Advertisement

ಮೂಡುಬಿದಿರೆ:ಮಗುತನವಿದ್ದರೆ ಮಾತ್ರ ಮನುಷ್ಯರಾಗಲು ಸಾಧ್ಯ- ಅರುಣ್‌ ಸಾಗರ್‌

02:52 PM Jun 13, 2024 | Team Udayavani |

ಮೂಡುಬಿದಿರೆ: “ಮನುಷ್ಯ ತಾನೊಂದೆ ಕುಲಂ’ ಎಂಬ ಆದಿ ಕವಿ ಪಂಪನ ವಾಣಿಯಂತೆ, ಬಸವಣ್ಣನವರು ಹೇಳಿದಂತೆ ಇವನಾರವ ಇವನಾರವನೆಂದೆನಿಸದಿರಯ್ನಾ…’ ಎಂಬಂತೆ ನಮ್ಮೊಳಗೆ ಸಮತಾಭಾವವಿರಲಿ. ಮನಸ್ಸಿನೊಳಗೆ ಮಗುತನ ಇದ್ದರೆ ಮಾತ್ರ ದೊಡ್ಡ ಮನುಷ್ಯರಾಗಲು ಸಾಧ್ಯ. ಮನುಷ್ಯತ್ವದ ಮಹಲು ಕಟ್ಟುತ್ತಿರುವ ಮೋಹನ ಆಳ್ವರಂಥವರ ಜತೆಯಾಗೋಣ ಎಂದು ನಟ, ರಂಗಕರ್ಮಿ ಅರುಣ್‌ ಸಾಗರ್‌ ಹೇಳಿದರು.

Advertisement

ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ) ವೇದಿಕೆಯಲ್ಲಿ ಮಂಗಳವಾರ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ
“ಆಳ್ವಾಸ್‌ ಟ್ರೆಡಿಶನಲ್‌ ಡೇ -2024’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಗುವಿಗೆ ಜ್ಞಾನ ನೀಡಿ ಹೃದಯ ಭಾವನೆ
ಅರಳಿಸುವುದು ಶಿಕ್ಷಣ. ಒಳ್ಳೆಯವರಾಗಿ ಬದುಕುವುದೇ ಸಂಸ್ಕೃತಿ. ಜೀವನದಲ್ಲಿ ಪಾಸು ಫೇಲ್‌ ಇಲ್ಲ, ಪ್ರತಿ ಕ್ಷಣವೂ ಪರೀಕ್ಷೆ.
ನಿಮ್ಮನ್ನು ನೀವು ಆಳುವವರಾಗಿ ಎಂದವರು ಕರೆ ನೀಡಿದರು.

ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಮಾತನಾಡಿ, ಇಲ್ಲಿ ನಡೆಯುವ ಪ್ರತಿ ಕಾರ್ಯವೂ ಅನನ್ಯ. ನಾನು 8 ವರ್ಷಗಳ ಹಿಂದೆ ಆಳ್ವಾಸ್‌
ಗೆ ಬಂದಿದ್ದೇನೆ. ಈಗ ಬೃಹತ್‌ ಆಗಿ ಬೆಳೆದು ನಿಂತಿದೆ. ದೇಶದ ವಿದ್ಯಾರ್ಥಿ ಗಳನ್ನು ತನ್ನತ್ತ ಸೆಳೆಯುತ್ತಿದೆ ಎಂದರು.

ರೇಸರ್‌ ಅರವಿಂದ ಕೆ.ಪಿ., ನಟಿಯರಾದ ಚೈತ್ರಾ ಶೆಟ್ಟಿ, ವಿಜೇತಾ ಪೂಜಾರಿ, ನಟ ಮೈಮ್‌ ರಾಮದಾಸ್‌, ಆಳ್ವಾಸ್‌ ಶಿಕ್ಷಣ
ಪ್ರತಿಷ್ಠಾನನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್‌ ಆಳ್ವ ಉಪಸ್ಥಿತರಿದ್ದರು.

700ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಾವಿದರಾಗಿ ರಂಜನೆ
ವಿದ್ಯಾಗಿರಿಯಲ್ಲಿ ಮಂಗಳವಾರ ಭಾರತದ ಸಾಂಪ್ರದಾಯಿಕ ಸಾಂಸ್ಕೃತಿಕ ಸೊಬಗಿನ ಅನಾವರಣವಾಯಿತು. ವಿದ್ಯಾರ್ಥಿಗಳು ದೇಶದ ವಿವಿಧ ಸಾಂಪ್ರದಾಯಿಕ ಉಡುಪುಗಳಲ್ಲಿ ಉಲ್ಲಾಸ, ಹುರುಪಿನಿಂದ ಓಡಾಡುತ್ತಿದ್ದರು. ಎಲ್ಲೆಲ್ಲೂ ಮಂದಹಾಸ, ಮುಗುಳ್ನಗು , ಸಂಭ್ರಮ. ಮಹಾರಾಷ್ಟ್ರ ,ಗುಜರಾತ್‌, ಈಶಾನ್ಯ ಭಾರತ, ಕೇರಳ, ಕರಾವಳಿ ಕರ್ನಾಟಕ, ಇತರೆ ಭಾರತ ಸೇರಿದಂತೆ ಆರು ತಂಡಗಳು ತಮ್ಮ ತವರೂರಿನ ಕಲಾ ಪ್ರಕಾರವನ್ನು ಪ್ರದರ್ಶಿಸಿದರು.

Advertisement

ಪುರುಷರದಲ್ಲದೆ ವಿಶೇಷವಾಗಿ ಹೆಣ್ಮಕ್ಕಳ ಪಿಲಿ ನಲಿಕೆ, ನಿಹಾಲ್‌ ತಾವ್ರೋ ಅವರ ಗಾಯನ, ವಿವಿಧ ರಾಜ್ಯಗಳ ಬೀದಿ ಬದಿಯ ಮನೋರಂಜನ ಆಟಗಳ ಪ್ರದರ್ಶನ, ಫೈರ್‌ ಡ್ಯಾನ್ಸ್‌, ಕನ್ನಡ ಕಾಮೆಡಿ, ಬೀಟ್‌ ಗುರು ತಂಡದ ಕಾರ್ಯಕ್ರಮ, ಆಹಾರ ಮೇಳ, ಕಲಾ ಪ್ರದರ್ಶನಗಳಿಂದ ಕಾರ್ಯಕ್ರಮ ಕಳೆಗಟ್ಟಿತು. ಏಳುನೂರಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಲಾವಿದರಾಗಿ ವೀಕ್ಷಕರ ಮನಸೆಳೆದರು. ಸ್ಪರ್ಧಾ ಸ್ವರೂಪದ ಕಲಾಪಗಳಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ನಟ ಸಮರ್ಜಿತ್‌ ಲಂಕೇಶ್‌, ನಾಯಕಿ ಸಾನಿಯಾ ಅಯ್ಯರ್‌, ನಟಿ ಮಾನಸಿ ಸುಧೀರ್‌, ಸೃಜನಾ ಇದ್ದರು. ಗಾಯಕ ನಿಹಾಲ್‌ ತಾವ್ರೋ ಹಾಡಿ ರಂಜಿಸಿದರು. ನಿತೇಶ್‌ ಮಾರ್ನಾಡ್‌ ಸಭಾ ಕಲಾಪ, ಅವಿನಾಶ್‌ ಕಟೀಲು ಸಾಂಸ್ಕೃತಿಕ ಕಲಾಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next