Advertisement

ಮೂಡಬಿದಿರೆ ತಾಲೂಕು ಖಚಿತ: ಸಿದ್ದು

06:55 AM Jan 08, 2018 | Harsha Rao |

ಮೂಡಬಿದಿರೆ: ಬಹುದಿನಗಳ ನಿರೀಕ್ಷೆಯಂತೆ ಮೂಡಬಿದಿರೆ ಇದೇ ಜ.10ರಿಂದ ಮಂಗಳೂರು ತಾಲೂಕಿನಿಂದ ಬೇರ್ಪಟ್ಟು ಹೊಸ ತಾಲೂಕಾಗಿ ಕಾರ್ಯನಿರ್ವಹಿಸಲಿದೆ, ಹಲವು ವರ್ಷಗಳ ಕನಸಾದ ಒಳಚರಂಡಿ ಯೋಜನೆಗೆ ಮುಂದಿನ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

Advertisement

ಸ್ವರಾಜ್ಯ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ 79.50 ಕೋ.ರೂ. ವೆಚ್ಚದ 18 ಕಾಮಗಾರಿಗಳ ಉದ್ಘಾಟನೆ ಮತ್ತು 13 ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಮತೀಯ ಶಕ್ತಿಗಳ ಆಟಗಳಿಗೆ ಸರಕಾರ ಮಣಿ ಯುವುದಿಲ್ಲ. ಕೋಮುಭಾವನೆಯನ್ನು ಕೆರಳಿಸಿ ಜನಜೀವನವನ್ನು ಹದಗೆಡಿಸುವವರು ಯಾರೇ ಆಗಿದ್ದರೂ ಅವರ ಆಟಗಳಿಗೆ ಸರಕಾರ ಕಡಿವಾಣ ಹಾಕಲಿದೆ ಎಂದು ಅವರು ಘೋಷಿಸಿದರು.

ಚುನಾವಣೆಗೆ ಅಭಯ: ಸಿಎಂ ಅಭಯ
ಅಭಯಚಂದ್ರ ಪ್ರಾಮಾಣಿಕ, ಸಜ್ಜನ. ಮಂತ್ರಿ ಆದಾಗಲೂ ಬಂದು ಕೃತಜ್ಞತೆ ಹೇಳಿದ್ದಾರೆ, ಮಂತ್ರಿ ಪದವಿ ಹೋದಾಗಲೂ ಬಂದು ಕೃತಜ್ಞತೆ ಸೂಚಿಸಿದ್ದಾರೆ ಎಂದ ಸಿದ್ದರಾಮಯ್ಯ, “ವಯಸ್ಸಿದೆ, ಆರೋಗ್ಯವೂ ಇದೆ, ಚುನಾವಣೆಯಲ್ಲಿ ಸ್ಪರ್ಧಿಸುವಿರಲ್ಲವೇ?’ ಎಂದು ಅಭಯರತ್ತ ನೋಡಿ ಹೇಳಿದರು. ಅಭಯಚಂದ್ರ ಅವರು ಕೈಮುಗಿದು ಎದ್ದು ನಿಂತು ವಿಧೇಯತೆಯೊಂದಿಗೆ ಸಮ್ಮತಿ ವ್ಯಕ್ತ ಪಡಿಸಿದರು. “ಹಾಗೆ, ಅಭಯಚಂದ್ರ ಅಭ್ಯರ್ಥಿಯಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ’ ಎಂದು ಸಿದ್ದರಾಮಯ್ಯ ಪ್ರಕಟಿಸಿದಾಗ ಸಭೆಯಲ್ಲಿ ಅಭಯಚಂದ್ರರಿಗೆ ಜೈಕಾರ ಕೇಳಿಬಂತು.

ಸಾಧನ ಸಂಚಯ ಬಿಡುಗಡೆ
ಮಂಗಳೂರು ತಾಲೂಕಿನಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯ ಸರಕಾರದ ಸಾಧನೆಗಳ ಪ್ರಗತಿಯ ವಿವರ ನೀಡುವ, ಕರ್ನಾಟಕ ವಾರ್ತಾ ಇಲಾಖೆ ಪ್ರಕಟಿಸಿರುವ, “ನುಡಿದಂತೆ ನಡೆಯುತ್ತಿದ್ದೇವೆ – ಸಾಧನೆಯ ಐದು ವರ್ಷಗಳು’ ಸಾಧನಾ ಸಂಚಯ ಪುಸ್ತಿಕೆಯನ್ನು ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಅಭಯಚಂದ್ರ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ತಾನು ಸಲ್ಲಿಸಿದ ಎಲ್ಲ ಕೋರಿಕೆ, ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಇದುವರೆಗೆ 200 ಕೋ.ರೂ.ಗೂ ಅಧಿಕ ಮೊತ್ತದ ಕಾಮಗಾರಿಗಳಾಗಿವೆ. ಇನ್ನೂ 100 ಕೋ.ರೂ.ಗೂ ಅಧಿಕ ಕಾಮಗಾರಿ ಗಳು ನಡೆಯಲಿವೆ. ಮೂಡ ಬಿದಿರೆ ಸ್ವರಾಜ್ಯ ಮೈದಾನಕ್ಕೆ ಸಿಂಥೆಟಿಕ್‌ ಟ್ರಾÂಕ್‌, ಸ್ವಿಮ್ಮಿಂಗ್‌ ಪೂಲ್‌, ರಿಂಗ್‌ರೋಡ್‌, ಮರವೂರು ವೆಂಟೆಡ್‌ ಡ್ಯಾಮ್‌, ಮೂಲ್ಕಿಯಲ್ಲಿ  ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹೀಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳ ಹಿಂದೆ ಮುಖ್ಯಮಂತ್ರಿಗಳ ಮುಕ್ತ ಸಹಕಾರ ಒದಗಿಬಂದಿದೆ ಎಂದರು.

Advertisement

ಸಚಿವ ಬಿ. ರಮಾನಾಥ ರೈ ಮಾತನಾಡಿ, ಪ‌ಶ್ಚಿಮ ವಾಹಿನಿ ಯೋಜನೆಗೆ 200 ಕೋ.ರೂ. ಅನುದಾನ ನೀಡಿದ ಸಿದ್ದರಾಮಯ್ಯ ಇನ್ನೂ 100 ಕೋ.ರೂ. ನೀಡಲು ಒಪ್ಪಿದ್ದಾರೆ ಎಂದರು.

ಸಚಿವರಾದ ಪ್ರಮೋದ್‌ ಮಧ್ವರಾಜ್‌, ಯು. ಟಿ. ಖಾದರ್‌, ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌, ಬ್ಲೋಸಂ ಆಸ್ಕರ್‌ ಫೆರ್ನಾಂಡಿಸ್‌, ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಶಾಸಕ ಮೊದಿನ್‌ ಬಾವಾ, ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಮಿಜಾರು ಗುತ್ತು ಆನಂದ ಆಳ್ವ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ, ಪೊಲೀಸ್‌ ಕಮಿಶನರ್‌ ಟಿ.ಆರ್‌. ಸುರೇಶ್‌, ಹಾಸನದ ಪೊಲೀಸ್‌ ಕಮಿಶನರ್‌ ರಾಹುಲ್‌ ಷಹಪುರವಾಡೆ, ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್‌, ತುಳು ಸಾಹಿತ್ಯ ಅಕಾಡೆಮಿಯ ಎ.ಸಿ. ಭಂಡಾರಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎ. ಖಾದರ್‌, ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಮುಡಾ ಅಧ್ಯಕ್ಷ ಸುರೇಶ ಪ್ರಭು, ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌, ಜಿ.ಪಂ., ತಾ.ಪಂ. ಸದಸ್ಯರ ಸಹಿತ ವಿವಿಧ ಹಂತಗಳ ಜನಪ್ರತಿನಿಧಿಗಳು ವೇದಿಕೆಯಲ್ಲಿದ್ದರು.

ಶ್ರದ್ಧಾಂಜಲಿ: ಕೋಮು ಸಂಘರ್ಷದಿಂದ ಮೃತಪಟ್ಟವರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಪರ ಜಿಲ್ಲಾಧಿಕಾರಿ ಕುಮಾರ್‌ ಸ್ವಾಗತಿಸಿದರು, ರಾಮಚಂದ್ರ ಬಂಟ್ವಾಳ ನಿರೂಪಿಸಿದರು.

ಮೂಡಬಿದಿರೆಯಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೆಸ್ಕಾಂ ನೂತನ ಕಟ್ಟಡ, ಜ್ಯೋತಿ ನಗರದಲ್ಲಿರುವ ಗಾಂಧಿ ಪಾರ್ಕ್‌ನಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗಿರುವ ಸ್ಕೇಟಿಂಗ್‌ ರಿಂಕ್‌, 7 ಕೋ.ರೂ. ವೆಚ್ಚದ ಮೂಡಬಿದಿರೆ -ಕೊಡ್ಯಡ್ಕ ರಸ್ತೆಯನ್ನು ಸಂಪರ್ಕಿಸುವ ವರ್ತುಲ ರಸ್ತೆ ಇವು ಮುಖ್ಯಮಂತ್ರಿಗಳು ಉದ್ಘಾಟಿಸಿದ ಮೂಡಬಿದಿರೆ ಪುರಸಭಾ ವ್ಯಾಪ್ತಿಯ ಪ್ರಮುಖ ಕಾಮಗಾರಿಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next