Advertisement
ಕೆರಾಡಿಯಿಂದ ಚಪ್ರಮಕ್ಕಿ ಸಹಿತ ನಾಲ್ಕಾರು ಊರುಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ಈ ಹಿಂದಿನ ಸೇತುವೆ ಕಿರಿದಾಗಿದ್ದು, ಬೈಕ್, ಕಾರು, ರಿಕ್ಷಾ ಬಿಟ್ಟರೆ ಬೇರೆ ಘನ ವಾಹನಗಳು ಸಂಚರಿಸುತ್ತಿರಲಿಲ್ಲ. ಅದಕ್ಕಾಗಿ ಈ ಭಾಗದ ಜನರು ಅನೇಕ ವರ್ಷಗಳಿಂದ ಹೊಸ ಸೇತುವೆಗೆ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ. ಈಗ ಭಾಗದ ಬಹುದಿನಗಳ ಬೇಡಿಕೆಯೊಂದು ಈಡೇರಿದೆ.
ಮೂಡುಮಂದದಲ್ಲಿ ಈ ಹೊಸ ಸೇತುವೆ ಹಾಗೂ ಸಂಪರ್ಕ ರಸ್ತೆಯ 800 ಮೀ.ವರೆಗಿನ ಡಾಮರಿಗೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರ ಮುತುವರ್ಜಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ 1.10 ಕೋ.ರೂ. ಮಂಜೂರಾಗಿದ್ದು, ಕಳೆದ ವರ್ಷದ ಫೆಬ್ರವರಿಯಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಮಾರ್ಚ್ ಕೊನೆಯವರೆಗೂ ಕಾಮಗಾರಿ ನಡೆದಿತ್ತು. ಇನ್ನೇನು ಕೊನೆಯ ಹಂತದ ಕಾಮಗಾರಿ ಬಾಕಿ ಇರುವಾಗಲೇ ಕೊರೊನಾದಿಂದಾಗಿ ಲಾಕ್‌ಡೌನ್ ಜಾರಿಯಾಗಿದ್ದು, ಆಗ ಸ್ಥಗಿತಗೊಂಡ ಕಾರಣ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಗಿತ್ತು. ಇದರೊಂದಿಗೆ ವಾರಾಹಿ ಯೋಜನೆಯಡಿ ಸುಮಾರು 2- 3 ಕಿ.ಮೀ. ಉದ್ದದ ರಸ್ತೆಯ ಡಾಮರು ಪೂರ್ಣಗೊಂಡಿದೆ.
Related Articles
ಈ ಮೂಡುಮಂದ ಸೇತುವೆಯು ಚಿತ್ತೂರು – ಕೆರಾಡಿ ಮುಖ್ಯ ರಸ್ತೆಯಿಂದ ಚಪ್ರಮಕ್ಕಿ, ಹಾಲಾಡಿ, ಹುಲಿಕೋಡ್ಲು, ಮ್ಯಾಕೇರಿ, ಕ್ಯಾವಡಿ ಸೇರಿದಂತೆ ಅನೇಕ ಊರುಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಭಾಗದಲ್ಲಿ ಸುಮಾರು 250 ರಿಂದ 300 ಮನೆಗಳಿವೆ. ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಇದಲ್ಲದೆ ಈ ಮಾರ್ಗವಾಗಿ ಬೆಳ್ಳಾಲ ದಿಂದ ಮಾರಣಕಟ್ಟೆಗೆ ಹತ್ತಿರವಾಗುತ್ತದೆ.
Advertisement