Advertisement

ರೇಟಿಂಗ್‌ ಏಜೆನ್ಸಿಗಳ ಲೆಕ್ಕಾಚಾರ ತತ್ತರಿಸಿದ ಅರ್ಥವ್ಯವಸ್ಥೆಗಳು

01:30 AM May 12, 2020 | Team Udayavani |

ಜಾಗತಿಕ ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿ ಮೂಡೀಸ್‌, ಈ ವರ್ಷ ಭಾರತದ ಅಭಿವೃದ್ಧಿ ದರ ಶೂನ್ಯವಿರಬಹುದು ಎಂದು ಹೇಳಿದೆ.

Advertisement

ಆದರೆ ಇದು ಅಚ್ಚರಿಹುಟ್ಟಿಸುವಂಥ ಸಂಗತಿಯೇನೂ ಅಲ್ಲ, ನಿರೀಕ್ಷಿತವೇ ಆಗಿದೆ. ಏಕೆಂದರೆ, ಭಾರತವೆಂದಷ್ಟೇ ಅಲ್ಲ, ಕೋವಿಡ್ ನಿಂದಾಗಿ ಬಹುತೇಕ ರಾಷ್ಟ್ರಗಳ ಅರ್ಥವ್ಯವಸ್ಥೆಯೇ ಬುಡಮೇಲಾಗಿಬಿಟ್ಟಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಜತೆಗೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್‌ ಕೂಡ ತತ್ತರಿಸಿಹೋಗಿವೆ.

ಅದರಲ್ಲೂ ಬ್ರಿಟನ್‌ನ ಅರ್ಥವ್ಯವಸ್ಥೆ ಯಾವ ಪರಿ ಪೆಟ್ಟು ತಿಂದಿದೆ ಎಂದರೆ, ಮುನ್ನೂರು ವರ್ಷಗಳಲ್ಲೇ ಕಾಣದಂಥ ಪತನವನ್ನು ಅದು ಎದುರಿಸಲಿದೆ ಎಂದು ವಿತ್ತ ಸಂಸ್ಥೆಗಳು ಹೇಳುತ್ತಿವೆ.

ಈಗ ಎಲ್ಲಾ ರಾಷ್ಟ್ರಗಳ ಗಮನ ಹಾಗೂ ಶಕ್ತಿ ಸಂಪನ್ಮೂಲಗಳು ಈ ವೈರಸ್‌ನಿಂದ ಮುಕ್ತವಾಗುವುದರತ್ತ ಕೇಂದ್ರಿಕೃತವಾಗಿವೆ. ಪ್ರತಿ ದೇಶವೂ ಲಾಕ್‌ಡೌನ್‌ಗೆ ಒಳಗಾಗಿರುವುದರಿಂದ ಬಹುತೇಕ ಆರ್ಥಿಕ ಚಟುವಟಿಕೆಗಳೇ ನಿಂತುಹೋಗಿವೆ.

ಈ ಕಾರಣಕ್ಕಾಗಿಯೇ, ಕೋವಿಡ್ ಸಾಂಕ್ರಾಮಿಕದ ನಡುವೆಯೇ ಅರ್ಥವ್ಯವಸ್ಥೆಗೆ ಪುನರ್‌ ಚಾಲನೆ ಕೊಡಲು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಲಾಕ್‌ಡೌನ್‌ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿವೆ.

Advertisement

ಹಾಗೆಂದು, ರೇಟಿಂಗ್‌ಗಳ ಬಗ್ಗೆ ಸದ್ಯಕ್ಕೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಭಾವಿಸಬಾರದು. ಅವು ಭವಿಷ್ಯದ ದಿಕ್ಸೂಚಿಯಾಗಿದ್ದು, ಮುಂಬರುವ ಸವಾಲುಗಳ ಅಗಾಧತೆಯನ್ನು ಎದುರಿಡುತ್ತವೆ.

ವಿದೇಶಿ ಹೂಡಿಕೆದಾರರು ಕೂಡ ಮೂಡೀಸ್‌ನಂಥ ರೇಟಿಂಗ್‌ ಏಜೆನ್ಸಿಗಳತ್ತ ಹೆಚ್ಚು ಗಮನಕೊಡುತ್ತಾರೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ನಿಸ್ಸಂಶಯವಾಗಿಯೂ ಶೂನ್ಯ ಅಭಿವೃದ್ಧಿ ದರವು ದೇಶಕ್ಕೆ ಒಳ್ಳೆಯದಂತೂ ಅಲ್ಲ.

ಆದರೆ ಇದೇ ವೇಳೆಯಲ್ಲೆ, ಮೂಡೀಸ್‌ 2021-22ರಲ್ಲಿ ಜಿಡಿಪಿ ಬೆಳವಣಿಗೆ ದರವು 6 ಪ್ರತಿಶತಕ್ಕಿಂತಲೂ ಅಧಿಕವಿರುತ್ತದೆಂಬ ಭರವಸೆಯ ಮಾತನ್ನೂ ಆಡಿದೆ. ಆದರೆ ಇಷ್ಟು ಕಡಿಮೆ ಅವಧಿಯಲ್ಲೇ ಎಲ್ಲವೂ ಹಠಾತ್ತನೆ ಸರಿಯಾಗಿಬಿಡಲು ಸಾಧ್ಯವಿಲ್ಲ ಎಂದು ಪರಿಣತರು ಹೇಳುತ್ತಾರೆ.

ದೇಶದಲ್ಲಿ ಲಾಕ್‌ಡೌನ್‌ ಅನಂತರದಿಂದ ಬಹುತೇಕ ಚಿಕ್ಕ-ದೊಡ್ಡ ಉದ್ಯೋಗಗಳು ಬಂದ್‌ ಆಗಿವೆ. ಇದರಿಂದಾಗಿ ಆರ್ಥಿಕ ಚಕ್ರವೂ ನಿಂತಿದೆ. ಇನ್ನೊಂದೆಡೆ ಕೋಟ್ಯಂತರ ಜನರ ತಲೆಯ ಮೇಲೆ ನಿರುದ್ಯೋಗದ ತೂಗುಗತ್ತಿಯೂ ನೇತಾಡುತ್ತಿದೆ.

ಎಲ್ಲಾ ಕ್ಷೇತ್ರಗಳೂ ಸಂಪೂರ್ಣವಾಗಿ ಸಕ್ರಿಯವಾಗಲು ಇನ್ನು ಎಷ್ಟು ದಿನ ಹಿಡಿಯುತ್ತದೋ ತಿಳಿಯದು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುಂದಿನ ನಡೆಯ ಬಗ್ಗೆ ವ್ಯಾಪಕ ಚಿಂತನೆಯನ್ನಂತೂ ನಡೆಸಿವೆ. ಎಲ್ಲಾ ಉದ್ಯೋಗ ವಲಯಗಳೂ ಹಳಿಗೆ ಮರಳಿದ ಅನಂತರವಷ್ಟೇ ಭಾರತದ ಆರ್ಥಿಕತೆ ನಿಧಾನಕ್ಕೆ ವೇಗ ಪಡೆಯಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next