Advertisement

“ಆತ್ಮಸಾಕ್ಷಿಗೆ ಬದ್ಧವಾಗಿ ಕೆಲಸ ಮಾಡಿದರೆ ಸೋಲಿಲ್ಲದ ನೈತಿಕ ಶಕ್ತಿ’

09:04 PM Nov 13, 2019 | mahesh |

ಉದಯವಾಣಿಯ ನೂತನ ಕಾರ್ಯಕ್ರಮ ಮಾಲಿಕೆ “ಜೀವನ ಕಥನ’ ಮಕ್ಕಳಲ್ಲಿ ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳೆಸುವ ಸಲುವಾಗಿಯೇ ರೂಪುಗೊಂಡಿರುವಂಥದ್ದು. ಮಕ್ಕಳ ದಿನಾಚರಣೆ ಒಂದು ಅರ್ಥಪೂರ್ಣ ಆಚರಣೆಯಾಗಲಿ ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಒಂಬತ್ತು ತಾಲೂಕುಗಳಲ್ಲಿ ವಿಭಿನ್ನ ವೃತ್ತಿ ಸಾಧಕರೊಂದಿಗೆ ಸಂವಾದ ಬುಧವಾರ ಏರ್ಪಡಿಸಲಾಗಿತ್ತು. ಎಲ್ಲೆಡೆಯೂ ಹತ್ತಕ್ಕೂ ಹೆಚ್ಚು ಶಾಲೆಗಳ ಮಕ್ಕಳು ಸಂವಾದದಲ್ಲಿ ಭಾಗವಹಿಸಿದರು. ಈ ಹೊಸ ಚಿಂತನೆ ಬದುಕಿನ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂಬ ಅಭಿಪ್ರಾಯ ಶಿಕ್ಷಣ ಅಧಿಕಾರಿಗಳಿಂದ, ಶಾಲಾ ಮುಖ್ಯಸ್ಥರಿಂದ ಕೇಳಿ ಬಂತು. ಹೊಸ ಮಾಲಿಕೆಗೆ ಸಹಕರಿಸಿದ ಎಲ್ಲ ಶಾಲೆಗಳಿಗೂ ಅಭಿನಂದನೆಗಳು.

Advertisement

ಮೂಲ್ಕಿ: ಪ್ರಾಮಾಣಿಕನಾಗಿ ಸೇವೆ ಸಲ್ಲಿಸುವವನಿಗೆ ಯಾವುದೇ ಕರ್ತವ್ಯ ನಿರ್ವಹಣೆಯಲ್ಲಿ ಎಂಥದೇ ಸವಾಲುಗಳು, ಒತ್ತಡಗಳು, ಪ್ರಭಾವ ಎದು ರಾದರೂ ತೊಂದರೆಯಾಗುವುದಿಲ್ಲ. ನಮ್ಮ ಆತ್ಮಸಾಕ್ಷಿಗೆ ಸರಿಯಾಗಿ ಕಾರ್ಯನಿರ್ವಹಿಸಿದರೆ ಅದುವೇ ಬಹುದೊಡ್ಡ ನೈತಿಕ ಶಕ್ತಿಯನ್ನು ನಮಗೆ ಒದಗಿಸುತ್ತದೆ, ಎಂದಿಗೂ ಸೋಲಲು ಬಿಡುವುದಿಲ್ಲ…

ಇದು ಮೂಲ್ಕಿ ಠಾಣೆಯ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಶೀತಲ್‌ ಅಲಗೂರು ಅವರು ವ್ಯಕ್ತಪಡಿಸಿದ ಅಭಿ ಪ್ರಾಯ. ಸುವರ್ಣ ಸಂಭ್ರಮದಲ್ಲಿರುವ “ಉದಯವಾಣಿ’ಯು ಮಕ್ಕಳ ದಿನಾಚರಣೆಯ ಪ್ರಯುಕ್ತ
ನ. 13ರಂದು ಏರ್ಪಡಿಸಿದ “ಜೀವನಕಥನ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ವಿದ್ಯಾ ರ್ಥಿಗಳ ಜತೆಗೆ ಮಾಹಿತಿ ಮತ್ತು ಒಳನೋಟ ಯುಕ್ತ ಮಾತುಕತೆ ನಡೆಸಿಕೊಟ್ಟರು. ಪೊಲೀಸ್‌ ಸೇವೆಯ ಒಳ ಹೊರ ಗುಗಳನ್ನು ತೆರೆದಿಟ್ಟರು. ಮೂಲ್ಕಿ ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯ ಸಹ ಯೋಗದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಪೊಲೀಸರದು ದಿನದ 24 ತಾಸು, ವಾರದ ಏಳು ದಿನ ಕಾರ್ಯನಿರ್ವಹಣೆಗೆ ಸಿದ್ಧವಾಗಿಯೇ ಇರ ಬೇಕಾದ ವೃತ್ತಿ. ನಾಡಿಗೆ ಹಬ್ಬ ಹರಿದಿನಗಳು ಇದ್ದಾಗ ಪೊಲೀಸರಿಗೆ ಬಿಡುವು ಇರುವುದಿಲ್ಲ. ಹಬ್ಬದ, ಆಚರಣೆ ಮಾಡಲು ಸಮಯವಿರುವುದಿಲ್ಲ. ಬದಲಾಗಿ ಜನರ ರಕ್ಷಣೆ ಹಾಗೂ ಸಂವಿದಾನದ ವ್ಯಾಪ್ತಿಯಲ್ಲಿ ಕಾನೂನು ಪರಿಪಾಲನೆಯೇ ಪೊಲೀಸರ ಮುಖ್ಯ ಜವಾಬ್ದಾರಿ ಆಗಿರುತ್ತದೆ ಎಂದು ಶೀತಲ್‌ ಹೇಳಿದರು.

ನಾಡಿನಲ್ಲಿ ನಡೆಯುವ ಯಾವುದೇ ಹಬ್ಬ ಅಥವಾ ಕಾರ್ಯಕ್ರಮವಿದ್ದಾಗ ಪೊಲೀಸರಿಗೆ ಕೆಲಸದ ಒತ್ತಡ  ವಿರುತ್ತದೆ. ಜನರ ರಕ್ಷಣೆಯ ಜತೆ ಕಾನೂನು ಪರಿಪಾಲನೆಗೆ ಮಹತ್ವ ನೀಡಬೇಕಾಗುತ್ತದೆ. ಹಬ್ಬದ ಸಂಭ್ರಮ ಮುಗಿದ ಬಳಿಕ ಜನರೆಲ್ಲ ನೆಮ್ಮದಿಯ ವಾತಾವರಣದಲ್ಲಿ ಸಂತೋಷದಿಂದ ಇರುವಾಗ ಪೊಲೀ ಸರು ತಮ್ಮ ಕುಟುಂಬದ ಜತೆಗೆ ಹಬ್ಬದ ಆಚರಣೆ ಮಾಡುತ್ತಾರೆ. ಈ ರೀತಿ ನಮ್ಮ ಜೀವನ ಸಾಗುತ್ತದೆ. ಊರಿನ ಜನ, ಕ್ಷೇಮದಿಂದ ಇರುವಾಗ ಮಾತ್ರ ಪೊಲೀಸರಿಗೆ ಬಿಡುವಿನ ವಾತಾವರಣ ಇರಲಿದೆ ಎಂದರು.

Advertisement

ದಿನವೂ ಪತ್ರಿಕೆ ಓದಿ
ನಾನು ಕೂಡ ಸರಕಾರಿ ಶಾಲೆಯಲ್ಲಿ ಕಲಿತು ಪೊಲೀಸ್‌ ಇಲಾಖೆಗೆ ಸೇರಿದ್ದೇನೆ. ಬಾಗಲಕೋಟೆ ಮೂಲದ ಹಳ್ಳಿ ಹುಡುಗ ನಾನು. ಓದಿನ ಜತೆ ದಿನವೂ ಎರಡು ಮೂರು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ, ಪತ್ರಿಕೆಗಳಲ್ಲಿ ಬರುವ ವಿಶೇಷ ಶಬ್ದಗಳನ್ನು ಗ್ರಹಿಸಿ ಕೊಂಡು ನಿಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಿ. 5ನೇ ತರಗತಿಯಿಂದ 10ನೇ ತರಗತಿವರೆಗಿನ ಪಾಠಗಳನ್ನು ಶ್ರದ್ಧೆಯಿಂದ ಕಲಿತರೆ ಕೆಪಿಎಸ್‌ಸಿ, ಯುಪಿ ಎಸ್‌ಸಿ ಸಹಿತ ಸ್ಪರ್ಧಾ ತ್ಮಕ ಪರೀಕ್ಷೆ ಬರೆಯಲು ಸುಲಭ ವಾಗುತ್ತದೆ ಎಂದ ವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಕುಲ್ಯಾಡಿ ನರಸಿಂಹ ಪೈ, ಶಾಲೆಯ ಸಂಚಾಲಕ ಜಿ.ಜಿ. ಕಾಮತ್‌, ಕಾರ್ಯದರ್ಶಿ ಎಚ್‌. ರಾಮದಾಸ್‌ ಕಾಮತ್‌ ಮತ್ತು ಪ್ರಾಂಶುಪಾಲೆ ಚಂದ್ರಿಕಾ ಎಸ್‌. ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮೂಲ್ಕಿ ತಾಲೂಕು ವ್ಯಾಪ್ತಿಯ ಮೂಲ್ಕಿ, ಕಿನ್ನಿಗೋಳಿ, ಕಟೀಲು ಮತ್ತು ಹಳೆಯಂಗಡಿ ಪರಿಸರದ 20ಕ್ಕೂ ಮಿಕ್ಕಿದ ಶಾಲೆಗಳಿಂದ ಆಗಮಿಸಿದ ಆಯ್ದ ಮಕ್ಕಳು ಮುಕ್ತವಾಗಿ ಸಂವಾದ ನಡೆಸಿದರು. ಪೊಲೀಸ್‌ ಅಧಿಕಾರಿಯಾಗಿ ರಾಜಕಾರಣಿಗಳ ಒತ್ತಡ ಬಂದಾಗ ಏನು ಮಾಡುವಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಶೀತಲ್‌, ಅಲಗೂರು ರಾಜಕಾರಣಿಗಳು ಜನ ಪ್ರತಿನಿಧಿಗಳಿಂದ ಒತ್ತಡ ಯಾವತ್ತೂ ಬಂದಿಲ್ಲ. ಆದರೆ ಅವರು ಜನರ ದೂರಿನ ಬಗ್ಗೆ ಮಾಹಿತಿ ಪಡೆಯುವುದು ತಪ್ಪಲ್ಲ. ಅವರ ಮಾತು ಬಂದಾಗ ನಮ್ಮಲ್ಲಿ ಆಗುವ ಪ್ರಯತ್ನ ಮಾಡಿ ನ್ಯಾಯ ಸಿಗುವ ಕೆಲಸ ನಾವು ಮಾಡಬಹುದು ಎಂದರು.

ಮಕ್ಕಳು ಮೊಬೈಲ್‌ ಬಳಕೆ ಮತ್ತು ಲೈಸನ್ಸ್‌ರಹಿ ತವಾಗಿ ವಾಹನ ಚಾಲನೆ ಮಾಡುವ ಬಗ್ಗೆ ವ್ಯಾಸ ಮಹರ್ಷಿ ವಿದ್ಯಾಪೀಠದ ಅಧ್ಯಕ್ಷ ಕುಲ್ಯಾಡಿ ನರಸಿಂಹ ಪೈ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶೀತಲ್‌ ಅಲಗೂರು, ಅಪ್ರಾಪ್ತ ವಯಸ್ಕ ಮಕ್ಕಳು ವಾಹನ ಚಾಲನೆ ಮಾಡು ವುದು ಶಿಕ್ಷಾರ್ಹ ಅಪರಾಧ. ಇದರಿಂದ ಮಕ್ಕಳ ಭವಿಷ್ಯಕ್ಕೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ. ನೀವು ಭವಿಷ್ಯದಲ್ಲಿ ಒಳ್ಳೆಯ ಅಧಿಕಾರಿಯಾಗಬೇಕೆಂಬ ಕನಸು ನುಚ್ಚುನೂರು ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಮಕ್ಕಳು ವಾಹನ ಚಾಲನೆ ಮಾಡಬೇಡಿ ಎಂದರಲ್ಲದೆ, ಮೊಬೈಲ್‌ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆಯೂ ಮಕ್ಕಳಿಗೆ ಕಿವಿಮಾತು ಹೇಳಿದರು.

“ಉದಯವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದನ್ನು ನೆನಪಿಸಿಕೊಂಡು ಪ್ರಶ್ನೆ ಕೇಳಿದ ಎಸ್‌ವಿಎಂವಿಪಿ ಶಾಲೆಯ ಹಿತಾ, ಶಾಲೆಗೆ ಚಕ್ಕರ್‌ ಹೊಡೆಯುವ ಮಕ್ಕಳನ್ನು ಮರಳಿ ಶಾಲೆಗೆ ದಾಖಲಿಸುವ ಬಗ್ಗೆ ಪೊಲೀಸರಿಗೆ ಕಾನೂನಿನಲ್ಲಿ ಇರುವ ಅವಕಾಶ ಬಗ್ಗೆ ಪ್ರಶ್ನಿಸಿದರು. ಉತ್ತರಿಸಿದ ಶೀತಲ್‌ ಅಲಗೂರು, ಹೆತ್ತವರು ಶಾಲೆಯ ವತಿಯಿಂದ ತಿಳಿಸಿದರೆ ಪೊಲೀಸರು ಅಂತಹ ವಿದ್ಯಾರ್ಥಿಯ ಮನವೊಲಿಸಿ ಶಾಲೆಗೆ ಕರೆತರುವ ಕೆಲಸ ನಡೆಸಬಹುದು ಎಂದು ತಿಳಿಸಿದರು.

ಉದಯವಾಣಿ ಸಂಪಾದಕೀಯ ಬಳಗದ ಶಂಕರನಾರಾಯಣ ಮತ್ತು ಸತ್ಯಗಣಪತಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಮೂಲ್ಕಿ ವರದಿಗಾರ ಎಂ. ಸರ್ವೋತ್ತಮ ಅಂಚನ್‌ ಸ್ವಾಗತಿಸಿದರು. ಕಿನ್ನಿಗೋಳಿ ವರದಿಗಾರ ರಘುನಾಥ ಕಾಮತ್‌ ಕೆಂಚನಕೆರೆ ನಿರೂಪಿಸಿದರು. ಹಳೆಯಂಗಡಿ ವರದಿಗಾರ ನರೇಂದ್ರ ಕೆರೆಕಾಡು ವಂದಿಸಿದರು.

ಪೊಲೀಸ್‌ ವೃತ್ತಿಯ ಆಳ ಅರಿವು ಬಿಚ್ಚಿಟ್ಟ ಸಂವಾದ
ಶ್ರೀವರ್ಷಾ: ನಿಮಗೆ ಬಿಡುವು ಯಾವಾಗ ಮತ್ತು ನಿಮ್ಮ ಕುಟುಂಬ ದವರ ಜತೆ ಯಾವಾಗ ಹೇಗೆ ಇರುತ್ತೀರಿ ?
ಎಸ್‌ಐ: ಪೊಲೀಸರ ಕೆಲಸ ದಿನದ 24 ಗಂಟೆ ಹಾಗೂ ವಾರದ 7 ದಿನವೂ ಇರುತ್ತದೆ. ನಮಗೆ ಬಿಡುವು ಇರುವು ದಿಲ್ಲ. ಇಷ್ಟು ಗಂಟೆಗೆ ಮನೆಗೆ ಬರುತ್ತೇನೆ ಎಂದು ಹೇಳಲು ಸಾಧ್ಯ ವಿಲ್ಲ. ಒತ್ತಡವಿದ್ದರೆ ಕೆಲವೊಮ್ಮೆ ಎರಡೂ ದಿನವೂ ಆಗಬಹುದು.

ವಿಘ್ನೇಶ್‌ ಮಲ್ಯ: ನಿಮಗೆ ಪೊಲೀಸ್‌ ಅಧಿಕಾರಿಯಾ ಗುವ ಪ್ರೇರಣೆ ಹೇಗೆ, ಯಾರಿಂದ ಆಯಿತು?
ಎಸ್‌ಐ: ನನಗೆ ಸರಕಾರದ ಅಧಿಕಾರಿಯಾಗಬೇಕು, ಜನರಿಗೆ ನಾನು ನ್ಯಾಯ ಒದಗಿಸಬೇಕು ಎಂಬ ಆಸೆ ಬಾಲ್ಯದಿಂದಲೂ ಇತ್ತು. ಇದೇ ನನಗೆ ಪ್ರೇರಣೆಯಾಯಿತು. ಕಠಿನ ಪರಿಶ್ರಮದಿಂದ ಈ ಗೌರವದ ಹುದ್ದೆಗೆ ಏರಲು ಸಾಧ್ಯವಾಯಿತು.

ನಿತ್ಯಾನಂದ: ಗೋಸಾಗಣೆಯ ಕಾಯಿದೆ, ಅಕ್ರಮ ಗೋಸಾಗಾಟದ ಬಗ್ಗೆ ಮಾಹಿತಿ ನೀಡುತ್ತೀರಾ ?
ಎಸ್‌ಐ: ಇದೊಂದು ವಿಶೇಷ ಕಾನೂನು. ಇಲ್ಲಿ ಪಶು ವೈದ್ಯರು ಗೋವಿನ ಬಗ್ಗೆ ನಿಷ್ಪ್ರಯೋಜಕ ಎಂದು ವರದಿ ನೀಡಿದರೆ ಮಾತ್ರ ಅದನ್ನು ಉಪಯೋ ಗಿಸಲು ಪರವಾನಿಗೆ ಪಡೆದು ಸಾಗಾಟ ನಡೆಸಬಹುದು. ಅಕ್ರಮವಾಗಿ ಸಾಗಾಟ ನಡೆಸಿದರೆ ಕ್ರಮಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ.

ಮರೀನಾ: ಬಾಲಾಪರಾಧಿಗಳ ಶಿಕ್ಷೆಗೆ ಕಾನೂನಿನಲ್ಲಿ ಇರುವ ಅವಕಾಶಗಳೇನು ?
ಎಸ್‌ಐ: ಬಾಲಾಪರಾಧಿಯಾದವನು ಸಣ್ಣ ಪುಟ್ಟ ತಪ್ಪು ಮಾಡಿದಾಗ ಮಾತ್ರ ಅರಿವಿಲ್ಲದೆ ಮಾಡಿದ ಅಪರಾಧ ಎಂದು ಪರಿಗಣಿಸಿ ಕಾನೂನಿನ ಸಂಘರ್ಷಕ್ಕೆ ಒಳಗಾದವ ಎಂಬ ರಿಯಾಯಿತಿ ಇರಬಹುದು. ಆದರೆ ಘೋರ ಅಪರಾಧ ಮಾಡಿದಾಗ ರಿಯಾಯಿತಿ ಇಲ್ಲ ಹಾಗೂ ಕಾನೂನಿನಲ್ಲಿ ಆತನಿಗೂ ಶಿಕ್ಷೆ ಇದೆ.

ಶ್ರೀಶ ಎಸ್‌. ಶೆಟ್ಟಿ: ಪ್ರಾಮಾಣಿಕ ಅಧಿಕಾರಿಗಳಿಗೆ ನಿರಂತರ ವರ್ಗಾವಣೆ ಅಥವಾ ಪ್ರಕರಣಗಳಲ್ಲಿ ಸಿಲುಕಿಸುವ ಯತ್ನ ಮಾಡುತ್ತಾರಲ್ಲವೇ?
ಎಸ್‌ಐ: ಆತ್ಮಸಾಕ್ಷಿಯಾಗಿ ಕೆಲಸ ನಿರ್ವಹಿಸುವ ದಕ್ಷ, ಪ್ರಾಮಾಣಿಕ ಅಧಿಕಾರಿ ಎಲ್ಲೇ ಇರಲಿ; ಒಳ್ಳೆಯ ರೀತಿಯಲ್ಲಿ ಕೆಲಸ ನಿರ್ವಹಿಸಿಕೊಂಡು ಹೋದರೆ ಸಾಕು. ವರ್ಗಾವಣೆ ಸಹಿತ ಇತರ ಒತ್ತಡ ಇರುವುದು ಸಾಮಾನ್ಯ.

ಪ್ರತ್ಯೂಷ್‌: ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿ ಮರೆಯಲಾಗದ
ಅನುಭವ ಇದ್ದರೆ ತಿಳಿಸುವಿರಾ ?
ಎಸ್‌ಐ: ಇಲ್ಲಿನ ಮತ್ತು ಕೊಲ್ಲೂರಿನ ದೇವಾಲಯವೊಂದರಲ್ಲಿ ನಡೆದ ಕಳವು ಪ್ರಕರಣದ ಆರೋಪಿಯನ್ನು ಬಂಧಿಸಿರುವುದು ಮರೆಯಲಾಗದ ಅನುಭವಗಳಲ್ಲಿ ಒಂದಾಗಿದೆ. ಆತ ನಟೋರಿಯಸ್‌ ಕಳ್ಳನಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next