Advertisement

ರೇಷ್ಮೆಗಿಂತ ಹೆಚ್ಚಿನ ಲಾಭ ಬೇರೆ ಬೆಳೆಗಳಲ್ಲಿ ಸಿಗದು

07:30 AM Feb 25, 2019 | |

ಮೈಸೂರು: ಗ್ರಾಹಕರು ಮೆಚ್ಚುವಂತಹ ಗುಣಮಟ್ಟದ ರೇಷ್ಮೆ ಬೆಳೆದಾಗ ಮಾರುಕಟ್ಟೆಯಲ್ಲಿ ಉತ್ತಮ ದರವೂ ಸಿಗುತ್ತದೆ, ಚೀನಾ ಮೊದಲಾದ ದೇಶಗಳಿಂದ ರೇಷ್ಮೆ ಆಮದು ಮಾಡಿಕೊಳ್ಳುವುದೂ ಕಡಿಮೆ ಆಗುತ್ತದೆ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಹೇಳಿದರು.

Advertisement

ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕರ್ನಾಟಕ ರೇಷ್ಮೆ ಇಲಾಖೆಯ ಸಹಯೋಗದೊಂದಿಗೆ ಭಾನುವಾರ ಏರ್ಪಡಿಸಿದ್ದ ರೇಷ್ಮೆ ಕೃಷಿ ಮೇಳ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದ ಒಟ್ಟು ರೇಷ್ಮೆ ಉತ್ಪಾದನೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಪಾಲು ಕರ್ನಾಟಕ ರಾಜ್ಯದ್ದು, ರಾಜ್ಯದ ಒಟ್ಟು ಉತ್ಪಾದನೆಯಲ್ಲಿ ಶೇ.50 ರಷ್ಟು ಕೋಲಾರ ಮತ್ತು ರಾಮನಗರ ಎರಡೇ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ ಎಂದರು. 

ರೇಷ್ಮೆಗಿಂತ ಹೆಚ್ಚಿನ ಲಾಭ ಬೇರೆ ಬೆಳೆಗಳಲ್ಲಿ ಸಿಗುವುದಿಲ್ಲ. ಹಿಂದೆಲ್ಲಾ ರೋಗಗಳು ಬಂದು 100 ಮೊಟ್ಟೆಗೆ 40 ರಿಂದ 50 ಕೇಜಿ ರೇಷ್ಮೆ ಬಂದರೆ ಹೆಚ್ಚು ಎಂಬತ್ತಿತ್ತು. ಜೊತೆಗೆ ವರ್ಷದಲ್ಲಿ 2-3 ಬೆಳೆಗಳು ಹಾಳಾಗುತ್ತಿತ್ತು. ಇದನ್ನು ತಪ್ಪಿಸಲು ವಿಜ್ಞಾನಿಗಳು ಉತ್ತಮ ಹುಳುಗಳನ್ನು ರೈತರಿಗೆ ಕೊಡುತ್ತಿದ್ದು, 22 ದಿನಗಳಲ್ಲಿ ರೇಷ್ಮೆ ಬರುತ್ತದೆ. ಹುಳು ಸಾಕಲು ಹಿಂದೆನಂತೆ ರಾತ್ರಿಯೆಲ್ಲಾ ಎಚ್ಚರವಿದ್ದು, ಮೇವು ಹಾಕುತ್ತಾ ಕಷ್ಟ ಪಡಬೇಕಿಲ್ಲ.

ಜೊತೆಗೆ ಮಾರುಕಟ್ಟೆ ವ್ಯವಸ್ಥೆಯನ್ನೂ ಉತ್ತಮ ಪಡಿಸಲಾಗಿದೆ. ಹಿಂದೆ ಮಹಾರಾಷ್ಟ್ರದ ಸಾಂಗ್ಲಿ, ಪಂಢರಾಪುರ ಭಾಗಗಳು ಸೇರಿದಂತೆ ಸುಮಾರು 1500 ಕಿ.ಮೀ. ದೂರದಿಂದ ರಾಮನಗರ ಮಾರುಕಟ್ಟೆಗೆ ರೇಷ್ಮೆಗೂಡು ತರುತ್ತಿದ್ದರು. ಆದರೆ, ಈಗ ಪ್ರತಿ 200 ಕಿ.ಮೀ.ಗೆ ಒಂದು ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪಿಸಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು. 

ವಿದ್ಯಾವಂತ ಯುವಕರು 10 ಸಾವಿರ ಸಂಬಳಕ್ಕೆ ಸೆಕ್ಯೂರಿಟಿ ಕೆಲಸಕ್ಕೆ ಹೋಗುವ ಬದಲು ರೇಷ್ಮೆ ಕೃಷಿ, ನೂಲು ಬಿಚ್ಚಾಣಿಕೆ ತರಬೇತಿ ಪಡೆದು ಸ್ವಂತ ಉದ್ಯೋಗಿಗಳಾಗುವಂತೆ ಕಿವಿಮಾತು ಹೇಳಿದರು. ಕಡಿಮೆ ನೀರು ಇರುವ ಜಮೀನಿನಲ್ಲೂ ಬೆಳೆಯಬಹುದಾದ ಹಿಪ್ಪುನೇರಳೆ ತಳಿಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಕೀಟನಾಶಕ ಸಿಂಪಡಿಸದೆ ಇರುವ ಬೆಳೆಗಳನ್ನೂ ಹಿಪ್ಪುನೇರಳೆಯೊಳಗೆ ಅಂತರ ಬೇಸಾಯವಾಗಿ ಬೆಳೆದುಕೊಳ್ಳಬಹುದು.

Advertisement

ರೇಷ್ಮೆ ಬೆಳೆಗಾರರು ಹೆಚ್ಚು ಬೇಡಿಕೆಯಿರುವ ಬೈವೋಲ್ಟಿನ್‌ ಗೂಡು ಬೆಳೆಯಬೇಕು. ದೇಶದ ನೇಕಾರರಿಗೆ ಸಾಕಾಗುವಷ್ಟು ರೇಷ್ಮೆ ದೇಶದಲ್ಲಿ ಉತ್ಪಾದನೆಯಾಗದೆ ಇರುವುದರಿಂದ ಚೀನಾ, ಜಪಾನ್‌, ಅಮೆರಿಕದಿಂದ ಕಚ್ಚಾ ರೇಷ್ಮೆ ಆಮದು ಮಾಡಿಕೊಳ್ಳಲಾಗುತ್ತಿದೆ. ಸರ್ಕಾರಗಳು ನೀಡುವ ತರಬೇತಿಯ ಜೊತೆಗೆ ಉತ್ತಮ ರೇಷ್ಮೆ ಬೆಳೆಗಾರರ ಜಮೀನುಗಳಿಗೆ ಭೇಟಿ ನೀಡಿ ಅವರು ಅಳವಡಿಸಿಕೊಂಡಿರುವ ಆಧುನಿಕ ತಂತ್ರಜ್ಞಾನಗಳನ್ನು ತಿಳಿದುಕೊಳ್ಳಬೇಕು.

ಜೊತೆಗೆ ರೈತರು ವ್ಯಾಪಾರಸ್ಥರಂತೆ ರೇಷ್ಮೆ ಸಾಕಣೆಯ ಖರ್ಚು-ವೆಚ್ಚಗಳ ಲೆಕ್ಕ ಇಟ್ಟಾಗ ಆದಾಯ ಪಡೆಯಲು ಸಾಧ್ಯ ಎಂದರು. ರೇಷ್ಮೆ ಸಚಿವ ಸಾ.ರಾ.ಮಹೇಶ್‌, ರೇಷ್ಮೆ ಕೃಷಿ ಮೇಳ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ರೇಷ್ಮೆ ಕೃಷಿ ವಸ್ತುಪ್ರದರ್ಶನ ಉದ್ಘಾಟಿಸಿದರು. 

ಮೇಯರ್‌ ಪುಷ್ಪಲತಾ ಜಗನ್ನಾಥ್‌, ಉಪಮೇಯರ್‌ ಶಫೀ ಅಹಮದ್‌, ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಕೆ.ಎಸ್‌.ಮಂಜುನಾಥ್‌, ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ನಿರ್ದೇಶಕ ಡಾ.ಆರ್‌.ಎಸ್‌.ತೆವತಿಯ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ 2017-18ನೇ ಸಾಲಿನ ರಾಜ್ಯಮಟ್ಟದ ಪ್ರಗತಿಪರ ರೇಷ್ಮೆ ಬೆಳೆಗಾರರಿಗೆ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ , ಮೈಸೂರು ಬಿತ್ತನೆ ವಲಯದ ಪ್ರಗತಿಪರ ರೇಷ್ಮೆ ಬೆಳೆಗಾರರು, ದ್ವಿತಳಿ ಬಿತ್ತನೆ ವಲಯದ ಪ್ರಗತಿಪರ ರೇಷ್ಮೆ ಬೆಳೆಗಾರರು,ಸಾಂಪ್ರದಾಯಿಕ ಪ್ರದೇಶದಲ್ಲಿ ಪ್ರಗತಿಪರ ರೇಷ್ಮೆನೂಲು ಬಿಚ್ಚಾಣಿಕೆದಾರರು ಹಾಗೂ ಸ್ವಯಂಚಾಲಿತ ರೀಲಿಂಗ್‌ ಘಟಕಗಳವರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next