ಬೇಂದ್ರೆಯ ಕಲ್ಪನಾಪರಿಧಿಯಿಂದ ಚಿಮ್ಮಿಬಂದ “ಬೆಳಗು’ ಕವಿತೆ, ಕನ್ನಡ ಚಿತ್ರರಂಗವನ್ನೂ ಸೆಳೆಯುತ್ತದೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಮೊಟ್ಟ ಮೊದಲ ಚಿತ್ರ “ಬೆಳ್ಳಿಮೋಡ’ದಲ್ಲಿ “ಬೆಳಗು’ ಹಲವು ಭಾವಗಳಿಂದ ಮೈದಳೆಯುತ್ತದೆ. ಬೇಂದ್ರೆ ಕವಿತೆಯನ್ನು ದೃಶ್ಯರೂಪಕ್ಕೆ ಇಳಿಸುವ ಆ ಸಂದರ್ಭ ಹೇಗಿತ್ತು?
ತ್ರಿವೇಣಿಯವರ “ಬೆಳ್ಳಿಮೋಡ’ ಕಾದಂಬರಿ, ನನಗೆ ಬಹಳ ಇಷ್ಟವಾಗಿತ್ತು. ನನ್ನ ನಿರ್ದೇಶನದ ಮೊದಲ ಕನ್ನಡ ಸಿನಿಮಾಕ್ಕೆ “ಬೆಳ್ಳಿಮೋಡ’ವನ್ನೇ ಆಯ್ಕೆಮಾಡಿಕೊಂಡೆ. ಆರ್.ಎನ್. ಜಯಗೋಪಾಲ್ ಅವರಿಂದ ಸಂಭಾಷಣೆ ಮತ್ತು ಹಾಡುಗಳನ್ನು ಬರೆಸಿದೆ. ಮತ್ತೂಂದು ಮುಖ್ಯ ಗೀತೆಯಾಗಿ ವರಕವಿ ಬೇಂದ್ರೆಯವರ “ಮೂಡಲ ಮನೆಯಾ ಮುತ್ತಿನ ನೀರಿನ…’ ಗೀತೆಯನ್ನು ಬಳಸಿಕೊಳ್ಳಲು ನಿರ್ಧರಿಸಿದ್ದೆ. ವಿಜಯ ಭಾಸ್ಕರ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳ ರೆಕಾರ್ಡಿಂಗ್ ಕೂಡ ಮುಗಿದಿತ್ತು. ಮುಖ್ಯವಾಗಿ, “ಮೂಡಲ ಮನೆಯಾ ಮುತ್ತಿನ ನೀರಿನ…’ ಗೀತೆಯನ್ನು ಅದರ ಭಾವನೆಗೆ ತಕ್ಕಹಾಗೆ ಮೂಡಿಬರುವಂತೆ ಚಿತ್ರೀಕರಿಸಬೇಕಿತ್ತು.
ಅದಕ್ಕಾಗಿ, ಚಿತ್ರೀಕರಣದ ತಾಣವನ್ನು ಆಯ್ಕೆಮಾಡುವ ಸಲುವಾಗಿ ಚಿಕ್ಕಮಗಳೂರಿಗೆ ಹೋದೆ. ಅಲ್ಲಿ ದಿನಕ್ಕೆ 2 ರೂ. ಬಾಡಿಗೆಗೆ ಸಿಗುತ್ತಿದ್ದ ಚಿಕ್ಕ ಹೋಟೆಲ್‌ನಲ್ಲಿ ಉಳಿದುಕೊಂಡೆ. “ಬೆಳ್ಳಿಮೋಡ’ ಕಾದಂಬರಿಯಲ್ಲಿ, ಬಾಬಾಬುಡನ್‌ಗಿರಿಯ ಆಸುಪಾಸಿನ ಪ್ರಕೃತಿ ಸೌಂದರ್ಯದ ದಟ್ಟ ವಿವರಣೆಗಳಿದ್ದವು. ಅದನ್ನೆಲ್ಲ ನೋಡುವ ಆಸೆಯಿಂದ, ಬೆಳಗ್ಗೆ ಎದ್ದವನೇ ಬಾಡಿಗೆ ಸೈಕಲ್ ತಗೊಂಡು ಹೊರಟೆ. ಸೈಕಲ್ ತುಳಿಯುತ್ತಾ ಬಾಬಾಬುಡನ್‌ಗಿರಿ ಬೆಟ್ಟ ಏರುತ್ತಿದ್ದಂತೆ, ನಾನು ತೆಗೆಯುವ ಮೊದಲ ಹಾಡಿನ ಮೊದಲ ಶಾಟ್ ಚೆನ್ನಾಗಿ ಮೂಡಿಬರಬೇಕೆಂದರೆ, ಅಲ್ಲಿ ಒಂದು ಮರ ಇರಬೇಕು ಅಂತನ್ನಿಸಿತ್ತು.
ನನ್ನ ಕಲ್ಪನೆಯ ಮರ ಹುಡುಕಲು ಕಾಡಿಗೆ ನುಗ್ಗಿದೆ. ಕಾಲು ದಾರಿ ಇರುವ ಕಡೆ ಸೈಕಲ್‌ನಲ್ಲಿ, ಇಲ್ಲದ ಕಡೆ ಸೈಕಲ್ ನೂಕಿಕೊಂಡು, ಬೆಳಗಿಂದ ಸಂಜೆಯವರೆಗೂ ಮೂರು ದಿನ ಹುಡುಕಿದೆ. ಕಡೆಗೂ ಕಲಾತ್ಮಕವಾದ ಒಂದು ಮರ ಸಿಕ್ಕಿತು. ಅಲ್ಲಿ ಕಲ್ಪನಾರನ್ನು ನಿಲ್ಲಿಸಿ, “ಮೂಡಲ ಮನೆಯಾ…’ ಹಾಡಿನ ಶಾಟ್ ತೆಗೆಯುವ ಬಗ್ಗೆ ನಿರ್ಧರಿಸಿದೆ. ಹೊರಾಂಗಣ ಚಿತ್ರೀಕರಣ ಆರಂಭವಾಗಲು 15 ದಿನ ಬಾಕಿ ಇದ್ದಾಗಲೇ, ಛಾಯಾಗ್ರಾಹಕ ಆರ್.ಎನ್. ಕೃಷ್ಣಪ್ರಸಾದ್ ಅವರನ್ನು ಕರೆದುಕೊಂಡು ಚಿಕ್ಕಮಗಳೂರಿಗೆ ಬಂದು, ಅಲ್ಲಿನ ವಸಂತ್ ವಿಹಾರ್ ಲಾಡ್ಜ್ನಲ್ಲಿ ಉಳಿಯಲು ವ್ಯವಸ್ಥೆ ಮಾಡಿದ್ದೆ.
ನಂತರ, 15 ದಿನಗಳ ಕಾಲವೂ ಆ ಸರಹದ್ದಿನ ಬೆಟ್ಟಗುಡ್ಡಗಳ ಮೇಲೆಲ್ಲಾ ಸುತ್ತಾಡಿ, ಯಾವ ಯಾವ ಸ್ಥಳಗಳಲ್ಲಿ ಯಾವ ಯಾವ ದೃಶ್ಯ ತೆಗೆಯಬೇಕೆಂದು ನಿರ್ಧರಿಸಿದೆವು. ವಾಟೀಕಲ್ ಮತ್ತು ತಿಪ್ಪನಹಳ್ಳಿ ಎಸ್ಟೇಟ್‌ನಲ್ಲಿ ಹೊರಾಂಗಣ ಚಿತ್ರೀಕರಣ ಆರಂಭವಾಯಿತು. ನಾನು ಕಷ್ಟಪಟ್ಟು ಮತ್ತು ಇಷ್ಟಪಟ್ಟು ಆಯ್ಕೆಮಾಡಿದ್ದ ಸ್ಥಳದಲ್ಲಿಯೇ, “ಮೂಡಲಮನೆಯ ಮುತ್ತಿನ ನೀರಿನ…’ ಹಾಡನ್ನು, ಸೂರ್ಯ ಉದಯಿಸುವ, ಸುಂದರ ಬೆಳಗಿನಲ್ಲಿ ಚಿತ್ರೀಕರಿಸಿಕೊಂಡೆವು.
ಬೇಂದ್ರೆಯವರ ಬೆಳಗು ಪದ್ಯಕ್ಕೆ ದೃಶ್ಯದ ಜೀವ ನೀಡಿದ ಕತೆಯನ್ನು ತಮ್ಮ ಆಪ್ತಮಿತ್ರ ಡಿ.ಬಿ. ಬಸವೇಗೌಡರೊಂದಿಗೆ ಪುಟ್ಟಣ್ಣ ಹೀಗೆ ಹೇಳಿಕೊಂಡಿದ್ದರು. ಚಿತ್ರ ಬಿಡುಗಡೆಯಾದಾಗ, ಆ ಹಾಡಿನ ಚಿತ್ರೀಕರಣ, ರಾಗ ಸಂಯೋಜನೆಯ ಮಾಧುರ್ಯ, ಸೂರ್ಯೋದಯದ ಮೋಹಕ ದೃಶ್ಯ ಕಂಡು ಪ್ರೇಕ್ಷಕರು ಹರ್ಷದಿಂದ ಪುಳಕಿತರಾದರು. “ಮೂಡಲ ಮನೆಯ… ಹಾಡಿನಿಂದ ನನ್ನ ಜೀವನದಲ್ಲೂ ಒಂದು ಹೊಸ ಬೆಳಕು ಪ್ರಾರಂಭವಾಯಿತು. ಇಂಥದೊಂದು ಅಮರಗೀತೆ ನೀಡಿದ್ದಕ್ಕೆ ಬೇಂದ್ರೆ ಎಂಬ ಗಾರುಡಿಗನಿಗೆ ಋಣಿಯಾಗಿದ್ದೇನೆ’ ಎಂದಿದ್ದರು, ಪುಟ್ಟಣ್ಣ.