ಗಾಂಧಿನಗರ(ಗುಜರಾತ್): ಗುಜರಾತ್ ನ ಮೊರ್ಬಿ ನಗರದಲ್ಲಿ ದುರಸ್ತಿಗೊಂಡ ನಾಲ್ಕು ದಿನಗಳ ನಂತರ ಸಾರ್ವಜನಿಕರಿಗೆ ಮುಕ್ತಗೊಂಡಿದ್ದ ತೂಗು ಸೇತುವೆಯು ಮಚ್ಚು ನದಿಗೆ ಬಿದ್ದು 140 ಮಂದಿ ಪ್ರಾಣ ಕಳೆದುಕೊಂಡ ಕುಟುಂಬ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಅಕ್ಟೋಬರ್ 31) ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸ್ನೇಹಿತರೊಂದಿಗೆ ಕುಳಿತಿದ್ದಾಗಲೇ ಹೃದಯಾಘಾತದಿಂದ ಜೆಡಿಎಸ್ ಮುಖಂಡ ನಿಧನ; ವಿಡಿಯೋ ವೈರಲ್
“ನನ್ನ ಇಡೀ ಜೀವನದಲ್ಲಿ ಇಂತಹ ನೋವು ಅನುಭವಿಸಿಲ್ಲ. ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬ ಸದಸ್ಯರಿಗೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ. ಈ ಸಮಯದಲ್ಲಿ ಸರ್ಕಾರ ಎಲ್ಲಾ ರೀತಿಯಲ್ಲಿಯೂ ದುಃಖಿತ ಕುಟುಂಬದ ಜೊತೆ ಇರಬೇಕಾಗಿದೆ. ಕೇಂದ್ರ ಸರ್ಕಾರ ಕೂಡಾ ರಾಜ್ಯಕ್ಕೆ ಎಲ್ಲಾ ರೀತಿಯ ನೆರವು ನೀಡಲಿದೆ” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ನಾನು ಏಕ್ತಾ ನಗರದಲ್ಲಿದ್ದರೂ ಕೂಡಾ ನನ್ನ ಮನಸ್ಸು ಮೊರ್ಬಿ ಸಂತ್ರಸ್ತ ಕುಟುಂಬದ ಜತೆಗಿದೆ. ನನ್ನ ಜೀವನದಲ್ಲಿ ಕಂಡ ಅತ್ಯಂತ ನೋವಿನ ಘಟನೆ ಇದಾಗಿದೆ. ಒಂದೆಡೆ ನೋವು, ಮತ್ತೊಂದೆಡೆ ಕರ್ತವ್ಯ ನಿರ್ವಹಿಸಬೇಕಾದ ಅಗತ್ಯ ಎಂಬುದಾಗಿ ಪ್ರಧಾನಿ ಕೇವಾಡಿಯಾದಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
ಭಾನುವಾರದಿಂದ ರಕ್ಷಣಾ ತಂಡ, ಈಜುಗಾರರು ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಘಟನೆ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ತನಿಖಾ ಸಮಿತಿಯನ್ನು ರಚಿಸಬೇಕು. ಅಷ್ಟೇ ಅಲ್ಲ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಯಾವುದೇ ರೀತಿಯ ಅಸಡ್ಡೆ ಪ್ರದರ್ಶಿಸುವುದಿಲ್ಲ ಎಂದು ದೇಶದ ಜನತೆಗೆ ಭರವಸೆ ನೀಡುವುದಾಗಿ ಹೇಳಿದ್ದಾರೆ.