Advertisement

ಭದ್ರತೆ ದೃಷ್ಟಿಯಿಂದ ನಗರಕ್ಕೆ ಮತ್ತಷ್ಟು ಕೆಮರಾ ಕಣ್ಗಾವಲು!

11:14 PM May 16, 2019 | Team Udayavani |

ಮಹಾನಗರ: ಮಂಗಳಾ ದೇವಿ ಬಳಿಯ ಅಮರ್‌ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ ಅವರ ಕೊಲೆ ರಹಸ್ಯವನ್ನು ಭೇದಿಸಲು ಪೊಲೀಸರಿಗೆ ನೆರವಾಗಿದ್ದು ನಗರದ ಅಲ್ಲಲ್ಲಿ ಅಳವಡಿಸಿರುವ ಸಿಸಿ ಕೆಮರಾಗಳು.ಈ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಇನ್ನಷ್ಟು ಉತ್ತಮ ಗುಣಮಟ್ಟದ ಸಿಸಿ ಕೆಮರಾ ಅಳವಡಿಸುವ ಕುರಿತು ಪೊಲೀಸ್‌ ಇಲಾಖೆ ಚಿಂತನೆ ನಡೆಸಿದೆ.

Advertisement

ಮಂಗಳೂರು ನಗರ ವ್ಯಾಪ್ತಿ ಬೆಳೆಯುತ್ತಿದ್ದು, ಇಲ್ಲಿನ ಜನಸಂದಣಿ, ವಾಹನ ದಟ್ಟಣೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಜತೆಗೆ ಉದ್ಯೋಗಕ್ಕಾಗಿಯೂ ಬೇರೆ ರಾಜ್ಯಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಬಂದು ವಾಸ್ತವ್ಯ ಹೂಡುತ್ತಿದ್ದಾರೆ. ಇದಲ್ಲದೆ ವಿವಿಧ ಕೆಲಸ ಕಾರ್ಯಗಳಿಗಾಗಿ ದಿನನಿತ್ಯ ಸಾವಿರಾರು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಇವರೆಲ್ಲರ ಮೇಲೆ ನಿಗಾ ವಹಿಸಲು ಸಿಸಿ ಕೆಮರಾ ಸಾಕಷ್ಟು ಉಪಯೋಗವಾಗುತ್ತಿದೆ. ಸಿಸಿ ಕೆಮರಾ ಇರುವ ಜಾಗದಲ್ಲಿ ದೃಶ್ಯ ಸೆರೆ ಹಿಡಿಯಲು ಅಡೆತಡೆಗಳಿರುವ ಮರದ ಕೊಂಬೆಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ.

ಇಲಾಖೆ ಜತೆಗೆ ಉದ್ಯಮಿಗಳು- ವ್ಯಾಪಾರಸ್ಥರು ಕೂಡ ತಮ್ಮ ಕಟ್ಟಡ- ಮನೆಗಳ ಮುಂದೆ ಸಿಸಿ ಕೆಮರಾಗಳನ್ನು ಅಳವಡಿಸುವುದರಿಂದ ಅಪರಾಧ ಕೃತ್ಯ ಎಸಗುವವರನ್ನು ಮಟ್ಟ ಹಾಕುವುದಕ್ಕೆ ಸಾಧ್ಯವಿದೆ.

ನಿಯಮ ಉಲ್ಲಂಘಿಸಿದರೂ ಕ್ರಮ
ಪ್ರಮುಖ ಜಂಕ್ಷನ್‌ಗಳಾದ ಪಿವಿಎಸ್‌, ಬಂಟ್ಸ್‌ ಹಾಸ್ಟೆಲ್‌, ಜ್ಯೋತಿ ವೃತ್ತ,ಹಂಪನಕಟ್ಟೆ,ಕ್ಲಾಕ್‌ಟವರ್‌ ವೃತ್ತ, ಸ್ಟೇಟ್‌ಬ್ಯಾಂಕ್‌, ಪಂಪ್‌ವೆಲ್‌, ಮಲ್ಲಿಕಟ್ಟೆ, ಕಂಕನಾಡಿ, ಲಾಲ್‌ಬಾಗ್‌,ಬಿಜೈ,ಕದ್ರಿ, ನಂತೂರು, ಹ್ಯಾಮಿಲ್ಟನ್‌ ವೃತ್ತ ಸಹಿತ ವಿವಿಧೆಡೆ ಸುಮಾರು 100 ಸಿಸಿ ಕೆಮರಾಗಳು ಕಾರ್ಯನಿರ್ವಹಿಸುತ್ತಿದೆ.

ಪ್ರಮುಖ ಜಂಕ್ಷನ್‌ಗಳಲ್ಲಿ ನಾಲ್ಕರಿಂದ ಐದು ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಈ ಕೆಮರಾಗಳ ಮೂಲಕ ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ನಿಗಾ ವಹಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಅಪರಾಧ ಕೃತ್ಯಗಳು ನಡೆದಾಗ ಆರೋಪಿಗಳನ್ನು ಪತ್ತೆ ಮಾಡುವುದಕ್ಕೂ ಈ ಕೆಮರಾಗಳು ನೆರವಾಗುತ್ತಿವೆ.

Advertisement

ಶ್ರೀಮತಿ ಶೆಟ್ಟಿ ಪ್ರಕರಣ
ಶ್ರೀಮತಿ ಶೆಟ್ಟಿ ಪ್ರಕರಣದಲ್ಲಿ ಪೊಲೀಸರಿಗೆ ಆರೋಪಿಗಳ ಸೆರೆಗೆ ನೆರವಾಗಿದ್ದು, ಸಿಸಿ ಕೆಮರಾ ದೃಶ್ಯಾವಳಿಗಳು. ಆಕೆಯನ್ನು ಕೊಲೆ ಮಾಡಿದ ಬಳಿಕ ಕೆಪಿಟಿ ಬಳಿ ರಸ್ತೆಯಲ್ಲಿಯೇ ರುಂಡವನ್ನು ಗೋಣಿ ಚೀಲದಲ್ಲಿ ಕಟ್ಟಿ ತಂದು ರಾತ್ರಿ ವೇಳೆ ಎಸೆದು ಹೋಗಿದ್ದ ದೃಶ್ಯ ಹತ್ತಿರದ ಪೆಟ್ರೋಲ್‌ ಬಂಕ್‌ನ ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು.

ಅದೇ ರೀತಿ ಆಕೆ ತನ್ನ ಮನೆಯಿಂದ ಬೆಳಗ್ಗೆ ಅಂಗಡಿಗೆ ಹೊರಟ ಅನಂತರದ ಹಲವು ಕಡೆಯ ದೃಶ್ಯಗಳೂ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಅದೇ ಸುಳಿವಿನ ಬೆನ್ನತ್ತಿದ್ದ ಪೊಲೀಸರಿಗೆ ಕೊಲೆ ನಡೆದ ನಾಲ್ಕು ದಿನದೊಳಗೆ ಆರೋಪಿಗಳನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಾಗಿತ್ತು.

ಕರಪತ್ರ ಹಂಚಿ ಜಾಗೃತಿ
ಸಿಸಿ ಕೆಮರಾ ಅಳವಡಿಸುವಂತೆ ಮತ್ತು ಅದರ ಪ್ರಯೋಜನಗಳ ಕುರಿತಾಗಿ ಕರಪತ್ರ ಹಂಚಿ ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿ ನಡೆಸಲು ಇಲಾಖೆ ಚಿಂತಿಸಿದೆ.

ಕಡ್ಡಾಯ ನಿಯಮ
ಕರ್ನಾಟಕ ರಾಜ್ಯ ಸಾರ್ವಜನಿಕರ ಸುರಕ್ಷಾ ಕಾಯ್ದೆ ಅನ್ವಯ ನಗರದ ಎಲ್ಲ ವಾಣಿಜ್ಯ ಕಟ್ಟಡಗಳು, ಬಸ್‌ ನಿಲ್ದಾಣ, ಶಿಕ್ಷಣ ಸಂಸ್ಥೆಗಳು, ಬಹುಮಹಡಿ ಕಟ್ಟಡ, ವಸತಿ ಸಮುಚ್ಚಯ, ಕಚೇರಿಗಳಲ್ಲಿ ಸಿಸಿ ಕೆಮರಾ ಅಳವಡಿಸಬೇಕೆಂಬ ನಿಯಮವಿದೆ. ಸಾರ್ವಜನಿಕ ಸೇವೆ ಒದಗಿಸುವ ಅಥವಾ ಹೆಚ್ಚು ಜನ ಸೇರುವ ಎಲ್ಲ ಸರಕಾರಿ ಮತ್ತು ಖಾಸಗಿ ಸಂಘ ಸಂಸ್ಥೆಗಳು, ಅಂಗಡಿ-ಮುಂಗಟ್ಟು ಕಟ್ಟಡಗಳಲ್ಲಿ ಸಿಸಿ ಕೆಮರಾ ಕಡ್ಡಾಯವಾಗಿ ಅಳವಡಿಸಬೇಕು ಎಂದು ರಾಜ್ಯ ಸರಕಾರ ಈ ಹಿಂದೆಯೇ ಸೂಚಿಸಿತ್ತು.

ಒಂದು ವೇಳೆ ಸಿಸಿ ಕೆಮರಾ ಅಳವಡಿಸದಿದ್ದರೆ ಪೊಲೀಸರು ಅಂತಹ ಕಟ್ಟಡದ ಮಾಲಕರಿಗೆ ನೋಟಿಸ್‌ ನೀಡುವುದು; ಬಳಿಕ ದಂಡ ವಿಧಿಸಲು ಕೂಡ ಅವಕಾಶವಿದೆ. ದಂಡ ಪಾವತಿ ಮಾಡದಿದ್ದರೆ ಸ್ಥಳೀಯಾಡಳಿತಕ್ಕೆ ಸೂಚಿಸಿ ಕಟ್ಟಡದ ಪರವಾನಿಗೆ ರದ್ದು ಮಾಡಬಹುದಾಗಿದೆ.

ನಗರದಲ್ಲಿ ಸದ್ಯ ಮಾಲಕರೇ ಅಳವಡಿಸಿಕೊಂಡಿರುವ ಒಂದು ಸಾವಿರಕ್ಕೂ ಅಧಿಕ ಸಿಸಿ ಕೆಮರಾಗಳಿವೆ. ನಗರದ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಜನರು ಈ ನಿಯಮವನ್ನು ಪಾಲಿಸಿ ಇನ್ನಷ್ಟು ಕಡೆಗಳಲ್ಲಿ ಸಿಸಿ ಕೆಮರಾಗಳನ್ನು ಸ್ವಯಂಪ್ರೇರಿತರಾಗಿ ಅಳವಡಿಸಿಕೊಂಡರೆ ಪೊಲೀಸರಿಗೂ ಅನುಕೂಲವಾಗುತ್ತದೆ.ಈ ನಡುವೆ ನಿಯಮ ಪಾಲಿಸದವರ ವಿರುದ್ಧ ಕಾನೂನು ಪ್ರಕಾರ ಕಠಿನ ಕ್ರಮ ಕೈಗೊಳ್ಳಲು ಕೂಡ ಪೊಲೀಸ್‌ ಇಲಾಖೆ ಮುಂದಾಗಿದೆ.

ಹದ್ದಿನ ಕಣ್ಣಿಟ್ಟಿರುವ ಸಿಸಿ ಕೆಮರಾಗಳು
ಜನರ ಸುರಕ್ಷತೆಯ ದೃಷ್ಟಿಯಿಂದ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಸಿಸಿ ಕೆಮರಾ ಅಳವಡಿಸಿರುವುದರ ವಾಸ್ತವಾಂಶವನ್ನು ಪರಿಶೀಲಿಸುವ ಪ್ರಯತ್ನವನ್ನು “ಸುದಿನ’ ತಂಡ ಗುರುವಾರ ಮಾಡಿದೆ. ನಗರದ ಹೆಚ್ಚಿನ ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸಿರುವುದು ಕಂಡುಬಂದಿದೆ. ಕೆಲವೆಡೆ ಐದಾರು ಸಿಸಿ ಕೆಮರಾಗಳನ್ನು ಅಳವಡಿಸಿ ಎಲ್ಲ ಕೋನಗಳಿಂದಲೂ ಸಮಗ್ರ ಚಿತ್ರಣ ಸಿಗುವಂತೆ ನೋಡಿಕೊಳ್ಳಲಾಗಿದೆ. ಆದರೆ ಈ ಕೆಮರಾಗಳು ಯಾವ ಸ್ಥಿತಿಯಲ್ಲಿವೆ, ಉತ್ತಮ ಗುಣಮಟ್ಟವನ್ನು ಹೊಂದಿವೆಯೇ, ರಾತ್ರಿ ವೇಳೆ ಕೂಡ ಪರಿಣಾಮಕಾರಿಯಾಗಿ ದೃಶ್ಯಗಳನ್ನು ಸೆರೆ ಹಿಡಿಯುತ್ತದೆಯೇ ಎಂಬುದನ್ನು ಪೊಲೀಸ್‌ ಇಲಾಖೆ ಕಾಲ ಕಾಲಕ್ಕೆ ಪರಿಶೀಲಿಸುವುದು ಅಗತ್ಯ. ಕೆಲವಡೆ ಅಳವಡಿಸಿರುವ ಸಿಸಿ ಕೆಮರಾಗಳು ಸುಸ್ಥಿತಿಯಲ್ಲಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ಈ ಬಗ್ಗೆ ಇಲಾಖೆ ಗಮನಹರಿಸಬೇಕಿದೆ.

ಸಚಿವರು ತಾಕೀತು ಮಾಡಿದ್ದರು
ನಗರವನ್ನು ಶಾಂತಿಪ್ರಿಯ ನಗರವನ್ನಾಗಿಸಬೇಕು. ಜತೆಗೆ ಪುಂಡಾಟಿಕೆ, ಗೂಂಡಾಗಿರಿ ಸಹಿತ ಅಪರಾಧ ನಡೆಸುವವರ ವಿರುದ್ಧ ನಿಗಾ ಇಡಬೇಕು ಎಂಬ ನಿಟ್ಟಿನಲ್ಲಿ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸಿಸಿ ಕೆಮರಾ ಅಳವಡಿಸಬೇಕೆಂದು ಕಳೆದ ವರ್ಷ ಪೊಲೀಸ್‌ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಅಂದಿನ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ತಾಕೀತು ಮಾಡಿದ್ದರು.

ಮತ್ತಷ್ಟು ಕಡೆ ಸಿಸಿ ಕೆಮರಾ
ನಗರದ ಭದ್ರತೆಯ ದೃಷ್ಟಿಯಿಂದ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಈಗಾಗಲೇ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಮತ್ತಷ್ಟು ಆಯಕಟ್ಟಿನ ಪ್ರದೇಶಗಳಲ್ಲಿಯೂ ಸಿಸಿ ಕೆಮರಾ ಅಳವಡಿಸುತ್ತೇವೆ.
 - ಸಂದೀಪ್‌ ಪಾಟೀಲ್‌,
ನಗರ ಪೊಲೀಸ್‌ ಆಯುಕ್ತ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next