ಮೂಡಬಿದಿರೆ: ವಿ.ವಿ. ಮಟ್ಟದ ಕ್ರೀಡಾಕೂಟದಲ್ಲಿ ಮೂರು ವರ್ಷ ಗಳ ಹಿಂದೆ ವಿ.ವಿ. ಕಾಲೇಜುಗಳಿಂದ ಕೇವಲ 150- 200 ಮಂದಿ ಕ್ರೀಡಾಳುಗಳು ಭಾಗವಹಿಸಿರುವುದು ನಿರಾಸೆ ಉಂಟು ಮಾಡಿತ್ತು. ಈ ಬಾರಿ 64 ಕಾಲೇಜುಗಳಿಂದ ಸುಮಾರು 700 ಕ್ರೀಡಾಳುಗಳು ಪಾಲ್ಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ಮಂಗಳೂರು ವಿ. ವಿ. ಉಪಕುಲಪತಿ ಡಾ| ಕಿಶೋರ್ ಕುಮಾರ್ ಸಿ.ಕೆ. ಹೇಳಿದರು.
ಮಂಗಳೂರು ವಿ.ವಿ. ಮತ್ತು ಆಳ್ವಾಸ್ ಕಾಲೇಜಿನ ಸಂಯು ಕ್ತ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ಮಂಗಳವಾರ ಆರಂಭವಾದ ಮಂಗಳೂರು ವಿ.ವಿ. ಮಟ್ಟದ 38ನೇ ಅಂತರ್ ಕಾಲೇಜು ಮತ್ತು ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಆ್ಯತ್ಲೆಟಿಕ್ಸ್ ಕೂಟಗಳ ಉದ್ಘಾಟನ ಸಮಾರಂಭದಲ್ಲಿ ಅವರು ಕೆ. ಅಭಯಚಂದ್ರ ಜೈನ್ ಅವರೊಂದಿಗೆ ಧ್ವಜಾರೋಹಣ ನಡೆಸಿ, ಕ್ರೀಡಾಪಟುಗಳ ಆಕರ್ಷಕ ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು. ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ, ಪ್ರತಿನಿಧಿಸುತ್ತಿರುವ ಕ್ರೀಡಾಳುಗಳು, ವಿ.ವಿ.ಯ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುತ್ತಿದ್ದಾರೆ ಎಂದರು.
ಕ್ರೀಡಾಕೂಟವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮಂ.ವಿ.ವಿ. ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ವೇಣುಗೋಪಾಲ ನೋಂಡ, ಜಿಲ್ಲಾ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಕ್ರೀಡಾಕೂಟದ ಸಂಯೋಜಕ, ಮಂಗಳೂರು ಸೈಂಟ್ ಆಗ್ನೆಸ್ ಸ್ಪೆಶಲ್ ಸ್ಕೂಲ್‌ನ ದೈ.ಶಿ. ನಿರ್ದೇಶಕ ನಾರಾಯಣ ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಳು, ಆಳ್ವಾಸ್‌ನ ವಿದ್ಯಾರ್ಥಿನಿ ಅಭಿನಯ ಶೆಟ್ಟಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಆಳ್ವಾಸ್‌ನ ರಾಷ್ಟ್ರೀಯ/ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಳುಗಳಾದ ಸುಪ್ರಿಯಾ, ಚೈತ್ರಾ, ಅನಿಲ್, ಪ್ರಜ್ವಲ್ ಮಂದಣ್ಣ ಅವರು ತಂದ ಕ್ರೀಡಾಜ್ಯೋತಿಯನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಸ್ವೀಕರಿಸಿ ಮತ್ತೆ ಕ್ರೀಡಾಳುಗಳಿಗೆ ಹಸ್ತಾಂತರಿಸಿದ ಬಳಿಕ ಅದರ ಮೂಲಕ ಅಗ್ನಿಕುಂಡವನ್ನು ಪ್ರಜ್ವಲಿಸಲಾಯಿತು. ವಿ.ವಿ. ಕೂಟಗಳಲ್ಲಿ ಹೊಸ ದಾಖಲೆ ಮಾಡುವ ಕ್ರೀಡಾಳುಗಳಿಗೆ 2,000 ರೂ. ನಗದು ನೀಡುವ ಆಳ್ವಾಸ್ ಪರಂಪರೆಯಂತೆ ಕೂಟದ ಪ್ರಾರಂಭದಲ್ಲೇ ಹೊಸ ದಾಖಲೆ ಮಾಡಿರುವ ಆಳ್ವಾಸ್‌ನ ಮನೋಜ್ (20 ಕಿ.ಮೀ. ನಡಿಗೆ) ಮತ್ತು ಭಗತ್ ಶೀತಲ್ (3,000 ಮೀ. ಸ್ಟೀಪಲ್ ಚೇಸ್) ಅವರಿಗೆ ತಲಾ 2,000 ರೂ. ನೀಡಲಾಯಿತು. ಅಜ್ಜರಕಾಡು ಸರಕಾರಿ ಪ್ರ.ದ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನ.24 ರಿಂದ ಅಖಿಲ ಭಾರತ ಆ್ಯಥ್ಲೆಟಿಕ್ಸ್ ಕೂಟ
ಕ್ರೀಡಾ ಇಲಾಖೆಯ ಮೂಲಕ ಸಿಂಥೆಟಿಕ್ ಟ್ರ್ಯಾಕ್ ಹೊದ್ದುಕೊಂಡ ಸ್ವರಾಜ್ಯ ಮೈದಾನದ ಕ್ರೀಡಾಂಗಣದಲ್ಲಿ ನ. 24ರಿಂದ 28ರ ವರೆಗೆ ಅಖಿಲ ಭಾರತ ಆ್ಯತ್ಲೆಟಿಕ್ಸ್ ಕೂಟಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಈ ಮೈದಾನ ದಲ್ಲಿ ಹಲವು ದಾಖಲೆಗಳಾಗಿದ್ದು, ಈ ಕೂಟದಲ್ಲೂ, ಮುಂದಿನ ಕೂಟಗಳಲ್ಲೂ ಹೊಸ ಹೊಸ ದಾಖಲೆಗಳು ಮೂಡಿ ಬರುವಂತಾಗಲಿ ಎಂದು ಡಾ| ಕಿಶೋರ್ ಕುಮಾರ್ ಶುಭ ಹಾರೈಸಿದರು.