Advertisement

ಮೂರಾಜೆ ಕೊಪ್ಪ ಶಾಲೆಯ ಛಾವಣಿ ಬಿರುಕು

11:04 AM Jul 21, 2018 | Team Udayavani |

ಕಡಬ : ಕೋಡಿಂಬಾಳ ಗ್ರಾಮದ ಮೂರಾಜೆ ಕೊಪ್ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಗೋಡೆ ಹಾಗೂ ಛಾವಣಿಯಲ್ಲಿ ಬಿರುಕು ಕಂಡುಬಂದಿರುವ ಕಾರಣದಿಂದಾಗಿ ಶಾಲಾ ವಿದ್ಯಾರ್ಥಿಗಳು ಆತಂಕದಿಂದಲೇ ತರಗತಿ ಕೊಠಡಿಯಲ್ಲಿ ಕುಳಿತು ಪಾಠ ಕೇಳುವಂತಹ ಅತಂತ್ರ ಸ್ಥಿತಿ ಅನುಭವಿಸುತ್ತಿದ್ದಾರೆ.

Advertisement

ಕಳಪೆ ಕಾಮಗಾರಿ
ಸುಮಾರು 40 ವಿದ್ಯಾರ್ಥಿಗಳಿರುವ ಮೂರಾಜೆ ಕೊಪ್ಪ ಶಾಲೆ ಆರಂಭಗೊಂಡು ಕೇವಲ 15 ವರ್ಷಗಳಷ್ಟೇ ಆಗಿದೆ. ಸುಮಾರು 13 ವರ್ಷಗಳ ಹಿಂದೆ ಶಾಲೆಗೆ ಕಟ್ಟಡ ನಿರ್ಮಾಣಗೊಂಡಿದೆ. 2 ತರಗತಿ ಕೊಠಡಿಗಳು ಹಾಗೂ 1 ಕಚೇರಿ ಕೊಠಡಿ ಇರುವ ಈ ಕಟ್ಟಡದ 1ತರಗತಿ ಕೊಠಡಿಯ ಕಾಂಕ್ರೀಟ್‌ ಛಾವಣಿಯಲ್ಲಿ ಬಿರುಕು ಕಾಣಿಸಿಕೊಂಡು ಛಾವಣಿಗೆ ಹಾಕಿದ ಕಬ್ಬಿಣದ ಸರಳುಗಳು ಹೊರಗೆ ಕಾಣಿಸುತ್ತಿವೆ. ಕಳಪೆ ಕಾಮಗಾರಿಯಿಂದಾಗಿ ಛಾವಣಿ ಬಾಗಿರುವುದರೊಂದಿಗೆ ಗೋಡೆಯೂ ಬಿರುಕುಬಿಟ್ಟು ಅಪಾಯವನ್ನು ಆಹ್ವಾನಿಸುವಂತಿದೆ. 

ಗ್ರಾಮಸಭೆಯಲ್ಲಿ ವಿಚಾರ ಪ್ರಸ್ತಾವ
ಶಾಲೆಯ ಕಟ್ಟಡ ಶಿಥಿಲಗೊಂಡಿರುವ ವಿಚಾರವನ್ನು ಗುರುವಾರ (ಜು.19)ರಂದು ಜರಗಿದ ಕಡಬ ಗ್ರಾಮಸಭೆಯಲ್ಲಿ ಪ್ರಸ್ತಾವಿಸಿ ಸ್ಥಳೀಯ ಮುಂದಾಳು ಸುರೇಂದ್ರ ಅವರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಅಪಾಯ ಸಂಭವಿಸದಂತೆ ಮುಂಜಾಗರೂಕತೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಾಗೂ ಶಿಕ್ಷಣ ಇಲಾಖಾ ಸಿಆರ್‌ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಶಾಲಾ ಮುಖ್ಯಶಿಕ್ಷಕ ಆನಂದ ಮೂರ್ತಿ ತಿಳಿಸಿದ್ದಾರೆ.

ಮಕ್ಕಳಿದ್ದರೂ ಮುಚ್ಚುವ ಸ್ಥಿತಿ
ಕಟ್ಟಡ ಬಿರುಕು ಬಿಟ್ಟಿರುವುದರಿಂದ ಹೆತ್ತವರು ಮಕ್ಕಳನ್ನು ಆತಂಕದಿಂದಲೇ ಶಾಲೆಗೆ ಕಳುಹಿಸುತ್ತಿದ್ದಾರೆ. ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳದೇ ಹೋದರೆ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ಹೆತ್ತವರು ನಿರ್ಧರಿಸಿದ್ದಾರೆ. ಮಕ್ಕಳಿಲ್ಲದೆ ಅಲ್ಲಲ್ಲಿ ಸರಕಾರಿ ಶಾಲೆಗಳು ಮುಚ್ಚುಗಡೆಯಾಗುತ್ತಿರುವ ಸಮಯದಲ್ಲಿ ಮಕ್ಕಳಿದ್ದರೂ ಕಟ್ಟಡ ಸರಿ ಇಲ್ಲದೇ ಮೂರಾಜೆ ಶಾಲೆ ಮುಚ್ಚುವ ಸ್ಥಿತಿ ತಲುಪಿರುವುದು ವಿಷಾದದ ಸಂಗತಿ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಕೂಡಲೇ ಗಮನಹರಿಸಬೇಕಿದೆ.
– ರಮೇಶ್‌ ಅಡೀಲು
ಎಸ್‌ಡಿಎಂಸಿ ಮಾಜಿ ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next