Advertisement
ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪೆರಾಡಿ ಮೂಲದವರಾಗಿದ್ದು, ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿರುವ ಅನಿಲ್ ಪಿ. ಶೆಟ್ಟಿ (65) ಮತ್ತು ಪತ್ನಿ ಕುಶಲಾ ಶೆಟ್ಟಿ (62) ಮೃತಪಟ್ಟವರು. ಕಾರು ಚಲಾಯಿಸುತ್ತಿದ್ದ ಅವರ ಮಗ ಶೈಲೇಂದ್ರ ಶೆಟ್ಟಿ (34) ಕೂಡ ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಿಲ್ ಪಿ. ಶೆಟ್ಟಿ ಅವರು ಮರೋಡಿಯ ಬಂಡಸಾಲೆ ನಿವಾಸಿ ಸಂಜೀವ ಶೆಟ್ಟಿ ಅವರ ಸಹೋದರಿಯ ಪುತ್ರ (ಅಳಿಯ). ಸಂಜೀವ ಶೆಟ್ಟಿಯವರ ಪುತ್ರ ಸುಜಿತ್ ಅವರ ವಿವಾಹವು ಡಿ. 28ರಂದು ಮೂಡುಬಿದಿರೆಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಬಯಿಯಿಂದ ಬ್ರಿಝಾ ಕಾರಿನಲ್ಲಿ ಧಾರವಾಡ ಮಾರ್ಗವಾಗಿ ಬರುತ್ತಿದ್ದ ವೇಳೆ ಬುಧವಾರ ಬೆಳಗ್ಗೆ ಧಾರವಾಡ ಸಮೀಪ ಎದುರಿನಿಂದ ಬಂದ ಟ್ಯಾಂಕರ್ ಇವರ ಕಾರಿಗೆ ಢಿಕ್ಕಿ ಹೊಡೆಯಿತು. ಗಂಭೀರವಾಗಿ ಗಾಯಗೊಂಡ ಅನಿಲ್ ಪಿ. ಶೆಟ್ಟಿ ಮತ್ತು ಕುಶಲಾ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿರುವ ಶೈಲೇಂದ್ರ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲ ಗಳು ತಿಳಿಸಿವೆ. ಊರಿನ ಶಾಲೆಗಳ ಅಭಿವೃದ್ಧಿ, ದೇವಸ್ಥಾನಗಳ ಜೀರ್ಣೋ ದ್ಧಾರ ಕಾರ್ಯಗಳಿಗೆ ಆರ್ಥಿಕವಾಗಿ ಸಹಕಾರ ನೀಡುತ್ತಿದ್ದರು ಎನ್ನಲಾಗಿದೆ. ವಿವಾಹ ಮುಂದೂಡಿಕೆ
ಅಳಿಯನ ಸಾವಿನ ಘಟನೆಯಿಂದ ಮದುವೆ ಸಂಭ್ರಮದಲ್ಲಿದ್ದ ಪೆರಾಡಿ ಮನೆಯಲ್ಲಿ ಶೋಕ ಮನೆಮಾಡಿದೆ. ಬುಧವಾರ ಮೆಹಂದಿ ಕಾರ್ಯಕ್ರಮ ನಿಗದಿಯಾಗಿ ಹಲವು ಮಂದಿ ಸಂಬಂಧಿಕರು ಮನೆಯಲ್ಲಿ ಸಂಭ್ರಮ ಆಚರಿಸುತ್ತಿದ್ದರು. ಆದರೆ ವಿಧಿಯಾಟದಿಂದಾಗಿ ಮನೆಯಲ್ಲಿ ನೀರವ ಮೌನ ಮನೆ ಮಾಡಿದೆ. ಡಿ. 28ರ ವಿವಾಹ ಸಮಾರಂಭವನ್ನು ಮುಂದೂಡಲಾಗಿದೆ.