Advertisement

ರಾಷ್ಟ್ರ ಮಟ್ಟದ ಪವರ್‌ ಲಿಪ್ಟಿಂಗ್‌ನಲ್ಲಿ ಬೆಳ್ಳಿ ಪದಕ-ಅಥ್ಲೆಟಿಕ್ಸ್‌, ಕಬಡ್ಡಿಯಲ್ಲೂ ಸಾಧನೆ

01:52 PM Jan 26, 2020 | Naveen |

ಮೂಡಿಗೆರೆ: ಮಲೆನಾಡಿನ ಯುವತಿ ಐಶ್ವರ್ಯ ರಾಷ್ಟ್ರ ಮಟ್ಟದ ಪವರ್‌ ಲಿಪ್ಟಿಂಗ್‌ನಲ್ಲಿ ಬೆಳ್ಳಿ ಪದಕ-ಅಥ್ಲೆಟಿಕ್ಸ್‌, ಕಬಡ್ಡಿಯಲ್ಲಿ ಉತ್ತಮ ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಬಡತನ ಹಾಗೂ ಶಿಕ್ಷಣದ ನಡುವೆಯೂ ಅವಿರತ ಶ್ರಮದಿಂದ ಕ್ರೀಡಾ ಕ್ಷೇತ್ರದಲ್ಲಿ ಅಲ್‌ ರೌಂಡರ್‌ ಆಗಿ ಸಾಧನೆ ಮಾಡುತ್ತಿರುವ ಪ್ರತಿಭಾವಂತೆ ತನ್ನ ಸಾಧನೆಯಿಂದಾಗಿ ಎಲ್ಲರ ಪ್ರಶಂಸೆಗೆ ಕಾರಣಳಾಗಿದ್ದಾಳೆ.

Advertisement

ಬಿ.ಎ.ವಿದ್ಯಾರ್ಥಿನಿ ಐಶ್ವರ್ಯ ನಿಡುವಾಳೆಯ ಸಂಪಿಗೆಖಾನ್‌ ಮೋನಪ್ಪ ಹಾಗೂ ಗುಲಾಬಿ ಅವರ ಪುತ್ರಿ. ತಾಯಿ ಗುಲಾಬಿ ಅವರು ಉಡುಪಿಯಲ್ಲೇ ನಿಂತು ಮಗಳ ಶಿಕ್ಷಣಕ್ಕೆ ಆಸರೆಯಾಗಿದ್ದಾರೆ. ಬಡತನದಲ್ಲಿದ್ದರೂ ಶಿಕ್ಷಣದ ಜೊತೆ ಮೇಲುಗೈ ಸಾಧಿಸುತ್ತಿರುವ ಐಶ್ವರ್ಯ ಸದ್ಯ ಉಡುಪಿ ಅಜ್ಜರಕಾಡು ಬನ್ನಂಜೆ ಹಾಸ್ಟೆಲ್‌ ನಲ್ಲಿ ನಿಂತು ಬಿಎ ವ್ಯಾಸಂಗ ಮಾಡುತ್ತಿದ್ದಾರೆ.

ರಾಷ್ಟ್ರ ಮಟ್ಟದ ಪವರ್‌ ಲಿಫ್ಟಿಂಗ್ ನಲ್ಲಿಮಿಂಚಿದರೆ, ಮಂಗಳೂರು ಅಂತರ್‌ ವಿವಿ ಅಥ್ಲೆಟಿಕ್ಸ್‌ನಲ್ಲಿ ಹಾಗೂ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರತಿಭೆಯನ್ನು ಬೆಳಗಿಸಿ ಹಲವು ಪದಕ ಮತ್ತು ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಪವರ್‌ ಲಿಫ್ಟಿಂಗ್ ನಲ್ಲಿ ಆರು ತಿಂಗಳು ಕೋಚಿಂಗ್‌ ಪಡೆದು 2018ರಲ್ಲಿ ಬಂಟ್ವಾಳದಲ್ಲಿ ನಡೆದ ರಾಜ್ಯ ಮಟ್ಟದ ಪವರ್‌ ಲಿಪ್ಟಿಂಗ್‌ನ 52 ಕೆ.ಜಿ. ಸಬ್‌ ಜ್ಯೂನಿಯರ್‌ ವಿಭಾಗದಲ್ಲಿ ಚಿನ್ನದ ಪದಕ, 2019 ಜನವರಿಯಲ್ಲಿ ಪದುಚ್ಚೇರಿಯಲ್ಲಿ ನಡೆದ ರಾಷ್ಟ್ರಮಟ್ಟದ (ದಕ್ಷಿಣ ವಲಯ)ಪವರ್‌ ಲಿಫ್ಟಿಂಗ್ ನಲ್ಲಿ 52ಕೆಜಿ ಜ್ಯೂನಿಯರ್‌ ವಿಭಾಗದಲ್ಲಿ ಬೆಳ್ಳಿ, ಸಬ್‌ ಜ್ಯೂನಿಯರ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಡಿಸೆಂಬರ್‌ನಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ 52 ಕೆಜಿ ಬೆಂಚ್‌ಪ್ರಸ್‌ನಲ್ಲೂ ಚಿನ್ನದ ಪದಕ ಪಡೆದರು.

ಪವರ್‌ ಲಿಫ್ಟಿಂಗ್ ಸಾಧನೆಗೆ ಕೋಚ್‌ ರಘುನಾಥ್‌ ಶೆಟ್ಟಿ ಉತ್ತಮ ತರಬೇತಿ ನೀಡುತ್ತಿದ್ದಾರೆ. ಕಾಲೇಜಿನ ಪಿಡಿ ರೋಶನ್‌ ಶೆಟ್ಟಿ ಸಾಕಷ್ಟು ಬೆಂಬಲ ಮಲೆನಾಡಿನ ಪ್ರತಿಭೆಗೆ ನೀಡುತ್ತಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಐಶ್ವರ್ಯಗೆ ಶಾಲಿನಿ ಶೆಟ್ಟಿ ಕೋಚ್‌ ನೀಡಿದರೆ, ಕಬಡ್ಡಿಗೆ ಅನಿಲ್‌ಕುಮಾರ್‌ ಉದ್ಯಾವರ ತರಬೇತಿ ಹಾಗೂ ಹಾಸ್ಟೆಲಿನ ಮೇಲುಸ್ತುವಾರಿ ಎಸ್‌. ಸುಚಿತ್ರಾ ಅವರ ಪ್ರೋತ್ಸಾಹ ಕ್ರೀಡಾ ಸಾಧನೆಗೆ ಉತ್ತಮ ಪ್ರೇರಣೆಯಾಗಿದೆ ಎನ್ನುತ್ತಾರೆ ಕ್ರೀಡಾಪಟು ಐಶ್ವರ್ಯ.

ಐಶ್ವರ್ಯ ಓಟ, ಎತ್ತರ ಜಿಗಿತ, ಉದ್ದ ಜಿಗಿತ ಸೇರಿದಂತೆ ಅಥ್ಲೆಟಿಕ್ಸ್‌ನಲ್ಲೂ ಸಾಧನೆ ಮಾಡುತ್ತಿರುವುದು ಮಲೆನಾಡಿಗೆ ಹಿರಿಮೆ ತಂದಿದೆ. ಮಂಗಳೂರಿನ ಮೂಡಬಿದಿರೆ ಆಳ್ವಾಸ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಹೆಪ್ಟತ್ಲಾನ್‌ ನಲ್ಲಿ 2434 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಸಂಘ-ಸಂಸ್ಥೆಗಳು ಆಯೋಜಿಸುವ ಮ್ಯಾರಾಥಾನ್‌ನಲ್ಲೂ ಭಾಗವಹಿಸಿ ಹಲವು ಬಹುಮಾನ ಗೆದ್ದಿದ್ದಾರೆ. ಸಮರ್ಥ ಕಬಡ್ಡಿ ತಂಡದ ನಾಯಕಿಯಾಗಿಯೂ ಉತ್ತಮ ಆಟಗಾರ್ತಿಯಾಗಿರುವ ಇವರು ಸದ್ಯ ಜಿ.ಶಂಕರ್‌ ಸರ್ಕಾರಿ ಮಹಿಳಾ ಕಾಲೇಜು ತಂಡದ ನಾಯಕಿಯಾಗಿದ್ದಾರೆ.

Advertisement

2019-20ನೇ ಸಾಲಿನ ಅಂತರ್‌ ಕಾಲೇಜು ಕಬಡ್ಡಿ ಟೂರ್ನಿಯ ಟ್ರೋಫಿ ಐಶ್ವರ್ಯ ನಾಯಕತ್ವದ ತಂಡ ಮುಡಿಗೇರಿಸಿರುವುದು ಇವರ ಸಮರ್ಥ ನಾಯಕತ್ವದ ಹೊಣೆ ಗಾರಿಕೆಯ ಕೈಗನ್ನಡಿಯಾಗಿದೆ. ಇತ್ತೀಚೆಗೆ ಹೈದರಾಬಾದ್‌ನ ತೆಲಂಗಾಣದಲ್ಲಿ ಪವರ್‌ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ಕೀರ್ತಿ ಪಡೆದಿದ್ದಾರೆ. ಮಲೆನಾಡಿನ ಈ ಪ್ರತಿಭೆಗೆ ಸರಕಾರದಿಂದ ಉತ್ತಮ ಪ್ರೋತ್ಸಾಹ ಮತ್ತು ಸಹಕಾರ ಸಿಕ್ಕಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಹಾಗೂ ಒಲಂಪಿಕ್ಸ್ ನಂತಹ ಪಂದ್ಯಾವಳಿಗಳಲ್ಲಿ ದೊಡ್ಡ ಸಾಧನೆ ಮಾಡುವ ಆಸೆ ಈ ಹುಡುಗಿಯದ್ದು.

ಈಕೆಗೆ ಕ್ರೀಡೆಗೆ ಸಾಗಲು ಸರಕಾರ ಆರ್ಥಿಕ ನೆರವಿನ ಅಗತ್ಯವಿದೆ. ಬಡತನದ ಕುಟುಂಬದಲ್ಲಿ
ಮನೆಯ ಕಡೆಯೂ ಜವಾಬ್ದಾರಿ ವಹಿಸುವ ಬಹುದೊಡ್ಡ ಜವಾಬ್ದಾರಿ ಕೂಡ ಆಕೆಯ ಮೇಲಿದೆ. ಗ್ರಾಮೀಣ ಭಾಗದ ಪ್ರತಿಭೆಗೆ ಸರಕಾರದಿಂದ ಸೂಕ್ತ ಪ್ರೋತ್ಸಾಹ ಸಿಗಲಿ ಎಂಬುವುದೇ ಕ್ರೀಡಾಸಕ್ತರ ಮತ್ತು ಸ್ಥಳೀಯರ ಹಾರೈಕೆಯಾಗಿದೆ.

„ಸುಧೀರ್‌ ಮೊದಲಮನೆ

Advertisement

Udayavani is now on Telegram. Click here to join our channel and stay updated with the latest news.

Next