Advertisement

ಮೂಡಿಗೆರೆ: ಸಂಭ್ರಮದ ತುಳು ವೈಭವೋ

01:32 PM Feb 16, 2020 | Naveen |

ಮೂಡಿಗೆರೆ: ತಾಲೂಕು ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ತುಳು ಭಾಷಿಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ ಪಟ್ಟಣ ಅಡ್ಯಂತಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ “ತುಳು ವೈಭವೋ’ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

Advertisement

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸಹಯೋಗದಲ್ಲಿ ಮೂಡಿಗೆರೆ ತುಳುಕೂಟದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೂಡಿಗೆರೆ ಕಲಾ ಭಾರತಿ ನೃತ್ಯ ಶಾಲೆಯ ವಿದ್ವಾನ್‌ ದಯಾನಂದ ಸಾಗರ್‌ ಅವರ ಸಾರಥ್ಯದಲ್ಲಿ ನೃತ್ಯ ಕಾರ್ಯಕ್ರಮ ನಡೆಸಿಕೊಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನೃತ್ಯ ರೂಪಕದಲ್ಲಿದ್ದ ಶಿವ ತಾಂಡವ, ಭಕ್ತ ಪ್ರಹ್ಲಾದ ಮತ್ತು ವಿವಿಧ ಶೈಲಿಯ ವೈವಿಧ್ಯಮಯ ನೃತ್ಯ ಪ್ರಕಾರಗಳು ಜನಮನ ಸೂರೆಗೊಂಡವು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ ಅವರು, ಕರಾವಳಿ ಭಾಗದಿಂದ ಹೊರಟ ತುಳು ಭಾಷೆ ಇಂದು ವಿಶ್ವಾದ್ಯಂತ ಬೆಳೆದು ನಿಂತಿದೆ. ಬಹುತೇಕರ ಪ್ರಧಾನ ಭಾಷೆಯಾಗಿ ಸಮಾಜದಲ್ಲಿ ಸಾಮರಸ್ಯ ಸೃಷ್ಟಿಸುವ ಜೊತೆಗೆ ಎಲ್ಲ ಧರ್ಮೀಯರಿಗೂ ಮಾತಿನ ರಸದೂಟ ಉಣಬಡಿಸುತ್ತಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಿದ ಬಳಿಕ ತುಳು ಭಾಷೆಗೆ ರಾಜ್ಯಾಂಗದ ಸ್ಥಾನ ದೊರಕಿದೆ. ಆದರೂ, ಈ ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡದಿರುವುದು ತುಳು
ಭಾಷಿಕರ ನೋವಿಗೆ ಕಾರಣವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು, ತುಳು ಭಾಷೆ ಒಂದು ಗ್ರಾಮೀಣ ಭಾಷೆಯಾಗಿ ಉಳಿದಿಲ್ಲ. ಅದೊಂದು ವಿಶಿಷ್ಟ ರೀತಿಯ ಸಂಸ್ಕೃತಿಯಾಗಿದೆ. ಅದರ ಸಾಮಿಪ್ಯ ಉಂಟಾದಾಗ ಸಮಾಜ ಉತ್ತಮ ರೀತಿಯಲ್ಲಿ ಸಾಗಬಲ್ಲುದು. ಕರ್ನಾಟಕ ತುಳು ಅಕಾಡೆಮಿಯು ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡುವ ಮೂಲಕ ತುಳು ಕೂಟಕ್ಕೆ ಬೆನ್ನೆಲುಬಾಗಿ ನಿಂತಿದೆ. ಮಲೆನಾಡಿನ ಭಾಗದಲ್ಲಿ ತುಳು ಭಾಷಿಕರು ಹೆಚ್ಚಾಗಿದ್ದು, ಸಮಾಜದಲ್ಲಿ ಅವರ ಸ್ಥಾನ ಉನ್ನತವಾಗಿದೆ ಎಂದರು.

ಸಭಾ ಕಾರ್ಯಕ್ರಮದ ನಂತರ ಮಂಗಳೂರಿನ ತುಳುನಾಡ ರತ್ನ ದಿನೇಶ್‌ ಅತ್ತಾವರ್‌ ನಿರ್ದೇಶನದ “ಇತ್ತೆ ಗೊತ್ತಾಪುಜ್ಜಿ’ ತುಳು ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಬಣಕಲ್‌ ಡಾ.ಎಸ್‌ .ಪದ್ಮನಾಭ ಶೆಟ್ಟಿಗಾರ್‌, ರಾಷ್ಟ್ರಮಟ್ಟದ ವಾಲಿಬಾಲ್‌ ಆಟಗಾರ್ತಿ ಕಮ್ಮರಗೋಡಿನ ಕುಮಾರಿ ನಿಖೀತಾ ಕೆ. ಹಾಗೂ ವಂಡರ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ ಪ್ರತಿಭೆ ಮಾ.ತಕ್ವಿಲ್‌ ಎಂ. ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರ್ವಹಣೆಯನ್ನು ತುಳು ಕೂಟದ ಅಧ್ಯಕ್ಷ ಪಿ.ವಿಶ್ವಕುಮಾರ್‌ ವಹಿಸಿದ್ದರು.

Advertisement

ತಾ.ಪಂ.ಅಧ್ಯಕ್ಷ ಕೆ.ಸಿ.ರತನ್‌, ಧರ್ಮ ಗುರುಗಳಾದ ಸಿನಾನ್‌ ಫೈಝಿ, ಫಾದರ್‌ ಪೌಲ್‌ ಮಚಾದೋ, ಮುಖಂಡರಾದ ನಿಟ್ಟೆ ಶಶಿಧರ್‌ ಶೆಟ್ಟಿ, ಡಾ| ರಾಮಚರಣ್‌ ಅಂಡ್ಯಂತಾಯ, ಐ.ವಿ.ಆರ್‌. ಪಿಂಟೋ, ಮೂಡಿಗೆರೆ ತುಳು ಕೂಟದ ಸದಸ್ಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.

ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಲು ತುಳು ಅಕಾಡೆಮಿಯಿಂದ ನಿರಂತರ ಹೋರಾಟ ಮಾಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸಿ.ಟಿ.ರವಿ ಅವರು ತುಳು ಭಾಷೆಗೆ ಸಂಬಂಧಿ ಸಿದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಸಧ್ಯದಲ್ಲಿಯೇ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಆಗುವುದು ಸತ್ಯ.
ದಯಾನಂದ ಜಿ. ಕತ್ತಲ್‌,
ಅಧ್ಯಕ್ಷರು, ತುಳು ಸಾಹಿತ್ಯ ಅಕಾಡಮಿ

Advertisement

Udayavani is now on Telegram. Click here to join our channel and stay updated with the latest news.

Next