Advertisement

ಹದಿನಾಲ್ಕು ವರ್ಷವಾದ್ರೂ ತಪ್ಪದ ವನವಾಸ!

04:38 PM Feb 04, 2021 | Team Udayavani |

ಮಸ್ಕಿ: ಪಟ್ಟಣದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾಗಿ ಬರೋಬ್ಬರಿ 14 ವರ್ಷ ಕಳೆದಿವೆ. ಆದರೆ, ಸ್ವಂತ ನೆಲೆ ಇಲ್ಲ. ಭತ್ತದ ಮೂಟೆ ತುಂಬುವ ಗೋದಾಮುವೊಂದರಲ್ಲೇ ಮಕ್ಕಳನ್ನು ಕೂಡಿ ಹಾಕಲಾಗಿದ್ದು, ನಿತ್ಯ ಅಲ್ಲೇ ಊಟ-ಪಾಠ, ವಾಸ್ತವ್ಯ!.

Advertisement

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದಲ್ಲಿ ಬರುವ ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾದ ಮಕ್ಕಳ ಫಜೀತಿ ಇದು. ವಾಸ್ತವ್ಯದೊಂದಿಗೆ ಹೈಟೆಕ್‌ ಉಚಿತ ಶಿಕ್ಷಣ ಪಡೆಯಲು ಈ ವಸತಿ ಶಾಲೆಗೆ ಪ್ರವೇಶಕ್ಕಾಗಿ ಮಕ್ಕಳು 5ನೇ ತರಗತಿಯಿಂದಲೇ ಪ್ರತ್ಯೇಕ ಕೋಚಿಂಗ್‌ ಪಡೆದು, ಪರೀಕ್ಷೆಯಲ್ಲಿ ಪಾಸಾಗಿ ಆಯ್ಕೆಯಾಗುತ್ತಾರೆ. 6ನೇ ತರಗತಿಯಿಂದ 10ನೇ ತರಗತಿವರೆಗೂ ವ್ಯಾಸಂಗ್‌ ಮಾಡಲು ಭವಿಷ್ಯದ ಕನಸು ಹೊತ್ತು ಬರುತ್ತಾರೆ. ಆದರೆ, ಮಸ್ಕಿ ವಸತಿ ಶಾಲೆಗೆ ಆಯ್ಕೆಯಾಗಿ ಬಂದ ಇಲ್ಲಿನ ಮಕ್ಕಳಿಗೆ ಮಾತ್ರ ಗುಣಮಟ್ಟದ ಶಿಕ್ಷಣ, ಹೈಟೆಕ್‌ ಸೌಕರ್ಯಗಳ ಬದಲು ಬಂಧನದ ಅನುಭವವಾಗುತ್ತಿದೆ. ಯಾವ ಸೌಕರ್ಯಗಳು ನೆಟ್ಟಗಿರದ ಕಾರಣ ಮಕ್ಕಳು ವನವಾಸ ಅನುಭವಿಸುವಂತಾಗಿದೆ.

ಏನಿದೆ ಪರಿಸ್ಥಿತಿ?: ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ವಂತ ಕಟ್ಟಡವೇ ಇಲ್ಲ. ಬಾಡಿಗೆ ಕಟ್ಟಡವೊಂದರಲ್ಲಿ ನಡೆದಿದ್ದು, ಅದೂ ಗೋದಾಮುವೊಂದರಲ್ಲಿ ನಡೆಸಲಾಗುತ್ತಿದೆ. ಮೂಟೆ ತುಂಬುವ ಕಟ್ಟಡಗಳಲ್ಲಿ 300 ವಿದ್ಯಾರ್ಥಿಗಳನ್ನು ಹಾಕಲಾಗಿದೆ. ನಿತ್ಯ ಇಲ್ಲಿಯೇ ಊಟ, ಪಾಠ, ವಾಸ್ತವ್ಯ. ಹೊಸದಾಗಿ ಇಲ್ಲಿಗೆ ಆಯ್ಕೆಯಾಗಿ ಬರುವ ವಿದ್ಯಾರ್ಥಿಗಳು ಪರಿಸ್ಥಿತಿ ಕಂಡು ನಾಲ್ಕು ದಿನದಲ್ಲೇ ಮನೆಯ ದಾರಿ ಹಿಡಿಯುತ್ತಾರೆ. ಇನ್ನು ಕೆಲ ವಿದ್ಯಾರ್ಥಿಗಳು ಓದು-ಅಭ್ಯಾಸಕ್ಕಾಗಿ ಇಂತಹ ಪರಿಸ್ಥಿತಿ ಅನಿವಾರ್ಯ ಎಂದು ಹೊಂದಿಕೊಳ್ಳುತ್ತಿದ್ದಾರೆ.

ಬಹುತೇಕ ಬಡ ವಿದ್ಯಾರ್ಥಿಗಳೇ ಇಲ್ಲಿ ಪ್ರವೇಶ ಪಡೆಯುವುದರಿಂದ ಅ ಧಿಕಾರಿಗಳು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೇವಲ ಕಟ್ಟಡದ ಸಮಸ್ಯೆ ಮಾತ್ರವಲ್ಲದೇ ಗುಣಮಟ್ಟ ಶಿಕ್ಷಣ ಕೊರತೆ, ಆಟೋಟಗಳಿಗೆ ಅವಕಾಶ ಇಲ್ಲದೇ ಇರುವುದು, ಊಟದಲ್ಲಿ ಗುಣಮಟ್ಟ ಕಾಪಾಡಿಕೊಳ್ಳದೇ ಇರುವುದು ಸೇರಿ ಹಲವಾರು ಸವಾಲುಗಳು ಇಲ್ಲಿನ ವಸತಿ ಶಾಲೆ ಮಕ್ಕಳು ಅನುಭವಿಸುತ್ತಿದ್ದಾರೆ.

ಆಸಕ್ತಿ ಕೊರತೆ: ಬಾಳೆಕಾಯಿ ಮಿಲ್‌ನಲ್ಲಿ ನಡೆಯುತ್ತಿರುವ ಇಲ್ಲಿನ ವಸತಿ ಶಾಲೆಗೆ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕಾಗಿ ಮುದಗಲ್‌ ರಸ್ತೆ ಮಾರ್ಗದಲ್ಲಿ 5 ಎಕರೆ ಸರಕಾರಿ ಜಮೀನು ಗುರುತು ಮಾಡಿ ಇಲ್ಲಿನ ವಸತಿ ಶಾಲೆಗೆ ಹಸ್ತಾಂತರ ಮಾಡಲಾಗಿದೆ. ಅಲ್ಲದೇ ಹೆಚ್ಚುವರಿ 3 ಎಕರೆ ಭೂಮಿ ಹಂಚಿಕೆಗೂ ಪ್ರಸ್ತಾವನೆ ಜಿಲ್ಲಾಧಿ ಕಾರಿ ಕಚೇರಿಯಲ್ಲಿದೆ. ಆದರೆ, ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕೆ ಬಜೆಟ್‌ ಹಂಚಿಕೆಗೆ ಆಸಕ್ತಿ ತೋರುತ್ತಿಲ್ಲ.

Advertisement

ಇಲ್ಲಿನ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ ವರ್ಗ  ಮಕ್ಕಳ ಭವಿಷ್ಯವನ್ನೇ ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ಸ್ವಂತ ಕಟ್ಟಡ ಇಲ್ಲದೇ ಗೋದಾಮು ವಾಸಕ್ಕಾಗಿ
ಮಾಸಿಕ 2,92,500 ರೂ. ಸರಕಾರ ಬಾಡಿಗೆ ಪಾವತಿ ಮಾಡುತ್ತಿದೆ. ಮನಸು ಮಾಡಿದರೆ, ಈ ಬಾಡಿಗೆ ಮೊತ್ತದಲ್ಲೇ ಅಧಿ ಕಾರಿಗಳು ಸ್ವಂತ ಕಟ್ಟಡ ನಿರ್ಮಾಣ
ಮಾಡಬಹುದು. ಆದರೆ ಇಚ್ಛಾಶಕ್ತಿ ಕೊರತೆ ಕಾರಣಕ್ಕೆ ವಿದ್ಯಾರ್ಥಿಗಳು ಮಾತ್ರ 14 ವರ್ಷ ಕಳೆದರೂ ವನವಾಸದಲ್ಲೇ ಕಾಲ ಕಳೆಯುತ್ತಿದ್ದಾರೆ.

ಪ್ರಸ್ತಾವನೆಯಲ್ಲೇ ಗಿರಕಿ
2006ರಲ್ಲಿ ಮಂಜೂರಾಗಿರುವ ಇಲ್ಲಿನ ಮೊರಾರ್ಜಿ ವಸತಿ ಶಾಲೆ ಆರಂಭದಲ್ಲಿ ಎಪಿಎಂಸಿಯ ಮಳಿಗೆಯಲ್ಲಿತ್ತು. ಪಾಳು ಬಿದ್ದ ಈ ಎಪಿಎಂಸಿಯಲ್ಲಿ ಹುಳ-ಉಪ್ಪಡಿ, ಕಿಡಗೇಡಿಗಳ ಹಾವಳಿಯಿಂದಾಗಿ 2016ರಲ್ಲಿ ಖಾಸಗಿ ಗೋದಾಮಿಗೆ ಶಿಫ್ಟ್‌ ಆಗಿದೆ. ಭೂಮಿ ಮಂಜೂರಾದರೂ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆ ಮಾಡಿ ಎಂದು ವಸತಿ ಶಾಲೆ ಪ್ರಾಂಶುಪಾಲರು ಹಲವು ಬಾರಿ ಪತ್ರ ಬರೆದಿದ್ದಾರೆ. ಆದರೆ ಇಲಾಖೆ ಎಂಜಿನಿಯರ್‌ ಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಹಣ ಬಿಡುಗಡೆಯಾಗಿಲ್ಲ.

ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಕೋರಿ ಹಲವು ಬಾರಿ ಪತ್ರ ಬರೆದಿದ್ದೇವೆ. ಆದರೆ ಈ ಬಗ್ಗೆ ಇನ್ನೂ ಏನು ಪೊಗ್ರೆಸ್‌ ಆಗಿಲ್ಲ. ಜಿಲ್ಲಾ, ರಾಜ್ಯಮಟ್ಟದ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.
ಸುಭಾಷ್‌ಚಂದ್ರ,
ಪ್ರಾಂಶುಪಾಲರು, ವಸತಿ ಶಾಲೆ ಮಸ್ಕಿ

ಇಲ್ಲಿನ ಮಕ್ಕಳು ಇಕ್ಕಟ್ಟು-ಬಿಕ್ಕಟ್ಟಿನಲ್ಲಿ ವಾಸ ಮಾಡುತ್ತಿದ್ದಾರೆ. ಸರಕಾರ ಶಿಕ್ಷಣಕ್ಕೆ ಕೋಟ್ಯಂತರ ರೂ. ಮೀಸಲಿಟ್ಟರೂ ಇಲ್ಲಿನ ಮಕ್ಕಳಿಗೆ ಸೌಲಭ್ಯ ಸಿಗುತ್ತಿಲ್ಲ. ಅಧಿಕಾರಿಗಳು, ಚುನಾಯಿತರು ಇತ್ತ ಗಮನ ಹರಿಸಬೇಕು.
ಕೃಷ್ಣ ಡಿ.ಚಿಗರಿ, ಮಸ್ಕಿ ಪಟ್ಟಣ ನಿವಾಸಿ

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next