Advertisement

112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

10:10 AM Dec 12, 2019 | mahesh |

19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಶಾಲೆ ಆರಂಭ 1906
ರಾಜ್ಯಕ್ಕೆ ಮುಖ್ಯಮಂತ್ರಿ, ಮಂತ್ರಿಯನ್ನು ಕೊಟ್ಟ ಶಾಲೆ

ಮೂಡುಬಿದಿರೆ: ಜೈನ ಕಾಶಿ ಮೂಡುಬಿದಿರೆಯಲ್ಲಿ “ಜೈನ ಪ್ರಾಂತಿಕ ಸಭಾ’ದ ಆಶ್ರಯದಲ್ಲಿ 1906ರ ಮೇ 28ರಂದು ಸಂಸ್ಕೃತ ಪಾಠಶಾಲೆ ಆರಂಭವಾಯಿತು. 1907ರಲ್ಲಿ ಸರಕಾರದ ಮಂಜೂರಾತಿಯೊಂದಿಗೆ 1ರಿಂದ 5ನೇ ತರಗತಿಯವರೆಗಿನ ಕನ್ನಡ ಪ್ರಾಥಮಿಕ ಶಾಲೆಯಾಗಿ ತೆರೆದುಕೊಂಡಿತು. ಆಗ ನಾಲ್ಕೈದು ಅಧ್ಯಾಪಕರು, ಸುಮಾರು 90 ವಿದ್ಯಾರ್ಥಿಗಳಿದ್ದರು. ಪಂಡಿತ ಲೋಕನಾಥ ಶಾಸ್ತ್ರಿಯವರ ಸಹಕಾರದಿಂದ ಸಂಸ್ಕೃತ ತರಗತಿ ಪ್ರಾರಂಭವಾಯಿತು.

ಪಾಠಶಾಲಾ ಬಸದಿ
1916ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಟ್ಟು 1ರಿಂದ 8ನೇ ತರಗತಿಯವರೆಗೆ ಶಿಕ್ಷಣಕ್ಕೆ ಅವಕಾಶ ಲಭಿಸಿತು. ಬಸದಿಗಳ ನಡುವೆ ಇದ್ದ ಮಲ್ಲಣ್ಣ ಶೆಟ್ಟರ ಮನೆ ವಾರಸುದಾರರಿಲ್ಲದೆ ಸರಕಾರದಿಂದ ಹರಾಜು ಪ್ರಕ್ರಿಯೆ ನಡೆದಾಗ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ದಿ| ಡಿ. ಚಂದಯ್ಯ ಹೆಗ್ಗಡೆಯವರು ಮತ್ತು ಕಟ್ಟೆಮಾರು ದಿ| ಸರಸಮ್ಮ ಶೆಡ್ತಿಯವರು ತಲಾ 5,000 ರೂ. ಜತೆ ಕಟ್ಟಡ ಸಹಿತ 2.24 ಎಕ್ರೆ ಜಾಗವನ್ನು ಸಂಘ ಹಾಗೂ ಪಾಠಶಾಲೆಯ ಉಪಯೋಗಕ್ಕೆ ಒದಗಿಸಿದರು.

ಮುಂದೆ ಇಲ್ಲಿ ಭ| ಮುನಿಸುವ್ರತ ಸ್ವಾಮಿಯ ಬಿಂಬ ಸ್ಥಾಪನೆಯಾಗಿ ಪಾಠಶಾಲಾ ಬಸದಿ ಎಂಬ ಹೆಸರನ್ನು ಪಡೆಯಿತು. ಅಧ್ಯಕ್ಷರಾಗಿ ಅರಳ ದೇಜಣ್ಣ ಶೆಟ್ಟಿ, ಕಟ್ಟೆಮಾರು ಚೆಲುವಯ್ಯ ಬಲ್ಲಾಳ, ಪಟ್ಣಶೆಟ್ಟಿ ಪದ್ಮನಾಭ ಶೆಟ್ಟಿ, ಕಟ್ಟೆಮಾರು ರಘುಚಂದ್ರ ಬಲ್ಲಾಳ, ಸ್ವ| ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಧರ್ಮಸ್ಥಳದ ಡಿ. ಮಂಜಯ್ಯ ಹೆಗ್ಗಡೆ, ಪುತ್ತೂರು ಬ್ರಹ್ಮಯ್ಯ ಶೆಟ್ಟಿ, ಹೊಸಂಗಡಿ ಅರಮನೆ ಪಾಂಡ್ಯಪ್ಪ ಅರಸ ಬಿನ್ನಾಣಿ, ರತ್ನವರ್ಮ ಹೆಗ್ಗಡೆ ಕಾರ್ಯನಿರ್ವಹಿಸಿದರು.

Advertisement

ಮಂಜಯ್ಯ ಹೆಗ್ಗಡೆ ಕಾಲದಲ್ಲಿ “ಜೈನ ಪ್ರಾಂತಿಕ ಸಭಾ’ ಸಂಘಟನೆಯು “ಶ್ರೀ ಮೂಡುಬಿದಿರೆ ದಿಗಂಬರ ಜೈನ ವಿದ್ಯಾವರ್ಧಕ ಸಂಘ’ ಎಂದು ನೋಂದಾಯಿಸಲ್ಪಟ್ಟಿತು. 1969ರಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸುಮಾರು 4 ದಶಕಗಳ ಕಾಲ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದರು. ಅನಂತರ ಈ ಹಿಂದಿನ ಹೊಂಬುಜ ಭಟ್ಟಾರಕ ಸ್ವಾಮೀಜಿ, ಎಂ. ಸುನೀಲ್‌ಕೀರ್ತಿ, ಪ್ರಸ್ತುತ ಚೌಟರ ಅರಮನೆ ಎಂ. ವೀರೇಂದ್ರ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಚಾಲಕರಾಗಿ , ಚೌಟರ ಅರಮನೆ ಜಗತ್ಪಾಲಯ್ಯ ಉದಯವರ್ಮರಾಜ್‌, ವಿದ್ವಾನ್‌ ಟಿ. ರಘುಚಂದ್ರ ಶೆಟ್ಟಿ, ಚೌಟರ ಅರಮನೆ ಎಂ. ವಿಜಯರಾಜ್‌, ಚೌಟರ ಅರಮನೆ ಎಂ. ಸುನಿಲ್‌ ಕೀರ್ತಿ, ಕೆ. ಹೇಮರಾಜ್‌, ಪ್ರತಾಪ್‌ ಕುಮಾರ್‌, ಪ್ರಸ್ತುತ ಮತ್ತೂಮ್ಮೆ ಕೆ. ಹೇಮರಾಜ್‌ ಸೇವೆ ಸಲ್ಲಿಸುತ್ತಿದ್ದಾರೆ.

ಉತ್ತರ ಭಾಗದಲ್ಲಿ ಆರು ಕೊಠಡಿಗಳ ಹೊಸ ಕಟ್ಟಡ (ಈಗಿನ ಜೈನ ಪ್ರೌಢಶಾಲೆ) ನಿರ್ಮಿಸಲಾಯಿತು. ಅಂದಿನ ಮದ್ರಾಸ್‌ ಸರಕಾರದ ಕಾರ್ಮಿಕ ಮಂತ್ರಿಯಾಗಿದ್ದ ಮಾಜಿ ರಾಷ್ಟ್ರಪತಿ ವಿ.ವಿ. ಗಿರಿ ಈ ಕಟ್ಟಡವನ್ನು ಉದ್ಘಾಟಿಸಿದ್ದರು. ಮತ್ತು ಮೂರು ಕೊಠಡಿಗಳು, ಮಹಡಿ ಇರುವ “ಗೇಂದಾಲಾಲ್‌ ಕಟ್ಟಡ ನಿರ್ಮಾಣವಾಯಿತು. 1944ರಲ್ಲಿ ಜೈನ ಹೈಸ್ಕೂಲ್‌ ಪ್ರಾರಂಭವಾದಾಗ ಹಿ.ಪ್ರಾ. ಶಾಲೆಯಲ್ಲಿದ್ದ 6,7, 8ನೇ ತರಗತಿಗಳು ಹೈಸ್ಕೂಲಿನ 1, 2 , 3 ಫಾರ್ಮುಗಳಾಗಿ ಪರಿವರ್ತನೆಗೊಂಡು, ಮತ್ತೆ ಡಿಜೆ ಶಾಲೆ 1ರಿಂದ 5ನೇ ತರಗತಿಯ ಪ್ರಾಥಮಿಕ ಶಾಲೆಯಾಗಿ 1968ರವರೆಗೆ ಮುಂದುವರಿಯಿತು. ಮತ್ತೆ ಹೈಸ್ಕೂಲಿನಿಂದ 6, 7ನೇ ತರಗತಿಗಳನ್ನು ಬೇರ್ಪಡಿಸಿ ಮೂಲ ಶಾಲೆಗೆ ಸೇರಿಸಿ “ದಿಗಂಬರ ಜೈನ ಹಿರಿಯ ಪ್ರಾಥಮಿಕ ಶಾಲೆ ಎಂಬುದಾಯಿತು. ಎಂ. ವಾಸುದೇವ ನಾಯ್ಕ ಮುಖ್ಯೋಪಾಧ್ಯಾಯರಾಗಿದ್ದ ಆ ಕಾಲದಲ್ಲಿ 425ರಷ್ಟು ವಿದ್ಯಾರ್ಥಿಗಳು, 10 ಮಂದಿ ಶಿಕ್ಷಕರು ಇದ್ದರು.

ಶಿಶುಪಾಲ ಶಾಸ್ತ್ರಿ, ಪಂ. ನೇಮಿರಾಜ ಶೆಟ್ಟಿ, ಚಂದ್ರರಾಜೇಂದ್ರ, ನೇಮಿರಾಜ ಇಂದ್ರ, ಕೆ. ರಾಮಕೃಷ್ಣ ಉಡುಪ, ಜಯಂತಿ ಶೆಣೈ, ಹರಿವರ್ಮರಾಜ್‌ ಮೊದಲಾದವರಿಲ್ಲಿ ಶಿಕ್ಷಕರಾಗಿದ್ದರು. ವಿ.ಎನ್‌. ಬಿಜೂರು, ಪಂ| ರಮಾನಾಥ ರಾಯರು, ರಾಜ್ಯಪ್ರಶಸ್ತಿ ಪುರಸ್ಕೃತ ಎಂ. ವಾಸುದೇವ ನಾಯ್ಕ, ವಿಲಿಯಂ ಸಿಕ್ವೇರ, ಎಚ್‌. ಪದ್ಮರಾಜ ಇಂದ್ರ, ಎಂ. ಪದ್ಮರಾಜ ಶೆಟ್ಟಿ, ಎಚ್‌. ಶಾಂತಿರಾಜ ಶೆಟ್ಟಿ, ಶೈವಲಿನಿ, ಜ್ಞಾನಚಂದ್ರ, ಸುಮತಿ, ಸದ್ಯ ಶಶಿಕಾಂತ ವೈ. ಮುಖ್ಯೋಪಾಧ್ಯಾಯರು. ಮೂವರು ಶಿಕ್ಷಕರು (ಅನುದಾನಿತ) ಮತ್ತು ಆಡಳಿತ ಮಂಡಳಿಯ ವತಿಯಿಂದ 6 ಮಂದಿ ಶಿಕ್ಷಕರು, 2 ಆಯಾ ಹಾಗೂ 4 ಮಂದಿ ಅಕ್ಷರ ದಾಸೋಹ ನೌಕರರನ್ನು ನೇಮಿಸಲಾಗಿದೆ.

ಸುಸಜ್ಜಿತ ಸೌಲಭ್ಯಗಳು
ಕುಡಿಯುವ ನೀರು ಪೂರೈಕೆ (ಬಾವಿ, ಬೋರ್‌ವೆಲ್‌), ಕಂಪ್ಯೂಟರ್‌ ಪ್ರಯೋಗಾಲಯ, ಗ್ರಂಥಾಲಯ ಇವೆ. ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಉತ್ತಮ ಗುಣಮಟ್ಟದ ಬಿಸಿಯೂಟವಿದೆ. ಪ್ರತ್ಯೇಕ ಸಂಸ್ಕೃತ ತರಗತಿ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸ್ಕೌಟ್ಸ್‌, ಗೈಡ್‌ ಕಬ್ಸ್ ಘಟಕಗಳಿಲ್ಲಿವೆ. ಕಳೆದ ಎರಡು ವರ್ಷಗಳಲ್ಲಿ ಇಲಾಖಾ ಕ್ರೀಡಾಕೂಟಗಳಲ್ಲಿ ಚಾಂಪಿಯನ್‌ಶಿಪ್‌ ಗಳಿಸಿದ ಶಾಲೆ ಇದು.

ಹೆಮ್ಮೆಯ ಹಳೆ ವಿದ್ಯಾರ್ಥಿಗಳು
ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಲಿ, ಮಾಜಿ ಸಚಿವ ಅಭಯಚಂದ್ರ, ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಡಾ| ಯಶೋವರ್ಮ ಉಜಿರೆ (ಶಿಕ್ಷಣ), ಸುರೇಂದ್ರ ಕುಮಾರ್‌ ಹೆಗ್ಡೆ ಮುಂಬಯಿ, ಸುಕುಮಾರ ರಾವ್‌ (ಕ್ರೀಡೆ/ಕಸ್ಟಮ್ಸ್‌), ಡಾ| ಡಿ. ಆರ್‌. ಶೆಣೈ , ಸಮುದ್ರ ವಿಜಯ (ವಿಜ್ಞಾನ ರಂಗ), ನವೀನ್‌ ಕುಮಾರ್‌ ಮಿಜಾರ್‌ (ಕೃಷಿ), ಸುನಿಲ್‌ಕೀರ್ತಿ ಚೌಟರ ಅರಮನೆ (ಉದ್ಯಮ, ಶಿಕ್ಷಣ, ಸಮಾಜ ಸೇವೆ), ಪ್ರಫುಲ್ಲಚಂದ್ರ ಇಂದ್ರ (ನಾಟಕ), ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುದೇಶ್‌ ಕುಮಾರ್‌, ಇರ್ಷಾದ್‌ ಮೂಡುಬಿದಿರೆ, ದುಬಾೖ(ಲೇಖನ /ಜಾಹೀರಾತು ವ್ಯವಹಾರ), ಡಾ| ಅಶ್ರಫ್‌ (ದಂತವೈದ್ಯಕೀಯ), ಡಾ| ಅನಘಾ, ಮಹಮ್ಮದ್‌ ಶರೀಫ್‌ ದುಬಾೖ, ದುರ್ಗಾಪ್ರಸಾದ್‌ , ಐ . ರಾಘವೇಂದ್ರ ಪ್ರಭು, ಹರ್ಷವರ್ಧನ ಪಡಿವಾಳ್‌ (ಉದ್ಯಮ), ಸಂಸ್ಥೆಯ ಸಂಚಾಲಕ ಕೆ. ಹೇಮರಾಜ್‌, ಉದ್ಯಮಿ ಅಭಿಜಿತ್‌ ಎಂ. ಹೆಮ್ಮೆಯ ವಿದ್ಯಾರ್ಥಿಗಳು.

ಅನುದಾನಿತ ಶಾಲೆಗಳಿಗೆ 23 ವರ್ಷಗಳಿಂದ ತೆರವಾದ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಆದರೆ, ಆಡಳಿತ ಮಂಡಳಿಯವರು ಹಾಗೂ ಎಸ್‌ಡಿಎಂಸಿ ಸಹಕಾರದಲ್ಲಿ ಶಾಲೆ ಮಕ್ಕಳಿಗೆ ಯಾವುದೇ ಕೊರತೆ ಕಾಡದಂತೆ ನೋಡಿಕೊಳ್ಳಲಾಗುತ್ತಿದೆ.
-ಶಶಿಕಾಂತ್‌ ವೈ. ಮುಖ್ಯೋಪಾಧ್ಯಾಯರು.

ಅಂದಿನ ಅತ್ಯಂತ ಸರಳ ಅಧ್ಯಾಪಕರ ಪ್ರೌಢ ಪಾಠಗಳು, ಆಟಕ್ಕೆ ವಿಶಾಲ ಮೈದಾನ, ಇಡೀ ಊರಿನ ಮಂದಿ ಸೇರುತ್ತಿದ್ದ ಶಾಲಾ ವಾರ್ಷಿಕೋತ್ಸವ, ಬಾಲ್ಯದ ಅನೇಕ ಸಿಹಿ-ಕಹಿ ನೆನಪುಗಳನ್ನು ಬಚ್ಚಿಟ್ಟುಕೊಂಡಿರುವ ಡಿ.ಜೆ. ಶಾಲಾ ಕಟ್ಟಡದತ್ತ ಈಗಲೂ ಗೌರವದಿಂದ ಕಣ್ಣುಹಾಯಿಸದೆ ಹೋದ ದಿನವಿಲ್ಲ.
-ಹೇಮಾವತಿ ವೀ. ಹೆಗ್ಗಡೆ, ಹಳೆ ವಿದ್ಯಾರ್ಥಿನಿ.

- ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next