Advertisement

50 ವರ್ಷಗಳ ಬಳಿಕ ಮೂಕಜ್ಜಿ !

04:58 PM Jun 08, 2019 | mahesh |

ಜ್ಞಾನಪೀತ ಪುರಸ್ಕೃತ ಡಾ| ಕೋಟ ಶಿವರಾಮ ಕಾರಂತರು 1968ರಲ್ಲಿ ಪ್ರಕಟಿಸಿದ್ದ “ಮೂಕಜ್ಜಿಯ ಕನಸುಗಳು’ ಕಾದಂಬರಿಗೆ 2018ಕ್ಕೆ 50 ವರ್ಷಗಳು ತುಂಬುತ್ತವೆ. ಈ ಕೃತಿಯ ತಾತ್ವಿಕ ನೆಲೆಗಟ್ಟೇನು, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ನೆನಪುಗಳನ್ನು ವಿಶ್ಲೇಷಿಸುವ ಕೃತಿಯಾಗಿ ಇದು ಓದುಗರ ಪ್ರಜ್ಞಾವಲಯದ ಮೇಲೆ ಬೀರುವ ಪರಿಣಾಮವೆಂಥದು, ವಿಮರ್ಶಕರ ದೃಷ್ಟಿಯಲ್ಲಿ ಇದು ಕಾರಂತರ ಶ್ರೇಷ್ಠಕೃತಿ ಅನ್ನಿಸಿಕೊಳ್ಳದಿದ್ದರೂ ನಿಸರ್ಗದ ಸೃಷ್ಟಿಶೀಲತೆಯ ನಿಗೂಢಗಳನ್ನು ಬಗೆಯುವ/ಚರ್ಚಿಸುವ ಕೃತಿಯಾಗಿ ಇದು ಯಾವೆಲ್ಲ ರೀತಿಗಳಲ್ಲಿ ವಿಶಿಷ್ಟತೆಯನ್ನು ಮೆರೆದಿದೆ, ಕಾರಂತರ ಜೀವನ ದರ್ಶನವನ್ನು ಮೂಕಜ್ಜಿ ಯಾವ್ಯಾವ ಬಗೆಗಳಲ್ಲಿ ಪ್ರತಿನಿಧಿಸುತ್ತಾಳೆ; ಕನ್ನಡದ ಮನಸ್ಸುಗಳ ಬುದ್ಧಿ-ಭಾವಗಳ ಬೆಳಸಿಗೆ ಈ ಕೃತಿ ಮಾಡಿರುವ ಉಪಕಾರವೇನು ಎಂಬುದನ್ನು ಬೇರೆ ಬೇರೆ ಮಗ್ಗುಲುಗಳಲ್ಲಿ ಚರ್ಚಿಸುವ 16 ವಿಶ್ಲೇಷಣ-ಬರಹಗಳನ್ನು ಇಲ್ಲಿ ಕಲೆಹಾಕಲಾಗಿದೆ. ಬದುಕಿನ ಯಥಾರ್ಥ ಚಿತ್ರಣ, ಮಾನವಶಾಸ್ತ್ರದ ಹಾಗೂ ಮಾನವೇತಿಹಾಸದ ದೃಷ್ಟಿಕೋನ, ಕನ್ನಡದ ಗ್ರಾಮೀಣ ವ್ಯಕ್ತಿತ್ವಗಳ ಜೀವನ ಚರಿತ್ರೆಯ ಅವಲೋಕನದಂಥ ಮುಖ್ಯ ನೆಲೆಗಳಿಂದ ಕಾರಂತರ ಕಾದಂಬರಿಗಳನ್ನು ನೋಡಬೇಕಾದ ಅಗತ್ಯವನ್ನು ಇಲ್ಲಿನ ಲೇಖನಗಳಲ್ಲೊಂದು (ಎಸ್‌ಡಿ ಹೆಗಡೆ) ಒತ್ತಿ ಹೇಳುತ್ತದೆ. ಪರಂಪರಾಗತ ನಂಬಿಕೆಗಳನ್ನು ಅಲುಗಿಸುವ ಈ ಕಾದಂಬರಿ ಈ ದೇಶದ ಮನಶಾÏಸ್ತ್ರಜ್ಞರ ಗಮನವನ್ನೇಕೆ ಸೆಳೆದಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿರುವ ಡಾ| ಜಿ.ಎಸ್‌. ಶಿವರುದ್ರಪ್ಪ , ಸಾಹಿತ್ಯ ವಿಮರ್ಶಕ ವಿವಿಧ ಜ್ಞಾನಶಾಖೆಗಳ ತಿಳಿವಿನಿಂದ ಸಂಪನ್ನನಾದರೆ ಮಾತ್ರ ನಮ್ಮಲ್ಲಿ ಸಮಗ್ರ ವಿಮರ್ಶೆ ಬೆಳೆಯುವುದು ಸಾಧ್ಯ ಎನ್ನುವ ಮೂಲಕ ಕೃತಿಕಾರನಿಗೆ ಆಗುವ ಅನ್ಯಾಯವನ್ನು ಎತ್ತಿ ಹೇಳಿದ್ದಾರೆ. ಕಾದಂಬರಿಯ ಬಗ್ಗೆ ಬಂದಿರುವ ಟೀಕೆಗಳನ್ನು ಚರ್ಚಿಸುವ ಲೇಖನಗಳೂ ಇಲ್ಲಿವೆ. ಚಾರಿತ್ರಿಕ ನೆನಪುಗಳ ಕಾದಂಬರಿ (ಕಿರಂ), ಮಾನವತಾವಾದದ ತತ್ತಾ$Ìದರ್ಶ (ಶಾಂತಿನಾಥ ದೇಸಾಯಿ) ಲೇಖನಗಳು ಕಾದಂಬರಿ ರಚನೆಯ ಹಿಂದಿನ ಪ್ರೇರಣೆ ಗಳನ್ನು ಚರ್ಚಿಸಿದರೆ, “ಅರಗದ ಜೀವನ ದರ್ಶನ’ (ಸುಬ್ರಾಯ ಚೊಕ್ಕಾಡಿ) ಎಂದು ಬಣ್ಣಿಸುವ ಬರಹ, ಈ ಬಣ್ಣನೆಯನ್ನು ಋಜು ಪಡಿಸಲು ತಕ್ಕುದಾದ ಕಾರಣಗಳನ್ನು ನೀಡಿ, ಭಾಷೆ ಹಾಗೂ ತಂತ್ರದ ದೃಷ್ಟಿಯಿಂದ ಈ ಕೃತಿ ಎಲ್ಲೆಲ್ಲಿ ಮುಗ್ಗರಿಸಿದೆ ಎಂದು ಬೆಟ್ಟುಮಾಡಿ ತೋರಿಸುವ ಪ್ರಯತ್ನವಾಗಿದೆ. ಕಾರಂತರ ವಿಚಾರಗಳ ಮುಖವಾಡವಾಗಿ ಮೂಕಜ್ಜಿಯ ಪಾತ್ರ ಸೃಷ್ಟಿಯಾಗಿದೆಯೆಂಬಂಥ ಟೀಕೆಗಳನ್ನು ಟಿ.ಪಿ. ಅಶೋಕ, ಸಕಾರಣವಾಗಿ ತಳ್ಳಿ ಹಾಕಿದ್ದಾರೆ. ಕಾರಂತರ ವೈಚಾರಿಕತೆ ಮತ್ತು ಅನ್ವೇಷಣೆಗಳಿಗೆ ಹಿಡಿದ ಕನ್ನಡಿ ಈ ಕಾದಂಬರಿ ಎಂದು ಈ ಸಂಪುಟದ ಸಂಪಾದಕರು ನಿವೇದಿಸಿಕೊಂಡಿದ್ದಾರೆ. ಕಳೆದ ತಲೆಮಾರಿನ ಒಂದು ಕೃತಿ ಯಾವೆಲ್ಲ ಬಗೆಯ ಪರಿಣಾಮಗಳನ್ನು ಬೀರಿದೆ; ಯಾಕೆ ಈ ಕೃತಿ ಇನ್ನೂ ತಾಜಾತನ ಕಳೆದುಕೊಂಡಿಲ್ಲ ಎಂಬುದಕ್ಕೆ ಪುರಾವೆ ಸಲ್ಲಿಸುವ ಪ್ರಯತ್ನವೂ ಹೌದು ಈ ವಿಮಶಾì ಸಂಕಲನ.

Advertisement

ಕಾರಂತರ ಮೂಕಜ್ಜಿಗೆ ಐವತ್ತು
(ಜ್ಞಾನಪೀಠ ಪುರಸ್ಕೃತ “ಮೂಕಜ್ಜಿಯ ಕನಸುಗಳು’ ಕಾದಂಬರಿಯ ಒಂದು ಸಮಗ್ರ, ಸಂಪನ್ನ ನೋಟ)
ಲೇ.: ಜಿ.ಎಸ್‌. ಭಟ್ಟ
ಪ್ರ.: ತನು ಮನು ಪ್ರಕಾಶನ, ಹೆಚ್‌.ಐ.ಜಿ., 1267, “ಅಂಬಾರಿ’, 1ನೇ ತಿರುವು, ಶ್ರೀರಾಂಪುರ 2ನೇ ಹಂತ, ಮೈಸೂರು-570034
ಫೋನ್‌: 0821-2363001
ಮೊದಲ ಮುದ್ರಣ: 2019 ಬೆಲೆ: ರೂ. 120

ಜಕಾ

Advertisement

Udayavani is now on Telegram. Click here to join our channel and stay updated with the latest news.

Next