Advertisement

ತಿರುಮಲದಲ್ಲಿ ರಾಜ್ಯದ ಭಕ್ತರಿಗೆ ಇನ್ನಷ್ಟು ಸೌಕರ್ಯ

10:06 AM Nov 01, 2019 | mahesh |

ಬೆಂಗಳೂರು: ತಿರುಮಲದಲ್ಲಿ ಹಾಲಿ ಇರುವ ಕರ್ನಾಟಕ ರಾಜ್ಯ ಛತ್ರದ ಸ್ಥಳದಲ್ಲಿ ಹೊಸ ವಸತಿಗೃಹ ನಿರ್ಮಾಣ ಸಹಿತ ಅಭಿವೃದ್ಧಿ ಕಾರ್ಯಗಳಿಗೆ ನ. 30ರೊಳಗೆ ಚಾಲನೆ ನೀಡಲು ಮುಜರಾಯಿ ಇಲಾಖೆ ಸಿದ್ಧತೆ ನಡೆಸಿದೆ.

Advertisement

ಬಹಳ ಸಮಯದಿಂದ ನನೆಗುದಿಗೆ ಬಿದ್ದಿದ್ದ ತಿರು ಮಲದ 7.5 ಎಕರೆ ಜಾಗದಲ್ಲಿ ವಸತಿಗೃಹ ನಿರ್ಮಾಣ ಸಂಬಂಧದ ವಿವಾದ ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ಈಚೆಗಷ್ಟೇ ಇತ್ಯರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಈ ಸ್ಥಳದಲ್ಲಿ ಹೊಸ ಛತ್ರ ಸಹಿತ ಹಲವು ಕಾಮಗಾರಿ ಕೈಗೊಳ್ಳಲು ಇನ್ನು ಅಡ್ಡಿ ಇಲ್ಲ. ಉದ್ದೇಶಿತ ಅಭಿವೃದ್ಧಿ ಯೋಜನೆಗಳನ್ನು ಜಾರಿ ಗೊಳಿ ಸಲು ಅನುಕೂಲವಾಗುವಂತೆ ರೇಷ್ಮೆ ಅಭಿವೃದ್ಧಿ ಆಯುಕ್ತೆ ರೋಹಿಣಿ ಸಿಂಧೂರಿ ಮತ್ತು ಸಕಾಲ ಮಿಷನ್‌ನ ಹೆಚ್ಚುವರಿ ನಿರ್ದೇಶಕ ವರಪ್ರಸಾದ ರೆಡ್ಡಿ ಅವರನ್ನು ಯೋಜನಾ ಅಧಿಕಾರಿಗಳನ್ನಾಗಿ ಇಲಾಖೆ ನೇಮಿಸಿದೆ.

ತಿರುಮಲ- ತಿರುಪತಿ ಕರ್ನಾಟಕ ಭವನ ಮತ್ತು ಕರ್ನಾಟಕ ರಾಜ್ಯ ಛತ್ರ ಅಭಿವೃದ್ಧಿ ಕಾಮಗಾರಿ ಕುರಿತಂತೆ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ವಿಶೇಷ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ತಿರುಮಲಕ್ಕೆ ನಿತ್ಯ ತೆರಳುವ ಭಕ್ತರಲ್ಲಿ ಶೇ.40ರಷ್ಟು ಮಂದಿ ರಾಜ್ಯದವರಾಗಿದ್ದು, ಅವರ ಅನುಕೂಲಕ್ಕಾಗಿ 70 ಕೊಠಡಿಗಳ ಕಟ್ಟಡಕ್ಕೆ ಬದಲಾಗಿ 150ರಿಂದ 200 ಕೊಠಡಿಗಳ ಕಟ್ಟಡ ಯಾ ವಿಲ್ಲಾ ನಿರ್ಮಿಸುವ ಬಗ್ಗೆ ಸುದೀರ್ಘ‌ ಚರ್ಚೆಯಾಗಿದೆ.

4 ಕೋಟಿ ರೂ. ಬಿಡುಗಡೆ
ಕಾಮಗಾರಿಗೆ ಸರಕಾರ ಈಗಾಗಲೇ 4 ಕೋಟಿ ರೂ. ಬಿಡುಗಡೆ ಮಾಡಿದೆ. ಹಾಲಿ ಪ್ರವಾಸಿ ಸೌಧದ ಕೊಠಡಿಗಳಲ್ಲಿ ನೀರು ಸೋರಿಕೆ ತಪ್ಪಿಸಲು ಎರಡನೇ ಮಹಡಿಯಲ್ಲಿ ಪಾಲಿ ಕಾಬೊìನೇಟ್‌ ಮೇಲ್ಛಾವಣಿ ನಿರ್ಮಾಣ, ಭಕ್ತರಿಗೆ ಡಾರ್ಮೆಟರಿ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆಯ ಕೋಲಾರ ವಿಭಾಗದಿಂದ ಒದಗಿಸುವುದು, ತಿರುಪತಿಯ ಗಾಂಧಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಛತ್ರಕ್ಕೆ ಸೇರಿದ 46.5 ಸೆಂಟ್ಸ್‌ ಜಾಗದಲ್ಲಿ ಹೊಸ ವಾಣಿಜ್ಯ ಮಳಿಗೆ, ಕೊಠಡಿಗಳನ್ನು ಒಳಗೊಂಡ ಸಂಕೀರ್ಣ ನಿರ್ಮಿಸಲು ತೀರ್ಮಾನಿಸಲಾಗಿದೆ. ರಾಜ್ಯದ ಭಕ್ತರಿಗೆ ಕೊಠಡಿಗಳನ್ನು ಆದ್ಯತೆ ಮೇರೆಗೆ ನೀಡಬೇಕು. ಕೊಠಡಿಗಳನ್ನು ಆನ್‌ಲೈನ್‌ ಮೂಲಕವೇ ಕಾಯ್ದಿರಿಸಿ ಆಧಾರ್‌ ಕಾರ್ಡ್‌, ಇತರ ಅಧಿಕೃತ ಗುರುತಿನ ಚೀಟಿ ಪಡೆದು ಪರಿಶೀಲಿಸಿ ದಾಖಲಿಸಿಕೊಂಡು ಕೊಠಡಿ ಹಂಚಿಕೆ ವ್ಯವಸ್ಥೆ ಕಲ್ಪಿಸಬೇಕು. ಸ್ವತ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಛತ್ರದ ವಿಶೇಷಾಧಿಕಾರಿಗಳಿಗೆ ಸೂಚಿಸಲಾಗಿದೆ.

Advertisement

ಮಾಸ್ಟರ್‌ ಪ್ಲಾನ್‌ ಸಲ್ಲಿಸಲು ಸೂಚನೆ
ನೂತನ ಅತಿಥಿ ಯಾ ವಸತಿಗೃಹ, ವಿಐಪಿ ಬ್ಲಾಕ್‌, ಡಾರ್ಮೆಟರಿ ಸಹಿತ ಕಟ್ಟಡ, ಹೊಸ ಕಲ್ಯಾಣ ಮಂಟಪ ನಿರ್ಮಾಣ, ವಸಂತ ಮಂಟಪ, ಉದ್ಯಾನ ಮತ್ತು ಇತರ ಅಭಿವೃದ್ಧಿ ಕಾಮಗಾರಿ ಒಳಗೊಂಡ ಮಹಾ ನಕ್ಷೆಯನ್ನು (ಮಾಸ್ಟರ್‌ ಪ್ಲಾನ್‌) ವಾಸ್ತುಶಿಲ್ಪಿಗಳಿಂದ ನ.30ರೊಳಗೆ ಪಡೆ ಯುವುದು. ಬಳಿಕ ಅದನ್ನು ಪರಿಶೀಲಿಸಿ ಅಂತಿಮ ಗೊಳಿ ಸಿದ ಅನಂತರ ತಿರುಮಲ- ತಿರುಪತಿ ದೇವ ಸ್ಥಾನದ ಪ್ರಾಧಿಕಾರದಿಂದ ಅನುಮತಿ ಪಡೆದು ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸ ಲಾಗಿದೆ. ಜತೆಗೆ ರಾಜ್ಯ ಛತ್ರದ ಆವರಣದಲ್ಲಿರುವ ಕಲ್ಯಾಣಿಯ ಅಭಿವೃದ್ಧಿಯನ್ನು ಮಾಸ್ಟರ್‌ ಪ್ಲಾನ್‌ನಲ್ಲಿ ಸೇರಿಸಲು ತೀರ್ಮಾನಿಸಲಾಗಿದೆ.

ರಾಜ್ಯದ ಯಾತ್ರಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಲು ಪೂರಕವಾಗಿ ಪೂರ್ಣ ಪ್ರಮಾಣದ ಯೋಜನೆ ಸಿದ್ಧಪಡಿಸಲಾಗುವುದು. ಮುಂದೆ ಕರ್ನಾಟಕದ ಯಾತ್ರಾರ್ಥಿಗಳನ್ನು ತಿರುಮಲದ ವೆಂಕಟೇಶ್ವರನೇ ಕೈ ಬೀಸಿ ಕರೆಯುವಂತಹ ವಾತಾವರಣ ನಿರ್ಮಿಸಲಾಗುವುದು.
-ಕೋಟ ಶ್ರೀನಿವಾಸ ಪೂಜಾರಿ
ಮುಜರಾಯಿ ಸಚಿವ

–  ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next