Advertisement

ಕನ್ನಡ ಧ್ವಜ ತೆರವಿಗೆ ಮೋರ್ಚಾ

06:13 PM Jan 21, 2021 | Team Udayavani |

ಬೆಳಗಾವಿ: ಇಲ್ಲಿಯ ಮಹಾನಗರ ಪಾಲಿಕೆ ಎದುರು ಹಾರಾಡುತ್ತಿರುವ ಕನ್ನಡ ಧ್ವಜ ತೆರವುಗೊಳಿಸುವಂತೆ ಒತ್ತಾಯಿಸಿ, ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ವತಿಯಿಂದ ಜ. 21ರಂದು ಮಹಾಮೋರ್ಚಾ ಹೆಸರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಮಹಾರಾಷ್ಟ್ರದಿಂದ ಶಿವಸೇನೆ ಕಾರ್ಯಕರ್ತರು ಬೆಳಗಾವಿಗೆ ಬರುತ್ತಿದ್ದಾರೆ.

Advertisement

ಕನ್ನಡ ಸಂಘಟನೆಯವರು ಪಾಲಿಕೆ ಎದುರು ಏಕಾಏಕಿ ಅಳವಡಿಸಿರುವ ಕನ್ನಡ ಧ್ವಜ ತೆರವಿಗೆ ಕಳೆದ ಒಂದು ತಿಂಗಳಿಂದ ಎಂಇಎಸ್‌ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಇದಕ್ಕೆ ಸೊಪ್ಪು ಹಾಕಿಲ್ಲ. ಜ. 20ರೊಳಗೆ ತೆರವುಗೊಳಿಸದಿದ್ದರೆ ಬೃಹತ್‌ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದ ಎಂಇಎಸ್‌ ಜ. 21ರಂದು ಪ್ರತಿಭಟನೆ ನಡೆಸಲು ಮುಂದಾಗಿದೆ.

ನಗರದ ಕಾಲೇಜು ರಸ್ತೆಯ ಸರ್ದಾರ್‌ ಮೈದಾನದಿಂದ ಪ್ರತಿಭಟನೆ ನಡೆಸುತ್ತ ನೇರವಾಗಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಲು ಎಂಇಎಸ್‌ ನಿರ್ಧರಿಸಿದೆ.

ನಾಲ್ಕು ದಿನಗಳ ಹಿಂದೆಯಷ್ಟೇ ಎಂಇಎಸ್‌ ಹುತಾತ್ಮ ದಿನಾಚರಣೆಯಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹೇಳಿಕೆಯಿಂದ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಬೆಳಗಾವಿಯ ಸುತ್ತಲಿನಲ್ಲಿ ಮರಾಠಿ ಮಾತನಾಡುವ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವವರೆಗೆ ಹೋರಾಟ ನಿಲ್ಲದು ಎಂಬ ಹೇಳಿಕೆಯಿಂದ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಗುರುವಾರ ನಡೆಯಲಿರುವ ಎಂಇಎಸ್‌ ಹೋರಾಟಕ್ಕೂ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಇದನ್ನೂ ಓದಿ:ಅಕ್ರಮ ಮದ್ಯ ಮಾರಾಟದ ವಿರುದ್ಧ ಆಕ್ರೋಶ

Advertisement

ಎಂಇಎಸ್‌ ಜೊತೆಗೆ ಶಿವಸೇನೆಯೂ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದು, ಬೆಳಗಾವಿ ಸನಿಹದ ಚಂದಗಡ ತಾಲೂಕು ಸೇರಿದಂತೆ ವಿವಿಧ ಕಡೆಗಳಿಂದ ಶಿವಸೇನೆಯ ಬೆರಳೆಣಿಕೆಯಷ್ಟು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದೆ. ಆದರೆ ಕೊಲ್ಲಾಪುರ ಶಿವಸೇನೆ ಅಧ್ಯಕ್ಷ ವಿಜಯ ದೇವಣೆ ಪ್ರಕಾರ ಕೊಲ್ಲಾಪುರ ಜಿಲ್ಲೆಯ ಅನೇಕ ಕಡೆಗಳಿಂದ ಸಹಸ್ರಾರು ಸಂಖ್ಯೆಯ ಶಿವಸೇನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಕರ್ನಾಟಕ ಸರ್ಕಾರವನ್ನು ಎಚ್ಚರಿಸಲಾಗವುದು ಎಂದು ತಿಳಿಸಿದ್ದಾರೆ.

ಈಗಾಗಲೇ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಭಗವಾ ಧ್ವಜವನ್ನು ಎಲ್ಲ ಕಡೆಗೂ ಹಾರಾಡಿಸಬೇಕು ಎಂಬ ಸಂದೇಶಗಳುಳ್ಳ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗುತ್ತಿದೆ. ಮಹಾರಾಷ್ಟ್ರ ಏಕೀಕರಣ ಯುವಾ ಸಮಿತಿಯಿಂದ ಫೇಸ್‌ಬುಕ್‌, ವಾಟ್ಸಪ್‌ಗ್ಳಲ್ಲಿ ಸಂದೇಶ ಹಾಕಲಾಗುತ್ತಿದೆ. ಈ ದೇಶದಲ್ಲಿ ಭಗವಾ ಧ್ವಜ ಹಾಗೂ ತಿರಂಗಾ ಧ್ವಜ ಮಾತ್ರ ಇರಬೇಕು. ನಾವು ಹಿಂದೂ ಇದ್ದೀವಿ ಎಂಬ ಕಾರಣಕ್ಕೆ ಭಗವಾ ಹಾಗೂ ತಲೆ ಎತ್ತಿ ನಮಸ್ಕರಿಸುವ ತಿರಂಗಾ ಧ್ವಜ ಮಾತ್ರ ಹಾರಾಡಬೇಕು. ಹೀಗಾಗಿ ಮಹಾನಗರ ಪಾಲಿಕೆ ಮೇಲಿನ ಧ್ವಜ ತೆರವುಗೊಳಿಸಲು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮರಾಠಿ ಭಾಷಿಕರು ಮಹಾಮೋರ್ಚಾದಲ್ಲಿ ಭಾಗವಹಿಸಬೇಕು ಸಂದೇಶ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next