Advertisement

ಮನಸೂರೆಗೊಂಡ ಮೂಕಜ್ಜಿ ..

04:35 PM Jun 22, 2019 | Team Udayavani |

ಇತ್ತೀಚಿಗೆ ರಂಗಶಂಕರದಲ್ಲಿ ಪ್ರದರ್ಶನ ಕಂಡ ಸಾಹಿತಿ ಶಿವರಾಮ ಕಾರಂತರ “ಮೂಕಜ್ಜಿಯ ಕನಸುಗಳು’ ನಾಟಕ ಕ್ರಿಕೆಟ್‌ ಭರಾಟೆಯ ನಡುವೆಯೂ ಕಿಕ್ಕಿರಿದು ತುಂಬಿತ್ತು. ಜನಪ್ರಿಯವಾದ ಅದರಲ್ಲೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಯೊಂದನ್ನು ರಂಗರೂಪಕ್ಕೆ ಅಳವಡಿಸುವುದೆಂದರೆ ಅದು ಸವಾಲೇ ಸರಿ.

Advertisement

ನಿರ್ದೇಶಕ ಬಿ.ವಿ. ರಾಜಾರಾಮ್‌ ಈ ಸವಾಲನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾಟಕದ ರಂಗಸಜ್ಜಿಕೆ, ಬೆಳಕು ಅದ್ಭುತವಾಗಿತ್ತು. ಕಲಾವಿದರೂ ಪಾತ್ರವೇ ತಾವಾಗಿ ಅಭಿನಯಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಎಲ್ಲ ಪಾತ್ರಗಳ ಸೇತುವಾಗಿ ಮಂಗಳ ಅವರ ಅಭಿನಯ, ಮಾಣಿಯಾಗಿ ಸಿದ್ಧಾರ್ಥ, ಸೀತೆಯಾಗಿ ವಿದ್ಯಾ, ತಿಪ್ಪಜ್ಜಿಯಾಗಿ ಲೀಲಾ ಬಸವರಾಜು ಅವರ ಅಭಿನಯಕ್ಕೆ ಎಷ್ಟು ಕರತಾಡನ ಮಾಡಿದರೂ ಸಾಲದು.

ಅದರಲ್ಲೂ ಮೂಕಜ್ಜಿ ಹಾಗು ಆಕೆಯ ಬಾಲ್ಯ ಗೆಳತಿ ತಿಪ್ಪಜ್ಜಿಯ ಸಮ್ಮಿಲನದ ದೃಶ್ಯವಂತೂ ನೋಡುಗರ ಹೃದಯದಲ್ಲಿ ಅಚ್ಚೊತ್ತಿಬಿಡುತ್ತದೆ. ಅಜ್ಜಿಯ ಪಾತ್ರದಲ್ಲಿ ನಟಿಸಿರುವ ಲೀಲಾ ಬಸವರಾಜು ಅವರ ಅಭಿನಯದ ಬಗ್ಗೆ ಹೇಳದಿದ್ದರೆ ಅಪೂರ್ಣವಾದೀತು. 73ರ ಹರೆಯದಲ್ಲೂ ಪ್ರಖರ ಸಂಭಾಷಣೆ ಉಚ್ಚಾರಣೆ, ಸನ್ನಿವೇಶಕ್ಕೆ ತಕ್ಕಂತೆ ರಸಭಾವ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿತು. ಎಪ್ಪತೂ¾ರರ ಈ ಕಲಾವಿದೆ ಇಂದಿನ ಕಲಾವಿದರಿಗೆ ಸ್ಫೂರ್ತಿ ಎಂದರೆ ತಪ್ಪಾಗಲಾರದು.

ಡಾ.ಗುರುರಾಜ ಪೋಶೆಟ್ಟಿಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next