Advertisement

ಬೇಡಿಕೆ ಈಡೇರಿಕೆಗೆ ಆಗ್ರಹ

04:38 PM Jul 06, 2019 | Naveen |

ಮೂಡಿಗೆರೆ: ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್‌ ಕಾರ್ಯಕರ್ತೆಯರು ಪಟ್ಟಣದ ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ಫೆಡರೇಷನ್‌ನ ಅಧ್ಯಕ್ಷೆ ಬಲ್ಕಿಸ್‌ ಬಾನು, ರಾಜ್ಯ ಸರಕಾರ ಪ್ರಸಕ್ತ ಸಾಲಿನಿಂದ 276 ಪಬ್ಲಿಕ್‌ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲು ಆದೇಶಿಸಿದ್ದು, ಈಗಾಗಲೇ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಹಾಗಾಗಿ, ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳು ಸರಕಾರಿ ಪಬ್ಲಿಕ್‌ ಶಾಲೆಗಳಿಗೆ ತೆರಳುತ್ತಿದ್ದಾರೆ. ಇದರಿಂದ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಆದ್ದರಿಂದ, ಅಂಗನವಾಡಿ ಕೇಂದ್ರಗಳು ಮುಚ್ಚುವ ಸ್ಥಿತಿಗೆ ತಲುಪಲಿದೆ. ಅಲ್ಲದೇ, ಐಸಿಡಿಎಸ್‌ ಯೋಜನೆಯಲ್ಲಿ ಕಳೆದ ಮೂರ್‍ನಾಲ್ಕು ದಶಕದಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರು, ಸಹಾಯಕಿಯರು ಬೀದಿ ಪಾಲಾಗುವ ಭೀತಿ ಉಂಟಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

ಕಾರ್ಯದರ್ಶಿ ಅನುಸೂಯಾ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ನಡೆಸಬೇಕು. ಅದಕ್ಕಾಗಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ, ಮಕ್ಕಳಿಗೆ ಪಠ್ಯ ಪುಸ್ತಕ ಸಹಿತ ಮೂಲ ಸೌಕರ್ಯ ಒದಗಿಸಬೇಕು. ಸರಕಾರಿ ಆದೇಶದಂತೆ ಶಿಕ್ಷಕರ ವೃತ್ತಿಗೆ ಅಂಗನವಾಡಿ ಸಹಾಯಕಿಯರನ್ನೇ ನೇಮಕ ಮಾಡಬೇಕು. ಅವರಿಗೆ ಕ್ರಮವಾಗಿ 7,500 ಮತ್ತು 5,000 ರೂ. ಮಾಸಿಕ ಗೌರವಧನ ಹೆಚ್ಚುವರಿಯಾಗಿ ನೀಡಬೇಕು. ಯುಕೆಜಿ ಮುಗಿದ ಬಳಿಕ, ಮಕ್ಕಳಿಗೆ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯಲು ಅಂಗನವಾಡಿ ಕೇಂದ್ರದಿಂದಲೇ ವರ್ಗಾವಣೆ ಪತ್ರ ನೀಡುವಂತಹ ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.

ಉಪಾಧ್ಯಕ್ಷೆ ವನಜಾಕ್ಷಿ, ಮೀನಾಕ್ಷಿ, ಹರಿಣಾಕ್ಷಿ, ಸುಶೀಲಾ, ಗೌರಮ್ಮ, ಲಲಿತಾ, ರಮ್ಯಾ, ಸ್ನೇಹಾ, ನವ್ಯಾ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next