ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಡಿ. 21ರಿಂದ 27ರ ವರೆಗೆ ನಡೆಯಲಿರುವ “ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ’ ವೇಳೆ 12 ಎಕ್ರೆ ಜಾಗದಲ್ಲಿ ಕೃಷಿ ಮೇಳ ನಡೆಸಲು ಸಕಲ ಸಿದ್ಧತೆಗಳಾಗುತ್ತಿದೆ ಎಂದು ಜಾಂಬೂರಿ ಪ್ರಧಾನ ಕಾರ್ಯದರ್ಶಿ, ದ.ಕ. ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಮುಖ್ಯ ಆಯುಕ್ತ ಡಾ| ಎಂ. ಮೋಹನ ಆಳ್ವ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಹೆಸರಿನ ಆವರಣದಲ್ಲಿ 4 ಎಕರೆ ಜಾಗದಲ್ಲಿ 100 ಬಗೆಯ ತರಕಾರಿಗಳ ಅತ್ಯಾಕರ್ಷಕ ನೈಜತೋಟ ಮೈತಳೆದಿದೆ. ಉಳಿದಂತೆ ಫಲ ಮತ್ತು ಪುಷ್ಪ ಪ್ರದರ್ಶನ, ವಿವಿಧ ಮಳಿಗೆಗಳು, ಎಜಿ ಕೊಡ್ಗಿ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಕೃಷಿ ಸಂಪತ್ತು
ದೇಶ ವಿದೇಶಗಳ ಬಾಳೆ, ತೆಂಗು, ಧಾನ್ಯ, 530 ವಿಧ ಭತ್ತ, ವಿವಿಧ ಗೆಡ್ಡೆಗೆಣಸುಗಳು, ಆಯುರ್ವೇದ ಮಹತ್ವದ ಹಣ್ಣು ಹಂಪಲುಗಳು, 8 ವಿವಿಧ ಲೆಟ್ಯೂಸ್ ಮತ್ತು ಬ್ರುಕೋಲಿ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ.
ವಿಜ್ಞಾನ ವಸ್ತು ಪ್ರದರ್ಶನಗಳ ವಿಜ್ಞಾನಮೇಳ, ವಿವಿಧ ಭಾಷೆಗಳ ಪುಸ್ತಕ ಮೇಳ, ಕಲಾಮೇಳ, ಆಹಾರೋತ್ಸವ ಮೇಳಗಳನ್ನು ಏರ್ಪಡಿಸಲಾಗಿದ್ದು 6 ವೇದಿಕೆಗಳಲ್ಲಿ ಭಾರತೀಯ ಸಾಂಸ್ಕೃತಿಕ ವೈವಿಧ್ಯ ಅನಾವರಣವಾಗಲಿದೆ. ಎಲ್ಲ ವಯೋಮಾನದವರಿಗಾಗಿ, ಒಂದೇ ಕಡೆ ಎಲ್ಲ ವಸ್ತುಗಳು ಲಭ್ಯವಿರುವ ಮಾರಾಟ ಮಳಿಗೆಗಳು ತೆರೆದುಕೊಳ್ಳಲಿವೆ ಎಂದರು.
ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ಆಸಕ್ತರಿಗೆ ಮುಕ್ತ, ಉಚಿತ ಪ್ರವೇಶ, ಊಟೋಪಚಾರವೂ ಉಚಿತವಾಗಿದೆ. ಕೃಷಿ ಸಿರಿಯಲ್ಲಿ ಕೃಷಿ ಸಂಬಂಧಿತ ವಸ್ತು ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವಿದೆ. ಕೇವಲ ಪ್ರದರ್ಶನ ಮಳಿಗೆಗಳಿಗೆ ಯಾವುದೇ ಶುಲ್ಕವಿಲ್ಲ. ಉಳಿದಂತೆ ನಿಗದಿತ, ಸಾಂಕೇತಿಕ ಶುಲ್ಕದೊಂದಿಗೆ 100 ಚದರ ಅಡಿಯ ಮಳಿಗೆಗಳನ್ನು ಪಡೆದುಕೊಳ್ಳಲು ಡಿ. 18ರ ಮುನ್ನ ಆಳ್ವಾಸ್ ದಾಖಲಾತಿ ವಿಭಾಗಕ್ಕೆ ಖುದ್ದಾಗಿ ಭೇಟಿ ನೀಡಬಹುದಾಗಿದೆ ಎಂದವರು ವಿವರಿಸಿದರು. ಕೃಷಿ ಮೇಳ ಸಮಿತಿ ಪ್ರಮುಖರಾದ ರಾಜವರ್ಮ ಬೈಲಂಗಡಿ, ಧನಕೀರ್ತಿ ಬಲಿಪ, ಸುಭಾಶ್ಚಂದ್ರ ಚೌಟ, ಉದಯ ದೇವಾಡಿಗ, ಚಂದ್ರಯ್ಯ ಆಚಾರ್ಯ ಉಪಸ್ಥಿತರಿದ್ದರು.