Advertisement

ಕೋವಿಡ್ ವಾರಿಯರ್ಸ್‌ ಕಾರ್ಯ ಶ್ಲಾಘನೀಯ: ಸ್ವಾಮೀಜಿ

06:19 PM Jul 01, 2020 | Naveen |

ಮೂಡಿಗೆರೆ: ಕೋವಿಡ್ ಸೋಂಕು ನಿರ್ಮೂಲನೆಗೆ ಜೀವದ ಹಂಗುದೊರೆದು ಕೆಲಸ ಮಾಡುತ್ತಿರುವ ಕೋವಿಡ್ ವಾರಿಯರ್ಸ್‌ ಕಾರ್ಯ ಶ್ಲಾಘನೀಯ. ಅವರ ಅವಿಶ್ರಾಂತ ಕಾರ್ಯ ಸಾಧು-ಸಂತರ ಸಾಧನೆಗೆ ಸಮ ಎಂದು ಬೇರುಗಂಡಿ ಮಠದ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕಳಸದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ನಡೆಯುವ ಬೆಳವಣಿಗೆ ಮತ್ತು ಅಂಕುಡೊಂಕುಗಳನ್ನು ಕ್ರೋಢೀಕರಿಸಿ ಓದುಗರ ಮುಂದೆ ಇಡುವ ಜಾಣ್ಮೆಯ ಕೆಲಸ ಪತ್ರಕರ್ತರದ್ದು. ಇದರ ಜೊತೆಗೆ ಪತ್ರಿಕೆಗಳನ್ನು ಮಳೆ-ಗಾಳಿ-ಛಳಿ ಎನ್ನದೆ ಸಮಯಕ್ಕೆ ಸರಿಯಾಗಿ ಓದುಗರಿಗೆ ತಲುಪಿಸುವ ವಿತರಕರ ಕೆಲಸವೂ ಶ್ಲಾಘನೀಯ ಎಂದರು.

ಜಗತ್ತಿನಾದ್ಯಂತ ಕೋವಿಡ್ ಸೋಂಕಿನಿಂದ ಜನರನ್ನು ರಕ್ಷಿಸಲು ಸರ್ಕಾರಗಳು ಲಾಕ್‌ಡೌನ್‌ನಂತಹ ನಿರ್ಧಾರ ಕೈಗೊಂಡಾಗಿನಿಂದಲೂ ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ಆಶಾ ಕಾರ್ಯಕರ್ತೆಯರು, ಪೊಲೀಸರು ಸೇರಿದಂತೆ ಪರ್ತಕರ್ತರು ಹಾಗೂ ಪತ್ರಿಕಾ ವಿತರಕರ ಕಾರ್ಯ ಎಲ್ಲರೂ ಮೆಚ್ಚುವಂತಹದ್ದು ಎಂದರು.

ಕಾರ್ಯನಿರತ ಪತ್ರಕತ್ರರ ಸಂಘದ ರಾಜ್ಯ ಕಾರ್ಯದರ್ಶಿ ಕೆಸವಳಲು ರಾಘವೇಂದ್ರ ಮಾತನಾಡಿ, ಒಂದು ಸುದ್ದಿಯನ್ನು ಓದುಗರಿಗೆ ತಲುಪಿಸುವ ಸಂದರ್ಭದಲ್ಲಿ ಹಲವಾರು ಜನರ ಪರಿಶ್ರಮವಿರುತ್ತದೆ. ಸಮಾಜದ ಹಿತಕ್ಕಾಗಿ ಅತ್ಯಂತ ಕಡಿಮೆ ವೇತನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರ ನೆರವಿಗೆ ಸರ್ಕಾರ ನಿಲ್ಲಬೇಕಿದೆ ಎಂದರು.

ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷ ಮೋಹನ್‌ ರಾಜಣ್ಣ, ಓಸ್ವಾಲ್ಡ್‌ ಪಿರೇರಾ, ರವಿ ರೈ, ಬಕ್ಕಿ ಮಂಜುನಾಥ್‌ ಮಾತನಾಡಿದರು. ವಿತರಕರಾದ ಸುದೇಶ್‌ ಸುವರ್ಣ, ರಾಧಾಕೃಷ್ಣ, ವೆಂಕಟೇಶ್‌, ಟಿ.ಗಣೇಶ್‌, ಲಕ್ಷ್ಮಣ, ಎಸ್‌.ಗಣೇಶ್‌ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಉಮಾಮೋಹನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಚಿನ್‌ ಕುಮಾರ್‌, ಲಕ್ಷ್ಮೀ ನಾಗರಾಜ್‌, ಕಾವ್ಯಾ, ಬಕ್ಕಿ ಮಂಜುನಾಥ್‌ ಗೀತಗಾಯನ ನಡೆಸಿದರು. ತನುಶ್ರೀ ನಾಗೇಂದ್ರ, ಶರಣ್ಯಾ ರಾಧಾಕೃಷ್ಣ ಭರತನಾಟ್ಯ ಪ್ರದರ್ಶನ ನೀಡಿದರು. ಗುರು ಪ್ರಸಾದ್‌, ಸುರಭಿ ಜೈನ್‌ ಇತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next