ನವದೆಹಲಿ: ಪಂಜಾಬಿ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಪ್ರಕರಣದ ಮಾಸ್ಟರ್ ಮೈಂಡ್ ಗೋಲ್ಡಿ ಬ್ರಾರ್ ನನ್ನು ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಹೇಳಿದ್ದರು. ಆದರೆ ಈ ಸುದ್ದಿಯ ಬೆನ್ನಲ್ಲೇ ಗೋಲ್ಡಿ ಬ್ರಾರ್ ಬಂಧನವಾಗಿಲ್ಲ ಎಂದು ವರದಿಯೊಂದು ತಿಳಿಸಿದೆ.
ಡಿ. 2 ರಂದು ಪಂಜಾಬ್ ಸಿಎಂ ಭಗವಂತ್ ಮಾನ್ ಗೋಲ್ಡಿ ಬ್ರಾರ್ ನನ್ನು ಬಂಧಿಸಲಾಗಿದೆ. ಆತನನ್ನು ಶೀಘ್ರದಲ್ಲಿ ಅಮೆರಿಕಾದಿಂದ ಕರೆ ತರುತ್ತೇವೆ ಎಂದು ಮಾಧ್ಯಮದ ಮುಂದೆ ಬಂಧನದ ವಿಚಾರವನ್ನು ಅಧಿಕೃತವಾಗಿ ಹೇಳಿದ್ದರು. ಆದರೆ ಗೋಲ್ಡಿ ಬ್ರಾರ್ ಎನ್ನುವ ಪಾತಕಿ ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದು, ನಾನು ಅಮೆರಿಕಾದಲ್ಲಿಲ್ಲ, ನನ್ನನ್ನು ಯಾರೂ ಬಂಧಿಸಿಯೂ ಇಲ್ಲ ಎಂದು ಹೇಳಿದ್ದಾನೆ.
ಈ ಯೂಟ್ಯೂಬ್ ನಲ್ಲಿರುವ ವ್ಯಕ್ತಿ ತನ್ನನ್ನು ತಾನು ಗೋಲ್ಡಿ ಎಂದು ಕರೆದುಕೊಂಡಿದ್ದಾನೆ. ಆದರೆ ಈ ವಿಡಿಯೋ ಕುರಿತು ಸತ್ಯಾಸತ್ಯತೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎಂದು ವರದಿ ತಿಳಿಸಿದೆ.
ಈ ಕುರಿತು ಮಾತನಾಡಿರುವ ಪಂಜಾಬ್ ಸರ್ಕಾರದ ವಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವಾ “ಗೃಹ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯದ ಅನುಮೋದನೆಗೂ ಕಾಯದೆ ಸಿಎಂ ಹೇಳಿಕೆಗೆ ಮುಂದಾದರು. ಅವರು ಸಿಧು ಮೂಸೆವಾಲಾ ಹಂತಕನನ್ನು ಹಿಡಿದಿದ್ದಾರೆ ಎಂದು ಮತದಾರರನ್ನು ಮೆಚ್ಚಿಸಲು ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ. 2022 ರ ಮೇ 29 ರಂದು ಸಿಧು ಮೂಸೆವಾಲಾ ಅವರ ಮೇಲೆ ದಾಳಿ ಮಾಡಿ ಅವರ ಪ್ರಾಣ ತೆಗೆದಿದ್ದರು.