Advertisement

ಕುಸ್ತಿ ವ್ಯಾಪಾರಕ್ಕೆ ಇಟ್ಟರೆ ನೈತಿಕ ಅಧಃಪತನ; ನಿರಂಜನಾನಂದಪುರಿ ಸ್ವಾಮೀಜಿ

06:28 PM Feb 15, 2022 | Team Udayavani |

ರಾಣಿಬೆನ್ನೂರ: ವ್ಯಕ್ತಿಯ ಶಾರೀರಿಕ ಬೆಳವಣಿಗೆಗೆ ಹಾಗೂ ಮಾನಸಿಕವಾಗಿ ಸದಾ ಚೈತನ್ಯಶೀಲವನ್ನಾಗಿ ಮಾಡುವ ಅಗಾಧವಾದ ದಿವ್ಯಶಕ್ತಿ ಹೊಂದಿರುವ ಕುಸ್ತಿಯನ್ನು ಕ್ರೀಡಾಪಟುಗಳು ಎಂದೂ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡದೇ, ವ್ಯಾಪಾರೀಕರಣಕ್ಕೆ ಇಳಿಯದೇ ನಿಯತ್ತಿನಿಂದ ಮತ್ತು ಪ್ರಾಮಾಣಿಕವಾಗಿ ಸ್ಪರ್ಧೆಗಿಳಿಯಬೇಕು ಎಂದು ಕಾಗಿನೆಲೆ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

Advertisement

ಸೋಮವಾರ ಇಲ್ಲಿನ ಕುರುಬಗೇರಿಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಹತ್ತಿರವಿರುವ ಪುರಾತನ ಕಾಲದ ಗರಡಿಮನೆ ಜೀರ್ಣೋದ್ಧಾರ ಹಾಗೂ ಶ್ರೀ ಬೀರೇಶ್ವರ ಗರಡಿಮನೆ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕುಸ್ತಿಯನ್ನು ವ್ಯಾಪಾರಕ್ಕೆ ಇಟ್ಟರೆ ಆತನ ಕುಸ್ತಿಯ ನೈತಿಕತೆ ಅಧಃಪತನವಾಗುವುದರ ಮೂಲಕ ಆತನ ವ್ಯಕ್ತಿತ್ವ ಹಾಳಾಗಿ ಅಸ್ತಿತ್ವವನ್ನೇ ಕಳೆದುಕೊಂಡು ಜನಮಾನಸದಲ್ಲಿ ಅವಮಾನಕ್ಕೀಡಾಗಿ ತ್ರಿಶಂಕು ಸ್ಥಿತಿಗೆ ಹೋಗುತ್ತಾನೆ ಎಂದು ಶ್ರೀಗಳು ನುಡಿದರು.

ಕುಸ್ತಿಗೆ ಇನ್ನೊಂದು ಹೆಸರೇ ರಾಣಿಬೆನ್ನೂರ ಆಗಿದೆ. ಅದರಲ್ಲೂ ಕುರುಬಗೇರಿ ಕುಸ್ತಿಗೆ ಕಳಸವಿದ್ದಂತೆ. ಇಲ್ಲಿಯ ಅನೇಕ ಕುಸ್ತಿಪಟುಗಳು, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಹೆಸರು ಮಾಡಿ ನಗರಕ್ಕೆ ಕೀರ್ತಿ ತಂದಿದ್ದಾರೆ. ಅವರುಗಳ ಸಾಧನೆಯಿಂದಲೇ ಇಂದು ದೇಶಾದ್ಯಂತ ಕುಸ್ತಿಗೆ ರಾಣಿಬೆನ್ನೂರ ಪ್ರಸಿದ್ಧಿ ಪಡೆದಿದೆ. ಮೈಸೂರಿನ ದಸರಾದಲ್ಲಿಯೂ ಅತೀ ಹೆಚ್ಚು ಬಾರಿ ಪ್ರಶಸ್ತಿಯ ಗರಿ ಮುಡಿಗೇರಿಸಿಕೊಂಡ ಅನೇಕ ಪುರಾವೆಗಳು ಈಗಲೂ ಜೀವಂತವಾಗಿ ಉಳಿದಿವೆ ಎಂದರು.

ಮನುಷ್ಯನ ವ್ಯಕ್ತಿತ್ವ ಖುಲಾಯಿಸಲು ಈ ಕುಸ್ತಿ ಅನೇಕ ರೀತಿಯ ಅನುಕೂಲತೆಗಳನ್ನು ಮಾಡುತ್ತಿದೆ. ಇಂತಹ ಕುಸ್ತಿಯು ಇಂದು ಯುವಕರು ಮೊಬೈಲಿನ ಅತಿಯಾದ ಬಳಕೆಯಿಂದ ಕ್ಷೀಣಿಸುತ್ತಿದೆ. ಇದನ್ನು ಉಳಿಸಿ ಬೆಳೆಸಲು ಕನಕ ಗುರುಪೀಠ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಈ ದಿಸೆಯಲ್ಲಿ ಮುಂದಿನ ವರ್ಷ ಹರಿಹರ ತಾಲೂಕಿನಲ್ಲಿ ಅಂದಾಜು 1.5 ಕೋಟಿ ರೂ. ವೆಚ್ಚದಲ್ಲಿ ಪಾಯಿಂಟ್‌ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಹಿಂದೆ ಡಾವಣಗೇರಿಯಲ್ಲಿ ಕುಸ್ತಿ ಸ್ಪರ್ಧೆ ಏರ್ಪಡಿಸಿ ಸಹಕರಿಸಿದೆ ಎಂದು ಶ್ರೀಗಳು ಹೇಳಿದರು.

Advertisement

ಹಾಲಿ-ಮಾಜಿ ಕುಸ್ತಿಪಟುಗಳನ್ನು, ಮುಖಂಡರನ್ನು ಶ್ರೀಗಳು ಹಾಗೂ ಆಡಳಿತ ಮಂಡಳಿಯವರು ಸನ್ಮಾನಿಸಿ ಗೌರವಿಸಿದರು. ಭರಮಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಸವರಾಜ ಶಿವಣ್ಣನವರ, ಪ್ರಾ ಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಸದಸ್ಯರಾದ ಮಲ್ಲಣ್ಣ ಅಂಗಡಿ, ನಿಂಗರಾಜ ಕೋಡಿಹಳ್ಳಿ, ಹುಚ್ಚಪ್ಪ ಮೇಡ್ಲೆರಿ, ಸಿದ್ದಪ್ಪ ಬಾಗಲವರ, ರಮೇಶ ಕರಡೆಣ್ಣನವರ, ಪುಟ್ಟಪ್ಪ ಮರಿಯಮ್ಮನವರ, ನಾಗರಾಜ, ಮುಖಂಡರಾದ ಕೃಷ್ಣಪ್ಪ ಕಂಬಳಿ, ಮೃತ್ಯುಂಜಯ ಗುದಿಗೇರ, ಆನಂದ ಹುಲಬನ್ನಿ, ಹನುಮಂತಪ್ಪ ಮುಳಗುಂದ, ಸೋಮು ಕುರವತ್ತಿ, ಆಂಜನೇಯ ಹುಲಿಹಳ್ಳಿ, ಪರಸಪ್ಪ ಹುಲ್ಲತ್ತಿ, ಬಸವರಾಜ ಕಂಬಳಿ, ಶಿವಮೂರ್ತಿ ಚಳಗೇರಿ, ಷಣ್ಮುಖಪ್ಪ ಕಂಬಳಿ, ವಿನೋಧ, ಗುಡ್ಡಪ್ಪ ಚಿನ್ನಿಕಟ್ಟಿ, ಬಸವರಾಜ ಮುಳಗುಂದ, ನಾಗರಾಜ ಬಾಗಲವರ, ರಾಜು ಮೈಲಾರ, ಕಿರಣ ಗುಳೇದ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next