ನೆಲಮಂಗಲ: ರಾಜ್ಯದಲ್ಲಿ ಎದುರಾಗಿರುವ ಪ್ರವಾಹದ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದ್ದು ನಷ್ಟ ಪರಿಹಾರಕ್ಕೆ ಪ್ರಧಾನಿ ಹೆಚ್ಚಿನ ನೆರವು ನೀಡುವ ವಿಶ್ವಾಸವಿದೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.
ನಗರದ ಅಡೆಪೇಟೆಯ ಶ್ರೀ ಹಿಪ್ಪೆ ಆಂಜನೇಯ ಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರವಾಹದಿಂದ ಸಮಸ್ಯೆ ಆಗಿರುವ ಜಿಲ್ಲೆಗಳ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ನಷ್ಟವಾಗಿರುವ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಕ್ಷಣ ಪರಿಹಾರ ನೀಡಲು ಎಲ್ಲಾ ತಯಾರಿ ನಡೆಸಲಾಗಿದೆ ಎಂದು ತಿಳಿಸಿದರು.
ಹಾಸನ ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ಮನೆಗಳು ಬಿದ್ದಿದ್ದು ತಾತ್ಕಾಲಿಕವಾಗಿ 10,000 ನೀಡಲಾಗಿದೆ. ಮನೆಗಳು ಬಿದ್ದಿರುವ ಪ್ರಮಾಣವನ್ನು ಸಮೀಕ್ಷೆ ಮಾಡಿ ಮೂರು ಹಂತದಲ್ಲಿ 1 ಲಕ್ಷ ರೂ., 3 ಲಕ್ಷ ರೂ. ಹಾಗೂ ಸಂಪೂರ್ಣ ಬಿದ್ದಿದ್ದರೆ 5ಲಕ್ಷ ರೂ. ಪರಿಹಾರ ನೀಡಲು ಪಟ್ಟಿ ಮಾಡಲಾಗುತ್ತಿದೆ ಎಂದು ಹೇಳಿದರು. ಹಾಸನ ಜಿಲ್ಲೆ ಸೇರಿದಂತೆ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ಅರಿತು ಬಂದಿದ್ದೇನೆ. ನೀರಾವರಿ ಇಲಾಖೆಯ ಸಭೆ ಮುಗಿಸಿಕೊಂಡು ಮತ್ತೆ ಸಂಕಷ್ಟದ ಪ್ರದೇಶಗಳಿಗೆ ಭೇಟಿ ನೀಡಲಿದ್ದೇನೆ. ಈಗಾಗಲೇ ಸಕಲೇಶ್ವರ ತಾಲೂಕಿನಲ್ಲಿ ಮೃತನಾದ ವ್ಯಕ್ತಿ ಮನೆಗೆ ತೆರಳಿ 5 ಲಕ್ಷ ರೂ.ಪರಿಹಾರದ ಚೆಕ್ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.
ಇತಿಹಾಸವುಳ್ಳ ದೇವಾಲಯ: ನಗರದ ಅಡೆಪೇಟೆಯ ಹಿಪ್ಪೆ ಆಂಜನೇಯ ಸ್ವಾಮಿ ದೇವಾಲಯ 800ವರ್ಷಗಳ ಇತಿಹಾಸ ಹೊಂದಿದ್ದು ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಪುನರ್ ಪ್ರತಿಷ್ಠಾಪನೆ ಮಾಡಲಾಯಿತು. ಆ.8 ರಿಂದ ಆ.10ರವರೆಗೂ ಆಂಜನೇಯಸ್ವಾಮಿ, ಮಹಾ ಗಣಪತಿ ದೇವಾಲಯದ ಪ್ರತಿಷ್ಠಾಪನೆ ನಡೆಯಲಿದೆ. ಈ ಸಂದರ್ಭದಲ್ಲಿ ಋಷಿಕುಮಾರ ಸ್ವಾಮೀಜಿ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ನಗರಸಭೆ ಸದಸ್ಯ ಗಂಗಾಧರ್‌ಗಣಿ, ಸಬ್ ಇನ್ಸ್‌ಪೆಕ್ಟರ್ ಡಿ.ಆರ್. ಮಂಜುನಾಥ್, ರಾಜಸ್ವ ನಿರೀಕ್ಷಕ ರವಿಕುಮಾರ್, ವಕೀಲ ರಘುನಾಥ್ ಮತ್ತಿತರರಿದ್ದರು.
ಸೋಮವಾರ ಕಂದಾಯ ಸಚಿವರು ಹಾಗೂ ಗೃಹ ಸಚಿವರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದಲ್ಲಿ ಉಂಟಾಗಿರುವ ಪ್ರವಾ ಹದ ನಷ್ಟದ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಲಿದ್ದೇವೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದ ಸಂಕಷ್ಟದ ಪರಿಸ್ಥಿತಿಯ ಪರಿಹಾರವಾಗಿ ಹೆಚ್ಚಿನ ಅನುದಾನದ ನೆರವು ನೀಡಲಿದೆ.
–ಗೋಪಾಲಯ್ಯ, ಸಚಿವ