಾಗಿ ಮಾಡಿರುವ ಸಮಸ್ಯೆ ಇನ್ನು ಜೀವಂತವಾಗಿದೆ. ಅವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ಅಲ್ಲಿನ ಸರಕಾರದಿಂದ ಆಗಬೇಕಿದೆ.

ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಕನ್ನಡಿಗರಿಗೆ ಅಂಥ ಭಾಷಾ ಅಭದ್ರತೆ ಕಾಣಿಸದಿದ್ದರೂ, ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದೆ. ಈ ಬಗ್ಗೆ ಅಲ್ಲಿನ ಸರಕಾರಗಳು ಗಮನಹರಿಸಬೇಕಾಗಿದೆ.

Advertisement

ಮಹಾರಾಷ್ಟ್ರದ ಮುಂಬಯಿಯಲ್ಲಿ ಹಾಗೂ ಗೋವಾದಲ್ಲಿ ಅನೇಕ ಕನ್ನಡ ಸಂಘಗಳು ಕನ್ನಡ ಪರ ಕಾರ್ಯಕ್ರಮಗಳನ್ನು ಅತ್ಯಂತ ಬೃಹತ್‌ ಮಟ್ಟದಲ್ಲಿ ಆಯೋಜಿಸುತ್ತಾ ಅಲ್ಲಿನ ಕನ್ನಡಿಗರ ಸಾಂಸ್ಕೃತಿಕ  ಹಾಗೂ ಸಾಹಿತ್ಯ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಾ ಬರುತ್ತಿರುವುದು ತುಂಬಾ ಸ್ವಾಗತಾರ್ಹ ವಿಷಯ ವಾಗಿದೆ.

ಕರ್ನಾಟಕ ಹೆಸರು ನಾಮಕರಣವಾದ ಈ ಸಂತಸದ ಸಂಭ್ರಮದಲ್ಲಿ ಆರು ರಾಜ್ಯಗಳ ಗಡಿ ನಾಡ ಕನ್ನಡಿಗರ ಒಂದು ಬೃಹತ್‌ ಸಮಾವೇಶ ವನ್ನು ಸರಕಾರ ಆಯೋಜಿಸುವುದು ಸೂಕ್ತ ವಾಗಿದೆ ಹಾಗೂ ಗಡಿನಾಡ ಕನ್ನಡದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆರು ತಿಂಗಳುಗಳಿಗೊಮ್ಮೆ ಸಮಾಲೋಚನ ಸಭೆಯನ್ನು ನಡೆಸುವುದು ಸೂಕ್ತವಾಗಿರುತ್ತದೆ.

ಡಾ| ಸಿ. ಸೋಮಶೇಖರ, ಮಾಜಿ ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ.

 

Advertisement

Udayavani is now on Telegram. Click here to join our channel and stay updated with the latest news.

Next