Advertisement

ಕಂಬಳ ಕ್ಷೇತ್ರದಲ್ಲಿ ಕೆಸರೆರಚಾಟ: ತಪ್ಪು ದಾಖಲೆಗಳಿಂದ ಸರಕಾರಿ ಹಣ ಸ್ವೀಕಾರ ಆರೋಪ

07:33 PM Jul 12, 2022 | Team Udayavani |

ಮೂಡುಬಿದಿರೆ: ಜಿಲ್ಲಾ ಕಂಬಳ ಸಮಿತಿಯನ್ನು ಕಡೆಗಣಿಸಿ, ಆಜೀವ ಸದಸ್ಯರ ಅಭಿಪ್ರಾಯವನ್ನು ಪಡೆಯದೆ ಕಂಬಳ  ಅಕಾಡೆಮಿಯ ಸಂಚಾಲಕ ಕೆ. ಗುಣಪಾಲ ಕಡಂಬ ಅವರು ತಮ್ಮ ಸ್ವಂತ ಹಿತಾಸಕ್ತಿಯಿಂದ ತಾವೇ ಅಧ್ಯಕ್ಷರೆಂದು ಸೂಚಿಸಿಕೊಂಡು,  ತಮಗೆ ಬೇಕಾದವರ ಹೆಸರನ್ನು ರಾಜ್ಯ ಕಂಬಳ ಸಮಿತಿಗೆ ಕಳುಹಿಸಿದ್ದಾರೆ ಎಂದು ಜಿಲ್ಲಾ ಸಮಿತಿ ಅಜೀವ ಸದಸ್ಯ ಲೋಕೇಶ್ ಶೆಟ್ಟಿ ಮುಚ್ಚೂರು ಅವರು ಪತ್ರಿಕಾಗೋಷ್ಟಿಯಲ್ಲಿ ಆಪಾದಿಸಿ, ಈ ಬೆಳವಣಿಗೆ ಕಾನೂನುಬಾಹಿರವಾಗಿದ್ದು  ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದೇನೆ  ಎಂದರು.

Advertisement

ರಾಜ್ಯ ಕಂಬಳ ಸಮಿತಿಯ ರಚನೆಯ ಬಗ್ಗೆ  ಸರಕಾರ ಹೊರಡಿಸಿದ ಸುತ್ತೋಲೆಯ ಪ್ರತಿ ಕ್ರೀಡಾ ಇಲಾಖೆಗೆ, ದ.ಕ. ಮತ್ತು ಉಡುಪಿ ಜಿಲ್ಲಾಧಿಕಾರಿಗಳಿಗೆ , ಕರಾವಳಿ ಅಭಿವೃದ್ಧಿ  ಪ್ರಾಧಿಕಾರಕ್ಕೆ ಮತ್ತು  ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬರಿಗೆ ಮಾತ್ರ ತಲುಪಿದ್ದು ಜಿಲ್ಲಾ ಕಂಬಳ ಸಮಿತಿಗೆ ಏಕೆ ಬಂದಿಲ್ಲ? ಅದರ ಅರ್ಥ  ಜಿಲ್ಲಾ ಕಂಬಳ ಸಮಿತಿ ಅಸ್ತಿತ್ವದಲ್ಲಿಲ್ಲ  ಎಂದೇ? ಜಿಲ್ಲಾ ಕಂಬಳ ಸಮಿತಿಗಿಂತ ಕಂಬಳ ಅಕಾಡೆಮಿಯೇ ಪರಮವೇ ಎಂಬುದನ್ನು ಈಗ ಅಸ್ತಿತ್ವದಲ್ಲಿರುವ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರು ಸ್ಪಷ್ಟಪಡಿಸಬೇಕಾಗಿದೆ ಎಂದು ಆಗ್ರಹಿಸಿದರು.

ಜಿಲ್ಲಾ ಸಮಿತಿ ರಚನೆ ನ್ಯಾಯಬದ್ಧವಾಗಿಲ್ಲ: ತಪ್ಪು ದಾಖಲೆಗಳಿಂದ ಸರಕಾರಿ ಧನ ಸ್ವೀಕಾರ ಜಿಲ್ಲಾ ಕಂಬಳ ಸಮಿತಿ ರಚನೆ ನ್ಯಾಯಬದ್ಧವಾಗಿಲ್ಲ  ಎಂದು 2018 ರಲ್ಲಿ ಕೋರ್ಟ್ ತಡೆಯಾಜ್ಞೆ  ನೀಡಿ ನಿಯಮಾನುಸಾರ ಸಮಿತಿ ರಚಿಸಲು ಸೂಚಿಸಿದ್ದರೂ ನಿರ್ಲಕ್ಷ್ಯ  ವಹಿಸಲಾಗಿದೆ. 2009 ರಲ್ಲಿ ಜಿಲ್ಲಾ ಕಂಬಳ ಸಮಿತಿಯ ಜವಾಬ್ದಾರಿಯಿಂದ ದೂರ ಉಳಿಯುವುದಾಗಿ ಕಡಂಬರು ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು 2005 ರಲ್ಲಿ ಕಂಬಳ ಉಳಿಸಲು ನಡೆದ ಹೋರಾಟ ವೇಳೆ ಹೊಸ ಸದಸ್ಯತ್ವ ಅಭಿಯಾನ ನಡೆದಾಗ ಕಡಂಬರು ಸದಸ್ಯತ್ವ ಪಡೆಯದೆ ದೂರ ಉಳಿದಿದ್ದಾರೆ. ಆದರೂ ಕಂಬಳ ಸಮಿತಿಯಲ್ಲಿ  ವಕ್ತಾರರಾಗಿ ಮುಂದುವರಿದಿದ್ದಾರೆ. ಅಧಿಕೃತ ಮಾನ್ಯತೆ ಪಡೆಯದ ತಂತ್ರಜ್ಞಾನವನ್ನು ಬಳಸಿಕೊಂಡು, ಓಟಗಾರ ಶ್ರೀನಿವಾಸ ಗೌಡ ಹೆಸರಿನಲ್ಲಿ ತಪ್ಪು  ದಾಖಲೆಗಳನ್ನು ಸೃಷ್ಟಿಸಿ ಸರಕಾರದಿಂದ ಗೌರವಧನವನ್ನು ಪಡಕೊಳ್ಳಲಾಗಿದೆ ಎಂದು ಆರೋಪಿಸಿದರು.

ನ್ಯಾಯಾಂಗ ನಿಂದನೆ; ಜಿಲ್ಲಾ ಸಮಿತಿ ಅಧ್ಯಕ್ಷತೆಗೆ ರಾಜೀನಾಮೆಗೆ ಆಗ್ರಹ:

32 ವರ್ಷಗಳ ಇತಿಹಾಸವಿರುವ  ಜಿಲ್ಲಾ ಕಂಬಳ ಸಮಿತಿ 22 ವರ್ಷಗಳ ಹಿಂದೆ ನೋಂದಣಿಯಾಗಿದ್ದು ಅದರದ್ದೇ ಆದ ನಿಯಮಾವಳಿಯನ್ನು ಹೊಂದಿದೆ. ಆದರೆ, 2021-22 ರಲ್ಲಿ ಈ ನಿಯಮಾವಳಿಗಳನ್ನು ಗಾಳಿಗೆ ತೂರಿ,  ಒಂದಿಷ್ಟು ಜನರು ಸೇರಿ  ಹೊಸ ಸಮಿತಿಯನ್ನು ರಚಿಸಿದ್ದಾರೆ. 90 ಮಂದಿ ಆಜೀವ ಸದಸ್ಯರು, 35 ಮಂದಿ ಸಾಮಾನ್ಯರಿದ್ದು ಇವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ  ರಚಿಸಲಾದ ಸಮಿತಿಯ ಸಿಂಧುತ್ವ ಪ್ರಶ್ನಿಸಿ ಆಜೀವ ಸದಸ್ಯನೆಂಬ ನೆಲೆಯಲ್ಲಿ  ತಾನು ರಾಜ್ಯ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದು  ಹೈಕೋರ್ಟ್  ಉಡುಪಿ ಜಿಲ್ಲಾ ನೋಂದಣಾಧಿಕಾರಿಯವರಿಗೆ ಜಿಲ್ಲಾ ಕಂಬಳ ಸಮಿತಿಯ ನಿಯಮಾವಳಿ ಪ್ರಕಾರ ಸಮಿತಿ ರಚಿಸಲು ಆದೇಶ ನೀಡಿತ್ತು . ಆದರೆ ಅದನ್ನು ಪಾಲಿಸದೆ ಇರುವುದು ನ್ಯಾಯಾಂಗ ನಿಂದನೆಯಾಗಿರುತ್ತದೆ ಎಂದವರು ಹೇಳಿದರು.

Advertisement

ಜಿಲ್ಲಾ ಕಂಬಳ ಸಮಿತಿಯನ್ನು ಬದಿಗೊತ್ತಿ ಅಕಾಡೆಮಿಯೇ ಪ್ರಧಾನ ಎಂಬಂತೆ ಬಿಂಬಿಸಲಾಗುತ್ತಿರುವುದು ಖೇದಕರ.  ಸುಕುಮಾರ್ ಶೆಟ್ಟಿ, ಭಾಸ್ಕರ್ ಕೋಟ್ಯಾನ್, ಶಾಂತಾರಾಮ ಶೆಟ್ಟಿ, ನವೀನ್‌ಚಂದ್ರ ಆಳ್ವ, ಪಾಣಿಲ ಸತೀಶ್ಚಂದ್ರ ಸಾಲ್ಯಾನ್ ಅವರಂತಹ ಹಿರಿಯ ಯಜಮಾನರು ಅಕಾಡೆಮಿ ಸಂಚಾಲಕರ ಏಕಸ್ವಾಮ್ಯದ ನಿರ್ಧಾರಗಳ ಬಗ್ಗೆ ತಮ್ಮ ನಿಲುವು ಪ್ರಕಟಿಸಲಿ;  ಜಿಲ್ಲಾ ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸ್ವಾಭಿಮಾನವನ್ನು ಉಳಿಸಿಕೊಳ್ಳಲಿ ಎಂದು ಅವರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next