Advertisement

ಮೂಡಬಿದಿರೆ: ಅಪಾಯ ಮುಕ್ತವಾಗಲಿ ರಿಂಗ್‌ರೋಡ್‌

10:21 AM Jun 21, 2018 | |

ಮೂಡಬಿದಿರೆ: ಬೆಳೆಯುತ್ತಿರುವ ಮೂಡಬಿದಿರೆಯ ಪೇಟೆಯಲ್ಲಿ ವಾಹನ ದಟ್ಟನೆಯನ್ನು ನಿವಾರಿಸುವಲ್ಲಿ ಸ್ವರಾಜ್ಯ ಮೈದಾನದಿಂದ ಅಲಂಗಾರ್‌ನತ್ತ ಸಾಗುವ ರಿಂಗ್‌ ರೋಡ್‌ ರಚನೆ ಮಹತ್ವದ ಪಾತ್ರ ವಹಿಸುತ್ತಿದೆ. ಆದರೆ ಈ ರಸ್ತೆಯ ನಿರ್ಮಾಣದಲ್ಲಿ ಕೆಲವೊಂದು ಸುರಕ್ಷಾ  ಕ್ರಮಗಳನ್ನು ಇನ್ನೂ ಪೂರ್ಣಗೊಳಿಸದೇ ಇರುವುದರಿಂದ ಅಪಾಯದ ಸಂಭಾವ್ಯತೆ ಹೆಚ್ಚಾಗಿದೆ.

Advertisement

ಈ ಭಾಗದಲ್ಲಿ ದೇವಸ್ಥಾನಗಳು, ಕಲ್ಯಾಣಮಂದಿರ, ಮಾರುಕಟ್ಟೆ, ಗ್ಯಾರೇಜ್‌ಗಳು, ಆಳ್ವಾಸ್‌ ಹೆಲ್ತ್‌ ಸೆಂಟರ್‌ನ ಎಮರ್ಜೆನ್ಸಿ ವಾರ್ಡ್‌, ಸ್ವರಾಜ್ಯ ಮೈದಾನದ ಕ್ರೀಡಾಂಗಣ, ಈಜುಕೊಳ ಎಲ್ಲವೂ ಇರುವುದರಿಂದ ಇಲ್ಲಿ ತಲೆದೋರುತ್ತಿರುವ ಅಪಾಯಕಾರಿ ಸನ್ನಿವೇಶಗಳ ಬಗ್ಗೆ ಎಚ್ಚರಿಸಬೇಕಾಗಿದೆ. 

ಸ್ವರಾಜ್ಯಮೈದಾನದ ಬಳಿಯೇ ಹಾದು ಹೋಗುವ ರಿಂಗ್‌ ರೋಡ್‌ನಿಂದಾಗಿ ಕ್ರಿಕೆಟ್‌ ಆಟಗಾರರಿಗೆ ತೊಂದರೆ ಆಗುತ್ತಿದೆ
ಎಂಬ ಮಾತು ಕೇಳಿಬರುತ್ತಿತ್ತು. ಅದಕ್ಕೆ ಪರಿಹಾರವಾಗಿ ರಸ್ತೆಯ ಬದಿಯಲ್ಲಿ ಎತ್ತರಕ್ಕೆ ಬಲೆ ಹಾಸಲು ಯೋಜಿಸಲಾಗಿತ್ತು. ಅಷ್ಟರಲ್ಲಿ ಈ ಮೈದಾನಕ್ಕೆ ಎರಡು ವರ್ಷಗಳ ಮಟ್ಟಿಗೆ ಮೂಡಬಿದಿರೆ ಪೇಟೆಯಿಂದ ತಾತ್ಕಾಲಿಕವಾಗಿ ಸ್ಥಳಾಂತರಗೊಂಡ ಪುರಸಭಾ ಮಾರುಕಟ್ಟೆ ಅತ್ಯಧಿಕ ಸಂಖ್ಯೆಯಲ್ಲಿ ಜನರನ್ನು ಸೆಳೆಯತೊಡಗಿತು. ಮೈದಾನವನ್ನು ಪ್ರವೇಶಿಸುವ ಎರಡು ಕಡೆಗಳಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸದೆ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅದರಲ್ಲೂ ವಾರದ ಸಂತೆಯ ದಿನವಾದ ಶುಕ್ರವಾರ ಗ್ರಾಮಾಂತರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗಾಗಮಿಸುತ್ತಿದ್ದು, ರಸ್ತೆ ದಾಟಲು ಪರದಾಡಬೇಕಾಗಿದೆ.

ದೇವಸ್ಥಾನ, ಮಾರುಕಟ್ಟೆಯ ಭಾಗದಲ್ಲಿ ಆಳ್ವಾಸ್‌ ಆಸ್ಪತ್ರೆ ರಸ್ತೆ ರಿಂಗ್‌ರೋಡ್‌ನ್ನು ಸಂಪರ್ಕಿಸುವಲ್ಲಿ ಮತ್ತು ಪಶ್ಚಿಮಾಭಿಮುಖವಾಗಿರುವ ಆಳ್ವಾಸ್‌ ಎಮರ್ಜೆನ್ಸಿ ವಾರ್ಡ್‌ನತ್ತ ತಿರುಗುವ ಮುನ್ನ ರಸ್ತೆ ಉಬ್ಬುಗಳನ್ನು ಹಾಕದಿರುವುದರಿಂದ ಇಲ್ಲಿ ವಾಹನಗಳು ಅತಿವೇಗದಿಂದ ಬರುತ್ತಿವೆ.

ಮುಂದೆ ಈಜುಕೊಳಕ್ಕಿಂತ ಕೊಂಚ ಮೊದಲು, ಬಲಿಪರ ಕಂಬಳ ಗದ್ದೆಯಾಗಿ ಪಶ್ಚಿಮದ ಗ್ರಾಮಾಂತರ ಪ್ರದೇಶದತ್ತ ಸಾಗುವ ರಸ್ತೆ ಮತ್ತು ನಾಗರಕಟ್ಟೆಯತ್ತ ತಿರುಗುವ ರಸ್ತೆ ಸಂದಿಸುವಲ್ಲಿ ಕಂಬಳ ಗದ್ದೆ ಕಡೆಯಿಂದ ಬರುವ ವಾಹನಗಳು ರಿಂಗ್‌ ರೋಡ್‌ಗೆ ಪ್ರವೇಶಿಸುವಲ್ಲಿ ಸೂಕ್ತವಾದ ವೃತ್ತವಿಲ್ಲದೆ ಅಪಾಯದ ಸ್ಥಿತಿ ಇದೆ. ನಾಗರಕಟ್ಟೆ, ಒಂಟಿಕಟ್ಟೆ ರಸ್ತೆ ಕ್ರಾಸ್‌, ಅಲಂಗಾರು ರಸ್ತೆಯನ್ನು ಸಂಧಿಸುವಲ್ಲೂ ರಸ್ತೆ ಉಬ್ಬು ಹಾಕಿಲ್ಲ. ಹೀಗಾಗಿ ಇಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. 

Advertisement

ಅಪಾಯಕಾರಿ ತಿರುವು
ಬಿಎಸ್‌ಎನ್‌ಎಲ್‌ ಟವರ್‌ ದಾಟಿ ಮುಂದೆ ರಸ್ತೆ ತಿರುಗುವಲ್ಲಿ ರಸ್ತೆಯ ಅಗಲ ತೀರಾ ಕಡಿಮೆ ಇದ್ದು, ಅಪಾಯಕಾರಿಯಾಗಿದೆ. ಇಲ್ಲಿ ಕೆಳಗಿನಿಂದ ಬರುವ ವಾಹನಗಳು ಎಡಗಡೆಯಿಂದ ಬಲಕ್ಕೆ ಸರಿದು ಮೇಲಕ್ಕೇರಿ
ಬರುವಾಗ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಮುಂದೆ ಈಜುಕೊಳದ ಭಾಗದಲ್ಲೂ ರಸ್ತೆ ಉಬ್ಬುಗಳಿಲ್ಲ.

ಎಲ್ಲಿವೆ ಸೂಚನಾ ಫಲಕಗಳು?
ರಿಂಗ್‌ರೋಡ್‌ನ‌ುದ್ದಕ್ಕೂ ಎಲ್ಲೂ ಸೂಚನಾಫಲಕಗಳಿಲ್ಲ. ರಿಂಗ್‌ ರೋಡ್‌ನಿಂದ ಮೂಡಬಿದಿರೆ ಪೇಟೆಯ ಮೂಲಕ (ಕಾರ್ಕಳ/ ಮಂಗಳೂರು/ ಸಚ್ಚೇರಿಪೇಟೆ) ಹಾದುಹೋಗುವ ವಾಹನಗಳಿಗೆ ಸಾಕಷ್ಟು ಪ್ರಯೋಜನವಾಗಿದೆ. ಮೂಡಬಿದಿರೆಯಲ್ಲಿ ವಾಹನ ದಟ್ಟನೆ ಕಡಿಮೆಯಾಗಿದೆ. ಆದರೆ ಇಲ್ಲಿರುವ ಅಪಾಯಗಳನ್ನು ಗಮನಿಸಿ ಎಚ್ಚರಿಕೆ ಫ‌ಲಕ, ರಸ್ತೆ ಉಬ್ಬುಗಳನ್ನು ಕೂಡಲೇ ಹಾಕುವ ಕಾರ್ಯ ನಡೆಯಬೇಕಿದೆ.

ಧನಂಜಯ ಮೂಡಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next