Advertisement

ಸ್ಲಂ ಮೋರ್ಚಾದಿಂದ ಉಚಿತ ಟ್ಯಾಂಕರ್‌

12:43 PM Mar 19, 2017 | |

ದಾವಣಗೆರೆ: ಬಿಜೆಪಿ ಸ್ಲಂ ಮೋರ್ಚಾದ ರಾಜ್ಯ ಘಟಕ ದಾವಣಗೆರೆ ನಗರದ ಸ್ಲಂ ನಿವಾಸಿಗಳಿಗೆ ಟ್ರ್ಯಾಕ್ಟರ್‌ ಟ್ಯಾಂಕರ್‌ನಿಂದ ನೀರು ಪೂರೈಸಲಿದೆ. ನಮ್ಮ ಮೋರ್ಚಾದಿಂದ ಟ್ರ್ಯಾಕ್ಟರ್‌ ಟ್ಯಾಂಕರ್‌ ಜತೆಗೆ ಉಚಿತ ಡಿಸೇಲ್‌ ಹಾಗೂ ಚಾಲಕನನ್ನೂ ಒದಗಿಸಲಾಗಿದೆ. ಪಾಲಿಕೆಯಿಂದ ನೀರು ಪೂರೈಸಿದಲ್ಲಿ ಅಗತ್ಯವಿರುವ ಸ್ಲಂ ಪ್ರದೇಶಕ್ಕೆ ಕೊಂಡೊಯ್ಯಲಾಗುವುದು ಎಂದು ಮೋರ್ಚಾದ ರಾಜ್ಯಾಧ್ಯಕ್ಷ ಜಯಪ್ರಕಾಶ್‌ ಯು. ಅಂಬರಕರ್‌ ಶನಿವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. 

Advertisement

ಬೂದಾಳು ರಸ್ತೆಯಲ್ಲಿನ ಮಾರಮ್ಮನ ದೇವಸ್ಥಾನದ ಬಳಿ ಇಂದು ಬೆಳಗ್ಗೆ 11 ಗಂಟೆಗೆ ಕುಡಿಯುವ ನೀರಿನ ಟ್ರ್ಯಾಕ್ಟರ್‌ ಟ್ಯಾಂಕರ್‌ ಉಚಿತ ಸೇವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ಧೇಶ್ವರ್‌, ಶಾಸಕ ಸಿ.ಟಿ. ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ಇತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. 

ರಾಜ್ಯದಲ್ಲಿರುವ ಸ್ಲಂಗಳನ್ನು ನಮ್ಮ ಮೋರ್ಚಾದಿಂದ ಸಮೀಕ್ಷೆ ಮಾಡಿಸಲಾಗಿದೆ. ರಾಜ್ಯ ಸರ್ಕಾರ ಸ್ಲಂಗಳ ಪರಿಸ್ಥಿತಿ ಸುಧಾರಣೆಗೆ ಯಾವುದೇ ಕ್ರಮ ವಹಿಸಿಲ್ಲ. ಈ ಬಜೆಟ್‌ನಲ್ಲೂ ಸಹ ಹೆಚ್ಚಿನ ಹಣ ಇಟ್ಟಿಲ್ಲ. ಹಿಂದಿನ ಬಜೆಟ್‌ನಲ್ಲಿಟ್ಟಿದ್ದ ಅನುದಾನ ಖರ್ಚು ಮಾಡಿಲ್ಲ. ರಾಜ್ಯದಲ್ಲಿ ಒಟ್ಟು 2804 ಸ್ಲಂಗಳಿವೆ. ಇವುಗಳ ಪೈಕಿ 2,397 ಸ್ಲಂಗಳು ಘೋಷಣೆಗೊಂಡಿವೆ. 

407 ಅಘೋಷಿತ ಸ್ಲಂಗಳಿವೆ ಎಂದು ಅವರು ಮಾಹಿತಿ ನೀಡಿದರು. ಈ ಹಿಂದೆ ನಮ್ಮ ಪಕ್ಷದ ಸರ್ಕಾರದ ಅವಧಿಯಲ್ಲಿ ಸ್ಲಂಗಳಲ್ಲಿ 41,745 ಮನೆ ನಿರ್ಮಾಣ ಮಾಡಲಾಗಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಇದುವರೆಗೆ ಈ ನಿಟ್ಟಿನಲ್ಲಿ ದೊಡ್ಡ ಪ್ರಯತ್ನ ಮಾಡಿಲ್ಲ.ಹಾಗೆ ನೋಡಿದರೆ ಕಾಂಗ್ರೆಸ್‌ನ 35-40 ಶಾಸಕರು ಸ್ಲಂ ಜನರ ಮತಗಳಿಂದ ಆಯ್ಕೆಯಾಗಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅನೇಕ ಶಾಸಕರ ಆಯ್ಕೆಗೆ ಸ್ಲಂ ನಿವಾಸಿಗಳೇ ಕಾರಣರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 70 ಲಕ್ಷ ಮತದಾರರು ಸ್ಲಂ ನಿವಾಸಿಗಳಾಗಿದ್ದಾರೆ ಎಂದು ಅವರು ಹೇಳಿದರು.  

Advertisement

ನಮ್ಮ ಮೋರ್ಚಾ ದೇಶದ ವಿವಿಧೆಡೆಯ ಸ್ಲಂ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಅಲ್ಲಿನ ರೀತಿಯಲ್ಲಿಯೇ ನಮ್ಮ ಸ್ಲಂಗಳನ್ನು ಅಭಿವೃದ್ಧಿ ಪಡಿಸಲು ಎನ್‌ಜಿಒಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. 60 ವರ್ಷಗಳಲ್ಲಿ ಕಾಂಗ್ರೆಸ್‌ ಸರ್ಕಾರ ಮಾಡದ ಕೆಲಸವನ್ನು ನಾವು ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಲಿದ್ದೇವೆ. 

ಸ್ಲಂಗಳಿಗೆ ಬೇಕಾದ ಕುಡಿಯುವ ನೀರು, ಶೌಚಾಲಯ ಸೌಲಭ್ಯ ಕಲ್ಪಿಸಲಿದ್ದೇವೆ ಎಂದು ಅವರು ತಿಳಿಸಿದರು. ಮೋರ್ಚಾ ನಡೆಸಿದ ಸಮೀಕ್ಷಾ ವರದಿಯನ್ನು ಏ.14ರ ಅಂಬೇಡ್ಕರ್‌ ಜಯಂತಿಯಂದು ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಬಿಡುಗಡೆ ಮಾಡಲಿದ್ದಾರೆ.

ಇದೇ ವರದಿಆಧರಿಸಿ, ಕ್ರಮ ವಹಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು. ಮೋರ್ಚಾದ ರಾಜ್ಯ ಕಾರ್ಯದರ್ಶಿ ಪಿಸಾಳೆ ಕೃಷ್ಣ, ಮುಖಂಡರಾದ ಮಾಲತೇಶ ಭಂಡಾರಿ, ಹನುಮಂತಪ್ಪ, ಗುಡ್ಡಪ್ಪ, ಶಶಿಧರ್‌, ನಾರಾಯಣಪ್ಪ, ರಾಘವೇಂದ್ರ ರೆಡ್ಡಿ, ಪರುಶುರಾಮ್‌ ಸುದ್ದಿಗೋಷ್ಠಿಯಲ್ಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next