Advertisement

ಸೇನೆಯಲ್ಲಿ ಮೇಳೈಸಲಿದೆ ಭಾರತೀಯತೆ

11:55 PM Sep 20, 2022 | Team Udayavani |

ಹೊಸದಿಲ್ಲಿ: ಭಾರತೀಯ ಸೇನೆಯ 3 ವಿಭಾಗಗಳಲ್ಲಿ “ಭಾರತೀಯತೆ’ ಅಥವಾ ಆತ್ಮನಿರ್ಭರತೆಯ ಜಾರಿಗೆ ಕೇಂದ್ರ ಸರಕಾರ ನಿರ್ಧರಿಸಿದೆ.

Advertisement

ಅಂದರೆ, ಈಗಲೂ ಪಾಲನೆಯಲ್ಲಿರುವ  ಬ್ರಿಟಿಷರ ಕಾಲದ ಪದ್ಧತಿ ಗಳು, ನಿಯಮಗಳ ಬದಲಾವಣೆಗೆ ಸರಕಾರ ಮುಂದಾಗಿದೆ. ಈಗಾಗಲೇ ಭಾರತೀಯ ನೌಕಾ ಪಡೆಯಲ್ಲಿದ್ದ ಬ್ರಿಟಿಷರ ಕಾಲದ ಸೈಂಟ್‌ ಜಾರ್ಜ್‌ ಕ್ರಾಸ್‌ ಒಳಗೊಂಡ ನೌಕಾ ಧ್ವಜವನ್ನು ತೆಗೆದು, ಶಿವಾಜಿ ಮಹಾರಾಜರ ಕಾಲದ ಸಂಕೇತವನ್ನು ಹಾಕಿ ಹೊಸ ಧ್ವಜ ರೂಪಿಸಲಾಗಿದೆ. ಇದೇ ಮಾದರಿಯಲ್ಲೇ ಇನ್ನೂ 75ಕ್ಕೂ ಹೆಚ್ಚು ಕಾನೂನುಗಳು, ಸಂಪ್ರದಾಯಗಳನ್ನು ಕೈ ಬಿಡಲಾಗುತ್ತಿದೆ.

ಈ ಸಂಬಂಧ ಬುಧವಾರ ಸೇನೆಯ ಅಡ್ಜಟೆಂಟ್‌ ಜನರಲ್‌ ಲೆ| ಜ| ಸಿ ಬಾನ್ಸಿ ಪೊನ್ನಪ್ಪ ಅವರ ನೇತೃತ್ವದಲ್ಲಿ ಸೇನೆಯ ಆಂತರಿಕ ಸಭೆ ನಡೆಯಲಿದ್ದು, ಇದರಲ್ಲಿ ಈ ವಿಷಯಗಳು ಚರ್ಚೆಯಾಗಲಿವೆ.

ವಿಶೇಷವೆಂದರೆ, ಎರಡು ವರ್ಷಗಳಿಂದಲೂ ಈ ಪರಿಷ್ಕರಣೆ ನಡೆಯುತ್ತಿದ್ದು, ಬ್ರಿಟಿಷರ ಕಾಲದ ಒಂದೊಂದೇ ಪದ್ಧತಿಗಳನ್ನು ಬದಲಾಯಿಸಲಾಗುತ್ತಿದೆ. ಮುಂದೆಯೂ ಕೆಲವು ಬದಲಾವಣೆಗಳಿಗೆ ಸೇನೆ ಮುಂದಾಗಿದೆ.

ಮೋದಿ ನೀಡಿದ್ದ ಸಲಹೆ:

Advertisement

ಕಳೆದ ವರ್ಷದ ಮಾರ್ಚ್‌ನಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಸಂಯೋಜಿತ ಕಮಾಂಡರ್‌ಗಳ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಮಿಲಿಟರಿ ಉಪಕರಣಗಳ ದೇಶೀಕರಣ ಮತ್ತು ಸಶಸ್ತ್ರ ಪಡೆಗಳು ಅನುಸರಿಸುವ ಪದ್ಧತಿ, ಕಾರ್ಯವಿಧಾನಗಳನ್ನು ದೇಸೀತನಕ್ಕೆ ಒಗ್ಗಿಸುವ ಕುರಿತು ಸಲಹೆ ನೀಡಿದ್ದರು. ಆಗಿನಿಂದಲೂ ಈ ಪ್ರಕ್ರಿಯೆ ನಡೆದಿದ್ದು, ಆತ್ಮನಿರ್ಭರತೆಗೆ ವೇಗ ಬಂದಿತ್ತು.

ಈ ಪ್ರಕ್ರಿಯೆಯಲ್ಲಿ ಮೊದಲಿಗೆ ಮಿಲಿಟರಿ ಸಂಸ್ಥೆಗಳ ಹೆಸರುಗಳನ್ನು ಬದಲಾಯಿಸಲಾಗುತ್ತಿದೆ.

ಅಂದರೆ, ಘಟಕಗಳು, ಸಂಸ್ಥೆಗಳು ಮತ್ತು ತರಬೇತಿ ಸಂಸ್ಥೆಗಳಲ್ಲಿ ಇರುವ ಬ್ರಿಟಿಷರ ಕಾಲದ ಹೆಸರುಗಳನ್ನು ತೆಗೆದುಹಾಕಲಾಗುತ್ತದೆ. ಉದಾಹರಣೆಗೆ ಪುಣೆಯಲ್ಲಿ ವಿಭಿನ್ನ ಸಾಮರ್ಥ್ಯದ ಯೋಧರಿಗಾಗಿ ಇರುವ ಕ್ವೀನ್‌ ಮ್ಯಾರಿಸ್‌ ತಾಂತ್ರಿಕ ಸಂಸ್ಥೆಯ ಹೆಸರನ್ನು ಬದಲಾಯಿಸಲಾಗುತ್ತದೆ. ಹಾಗೆಯೇ, ಅಧಿಕಾರಿಗಳ ಮೆಸ್‌ ಪ್ರಕ್ರಿಯೆಯೂ ಬದಲಾಗಲಿದೆ. ಕಾಮನ್‌ವೆಲ್ತ್‌ ಗ್ರೇವ್‌ ಕಮಿಷನ್‌ನ ಹೆಸರನ್ನೂ ಬದಲಾಯಿಸುವ ಸಂಬಂಧ ಚರ್ಚೆ ಆರಂಭವಾಗಿದೆ.

ಬ್ರಿಟಿಷರು ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಸೇನಾ ತುಕಡಿಗಳಿಗೆ ನೀಡಿರುವ ಹೆಸರಿನ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಜೂನಿಯರ್‌ ಕಮಿಷನ್‌x ಆಫೀಸರ್ಸ್‌ಗೆ ನೀಡುವ ಹಾನನರಿ ಕಮಿಷನ್‌, ಕರ್ನಲ್‌ ರೆಜಿಮೆಂಟ್‌ ನೇಮಕದ ವ್ಯವಸ್ಥೆ, ಮಿಲಿಟರಿ ಸಮಾರಂಭಗಳಾದ ಬೀಟಿಂಗ್‌ ದಿ ರೀಟ್ರೀಟ್‌, ಸೇನಾ ಅಂತ್ಯ ಸಂಸ್ಕಾರಗಳ ಪದ್ಧತಿಯನ್ನು ಬದಲಿಸಲೂ ಚರ್ಚೆ ನಡೆದಿದೆ.

ವಿಶೇಷವೆಂದರೆ, ಈಗಾಗಲೇ ಬೀಟಿಂಗ್‌ ದಿ ರೀಟ್ರೀಟ್‌ನಲ್ಲಿ ಆಂಗ್ಲ ಹಾಡು ತೆಗೆದು, ಹಿಂದಿ ಹಾಡೊಂದನ್ನು ಸೇರಿಸಲಾಗಿದೆ.

ಎಲ್ಲರ ಜತೆ ಚರ್ಚೆಯಾಗಲಿ:

ಸೇನೆಯಲ್ಲಿನ ಕೆಲವು ಅಧಿಕಾರಿಗಳು ಈ ಪ್ರಕ್ರಿಯೆ ಸ್ವಾಗತಿಸಿದ್ದರೆ, ಕೆಲವರು ವಿರೋಧಿಸಿದ್ದಾರೆ. ದಿಢೀ ರನೇ ಸೇನೆಯಲ್ಲಿ ಹೆಚ್ಚು ಬದಲಾ ವಣೆ ತರುವುದು ಸೂಕ್ತವಲ್ಲ ಎಂಬು ದು ಕೆಲವರ ಅಭಿಪ್ರಾಯ. ಇನ್ನೂ ಕೆಲವರು ವಸಾಹತುಶಾಹಿಯ ಪದ್ಧತಿಗಳ ನಿರ್ಮೂಲನೆ ಸೂಕ್ತ. ನಿಧಾನಗತಿಯಲ್ಲಿ ಬದಲಾಗಲಿ ಎಂದು ಅಭಿಪ್ರಾಯಿಸಿದ್ದಾರೆ ಎಂಬುದಾಗಿ ಇಂಗ್ಲಿಷ್‌ ಮಾಧ್ಯಮ ವೊಂದು ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next