Advertisement

ಹೆಚ್ಚಿನ ಉದ್ಯೋಗಾವಕಾಶ ಕೋರ್ಸ್‌ ಆರಂಭ

04:09 PM Apr 23, 2019 | pallavi |

ಕಲಬುರಗಿ: ಶೈಕ್ಷಣಿಕ ಗುಣಮಟ್ಟತೆ ಹಾಗೂ ವಿಶ್ವಾಸದೊಂದಿಗೆ ಆರಂಭಗೊಂಡಿರುವ ಶರಣಬಸವ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಹೆಚ್ಚಿನ ಕೋರ್ಸ್‌ಗಳ ಆರಂಭ ಕಾರ್ಯ ನಡೆದಿದೆ ಎಂದು ವಿವಿಯ ಕುಲಾಧಿಪತಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಶರಣಬಸವಪ್ಪ ಅಪ್ಪ ತಿಳಿಸಿದರು.

Advertisement

ಮಹಾದಾಸೋಹಿ ಸಂಸ್ಥಾನದಲ್ಲಿ ಶರಣಬಸವ ವಿವಿಯ 2019-20ನೇ ಸಾಲಿನ ಮಾಹಿತಿ ಕೈಪಿಡಿ (ಪ್ರಾಸ್ಪೆಕ್ಟಸ್‌) ಬಿಡುಗಡೆಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರೀ ಪದವಿ ನೀಡುವುದು ಮುಖ್ಯವಲ್ಲ. ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಮಾರ್ಗದರ್ಶನ ನೀಡುವಂತಹ ಕೋರ್ಸ್‌ಗಳ ಹುಡುಗಾಟದಲ್ಲಿ ವಿವಿ ಕಾರ್ಯದಲ್ಲಿ ಮಗ್ನವಾಗಿದೆ ಎಂದರು.

ಶರಣಬಸವ ವಿವಿ ಆರಂಭಗೊಂಡ ಎರಡು ವರ್ಷದೊಳಗೆ 2500 ವಿದ್ಯಾರ್ಥಿಗಳನ್ನು ವಿವಿ ಹೊಂದಿರುವುದು ಗುಣಮಟ್ಟತೆಯನ್ನು ನಿರೂಪಿಸುತ್ತದೆ. ಸುಮಾರು 2 ಕೋ.ರೂ ಅಧಿಕ ವೆಚ್ಚದಲ್ಲಿ ವಿವಿಯ ಎಲ್ಲ ವಿಭಾಗಗಳ 100ಕ್ಕೂ ಹೆಚ್ಚು ಸ್ಮಾರ್ಟ್‌ ಕ್ಲಾಸ್‌ಗಳನ್ನು ಪ್ರಾರಂಭಿಸಲಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ ಹೊಂದಿರುವುದು ದಕ್ಷಿಣ ಭಾರತದಲ್ಲಿಯೇ ಮಾದರಿಯಾಗಿದೆಯಲ್ಲದೇ ಸಂಪೂರ್ಣ ಹವಾನಿಯಂತ್ರಿತ ಸೌಲಭ್ಯ ಹೊಂದಲಾಗಿದೆ ಎಂದು ಡಾ| ಅಪ್ಪ ವಿವರಣೆ ನೀಡಿದರು.

ಹೊಸ ಕೋರ್ಸ್‌: ಪ್ರಸಕ್ತ 2019-20ನೇ ಸಾಲಿನಿಂದ ಆಸ್ಪತ್ರೆ ಮ್ಯಾನೇಜ್‌ಮೆಂಟ್ ಹಾಗೂ ಈ ಭಾಗದ ಕೃಷಿ ಆಧಾರಿತ ಡಿಪ್ಲೋಮಾ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುತ್ತಿದೆ. ತೊಗರಿ, ಜೋಳ ಹಾಗೂ ಹತ್ತಿ ಕೃಷಿ ಕುರಿತಾಗಿ ಏಳನೇ ಉತ್ತೀರ್ಣ ಹಾಗೂ 10ನೇ ಪಾಸಾದ ಜತೆಗೆ ಇತರ ಪದವಿ ಹೊಂದಿರುವ ಕೃಷಿಯಲ್ಲಿ ತೊಡಗಿದವರಿಗೆ ಅವಕಾಶ ಕಲ್ಪಿಸಲು ಕೃಷಿ ಕೋರ್ಸ್‌ ಪ್ರಾರಂಭಿಸಲು ಮುಂದಾಗಲಾಗಿದೆ. ಕಲಬುರಗಿಯ ತೊಗರಿ ದೇಶದಾದ್ಯಂತ ಪೂರೈಕೆಯಾಗುತ್ತದೆ. ಇದನ್ನು ಇನ್ನೂ ಆರ್ಥಿಕಾಭಿವೃದ್ಧಿಗೆ ಪೂರಕವಾಗಲು ಕೋರ್ಸ್‌ ಸಹಕಾರಿಯಾಗುವುದಲ್ಲದೇ ಕೃಷಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಜತೆಗೆ ಕೃಷಿಯಲ್ಲಿ ಯುವಕರು ಆಕರ್ಷಿಸಲು ಕೋರ್ಸ್‌ ಉತ್ತೇಜನಕಾರಿಯಾಗಲಿದೆ ಎಂದು ತಿಳಿಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿಂದು 30 ಸಾವಿರ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಬದಲಾದ ಶೈಕ್ಷಣಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಒಂದೂ ಪೀಠೊಪಕರಣ ಕೊರತೆಯಾಗದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು.

Advertisement

ವಿಶ್ವ ವಿದ್ಯಾಲಯದ ಕುಲಪತಿ ಡಾ| ನಿರಂಜನ್‌ ನಿಷ್ಠಿ ಮಾತನಾಡಿ, ಈ (ಪ್ರಾಸ್ಪಕ್ಟಸ್‌) ಮಾಹಿತಿ ಕೈಪಿಡಿಯಲ್ಲಿ ವಿಶ್ವವಿದ್ಯಾಲಯದ ಶೈಕ್ಷಣಿಕ ಗುರಿ ಉದ್ದೇಶ ಮತ್ತು ಶೈಕ್ಷಣಿಕ ತತ್ವಜ್ಞಾನ ಬಗ್ಗೆ ವಿವರಿಸಲಾಗಿದೆ. ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿರುವುದು ಸಂಸ್ಥೆಯ ಹೆಮ್ಮೆಯ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ವಿವಿಯ ಕುಲಸಚಿವ ಡಾ| ಅನಿಲಕುಮಾರ ಬಿಡವೆ ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರಿ ವಂದಿಸಿದರು. ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಸಮ ಕುಲಪತಿ ಡಾ| ವಿ.ಡಿ ಮೈತ್ರಿ, ವಿವಿ ಡೀನ್‌ ಡಾ| ಲಕ್ಷ್ಮೀ ಮಾಕಾ, ಡಾ| ಶಿವದತ್‌ ಹೊನ್ನಳ್ಳಿ, ಪತ್ರಿಕೋದ್ಯಮ ವಿಭಾಗದ ಡೀನ್‌ ಟಿ.ವಿ. ಶಿವಾನಂದನ್‌, ವಿವಿಧ ವಿಭಾದ ಮುಖ್ಯಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಪಡೆದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ವಿವಿಧ ಕೋರ್ಸ್‌ಗಳಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ ನೂರಕ್ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next