Advertisement

ಪೊಲೀಸರು ನೈತಿಕವಾಗಿ ಕುಸಿದುಹೋಗಿದ್ದಾರೆ: ಹುಬ್ಬಳ್ಳಿ ಗಲಭೆ ಕುರಿತು ಸಿದ್ದರಾಮಯ್ಯ

10:01 PM Apr 17, 2022 | Team Udayavani |

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದಿರುವ ಹಿಂಸಾಚಾರವನ್ನು ಖಂಡಿಸಿ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಗಳನ್ನೂ ಮಾಡಿ ಮತ್ತೆ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Advertisement

‘ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆಗಳು ಅತ್ಯಂತ ಖಂಡನೀಯ. ಇದಕ್ಕೆ ಹೊಣೆಗಾರರಾಗಿರುವ ಕಿಡಿಗೇಡಿಗಳು ಯಾವುದೇ ಜಾತಿ, ಧರ್ಮ ಇಲ್ಲವೇ ಪಕ್ಷದವರೇ ಆಗಿರಲಿ ಪೊಲೀಸರು ಅವರನ್ನು ಬಂಧಿಸಿ ಅಲ್ಲಿನ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು. ಪೊಲೀಸರು ನಿಷ್ಪಕ್ಷಪಾತತನದಿಂದ ಕಾರ್ಯನಿರ್ವಹಿಸಲು ಬಿಜೆಪಿ ಸರ್ಕಾರ ಅವಕಾಶ ನೀಡಬೇಕು’ ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.

‘ಕೋಮುದ್ವೇಷವನ್ನು ಹುಟ್ಟುಹಾಕಿ, ಹರಡುವ ಮೂಲಕ ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕೆಡಿಸುವ ಹುನ್ನಾರವನ್ನು ಸಮಾಜವಿರೋಧಿ ಶಕ್ತಿಗಳು ಸತತವಾಗಿ ನಡೆಸುತ್ತಾ ಬಂದಿರುವುದನ್ನು ಕಾಣಬಹುದು. ಇದು ಕೇವಲ ಆಕಸ್ಮಿಕವಾದ ಘಟನೆಗಳಾಗಿರದೆ ಇದರ ಹಿಂದೆ ಯೋಜಿತ ಕಾರ್ಯಸೂಚಿ ಇದ್ದ ಹಾಗೆ ಕಾಣುತ್ತಿದೆ’ ಎಂದು ಟ್ವೀಟ್ ಮೂಲಕ ಅಭಿಪ್ರಾಯ ಹೊರ ಹಾಕಿದ್ದಾರೆ.

‘ರಾಜ್ಯದ ಕಾನೂನು ವ್ಯವಸ್ಥೆಯಲ್ಲಿ ಹಿಂದೆಂದೂ ಈ ರೀತಿಯ ಅರಾಜಕತೆ ಕಂಡಿರಲಿಲ್ಲ. ಇದಕ್ಕೆ ಅಸಮರ್ಥ ಮತ್ತು ದುರ್ಬಲ ಗೃಹಸಚಿವರೇ ಮುಖ್ಯ ಕಾರಣ ಎನ್ನುವುದು ನಿರ್ವಿವಾದ. ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಸಮಾಜವಿರೋಧಿ ಶಕ್ತಿಗಳು ಬೀದಿಗಳಿಯುತ್ತಿರುವಂತೆ ಕಾಣುತ್ತಿದೆ’ ಎಂದು ಬರೆದಿದ್ದಾರೆ.

‘ರಾಜ್ಯದ ಕೆಲವು ಸಚಿವರು ಮತ್ತು ಆಡಳಿತಾರೂಢ ಪಕ್ಷದ ನಾಯಕರು ಪೊಲೀಸರ ಕಾರ್ಯನಿರ್ವಹಣೆಯಲ್ಲಿ ಮತ್ತೆ ಮತ್ತೆ ಮಧ್ಯಪ್ರವೇಶಿಸಿ, ತಮಗೆ ಅನುಕೂಲವಾಗುವಂತೆ ಕೆಲಸ ಮಾಡುವಂತೆ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ. ಇದರಿಂದ ಪೊಲೀಸರು ನೈತಿಕವಾಗಿ ಕುಸಿದುಹೋಗಿದ್ದಾರೆ. ಇದು ಅತ್ಯಂತ ಕಳವಳಕಾರಿ ಬೆಳವಣಿಗೆ’ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.

Advertisement

‘ರಾಜಕೀಯದ ಒತ್ತಡಕ್ಕೆ ಮಣಿದು ಪೊಲೀಸರು ಅಮಾಯಕರನ್ನು ಬಂಧಿಸುವ ಮತ್ತು ತನಿಖೆಯನ್ನೇ ನಡೆಸದೆ ಅಪರಾಧಿಗಳ ಹೆಸರನ್ನು ಮಾಧ್ಯಮಕ್ಕೆ ತಿಳಿಸುವ ಕೆಲಸವನ್ನು ಮಾಡಬಾರದು. ಇದರಿಂದ ಪರಿಸ್ಥಿತಿ ಉಲ್ಭಣಗೊಂಡರೆ ಅದರ ನಿಯಂತ್ರಣದ ಭಾರ ತಮ್ಮ ಮೇಲೆಯೇ ಬೀಳಲಿದೆ ಎಂಬ ಎಚ್ಚರ ಪೊಲೀಸರಿಗೂ ಇರಬೇಕಾಗುತ್ತದೆ.’ಎಂದು ಬರೆದಿದ್ದಾರೆ.

‘ಅಪರಾಧಿಗಳು ಕೇವಲ ಅಪರಾಧಿಗಳು, ಅವರಿಗೆ ಜಾತಿ, ಧರ್ಮಗಳಿರುವುದಿಲ್ಲ. ಇದನ್ನು ಸರ್ಕಾರ, ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಮೊದಲು ತಿಳಿದುಕೊಳ್ಳಬೇಕು. ಯಾರದೋ ಪ್ರಚೋದನೆಯಿಂದ ವಿವೇಚನೆಯನ್ನು ಕಳೆದುಕೊಂಡು ಸಿಟ್ಟಿನ ಕೈಗೆ ವಿವೇಕವನ್ನು ಕೊಡಬಾರದು, ಇಂತಹ ಸಂದರ್ಭಗಳನ್ನು ಸಹನೆ, ಸಂಯಮಗಳ ಮೂಲಕ ಎದುರಿಸಬೇಕು’ ಎಂದು ಸಲಹೆ ನೀಡಿದ್ದಾರೆ.

‘ಅಪರಾಧದ ಪ್ರಶ್ನೆ ಎದುರಾದಾಗ ಕಾಂಗ್ರೆಸ್ ಪಕ್ಷ ಯಾವುದೇ ಜಾತಿ, ಧರ್ಮದ ಪರವಾಗಿ ಇರುವುದಿಲ್ಲ. ನಾವು ಸತ್ಯ, ನ್ಯಾಯ ಮತ್ತು ನೆಲದ ಕಾನೂನಿಗೆ ಬದ್ಧ. ಪೊಲೀಸರು ನೆಲದ ಕಾನೂನಿಗೆ ನಿಷ್ಠರಾಗಿ ಕೈಗೊಳ್ಳುವ ಕ್ರಮಗಳಿಗೆ ನಮ್ಮ ಬೆಂಬಲ ಇದೆ. ರಾಜಕೀಯ ಪೂರ್ವಗ್ರಹಪೀಡಿತರಾಗಿ ಕೈಗೊಳ್ಳುವ ನಿರ್ಧಾರಗಳಿಗಷ್ಟೇ ನಮ್ಮ ವಿರೋಧವಿದೆ’ ಎಂದು ಅಭಿಪ್ರಾಯ ಹೊರ ಹಾಕಿ ಟೀಕಾಕಾರರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next