ಮೂಡುಬಿದಿರೆ: ರವಿವಾರ ಸಂಜೆ ಮೂಡುಬಿದಿರೆ ಹಾಗೂ ಪರಿಸರದಲ್ಲಿ ಎದ್ದ ಸುಂಟರಗಾಳಿಯಿಂದ 25ಕ್ಕೂ ಅಧಿಕ ಮನೆಗಳ ಸೂರು ಹಾರಿಹೋಗಿದ್ದು ಅಡಿಕೆ, ರಬ್ಬರ್ ತೋಟಗಳಿಗೂ ಹಾನಿಯಾಗಿದೆ. ಕಲ್ಲಬೆಟ್ಟು ಪರಿಸರದಲ್ಲಿ ಆಲಿಕಲ್ಲು ಮಳೆಯಾಗಿದೆ.
ಹೊಸಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಮೂಡುಬಿದಿರೆ ಪುರಸಭಾ ಗಡಿಭಾಗ ಕೇಂಪ್ಲಾಜೆಯಲ್ಲಿರುವ ಮೀನಾಕ್ಷಿ ಆಚಾರ್ಯ ಅವರ ಮನೆಯ ಛಾವಣಿ ಸಂಪೂರ್ಣ ಹಾರಿಹೋಗಿವೆ.
ಶ್ರೀ ಮಹಾವೀರ ಕಾಲೇಜು ಬಳಿ ಪಿಲಿಪಂಜರದ ಬಳಿ 5 ಮನೆಗಳಿಗೆ ಹಾನಿಯಾಗಿದೆ. ಕಲ್ಲಬೆಟ್ಟು ಬಂಗಾರಪದವು ಪರಿಸರದಲ್ಲಿ 9 ಮನೆಗಳಿಗೆ ಹಾನಿಯಾಗಿದೆ. ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್ , ಸ್ಫೂರ್ತಿ ವಿಶೇಷ ಶಾಲೆಯ ಪ್ರವರ್ತಕ ಪ್ರಕಾಶ್ ಶೆಟ್ಟಿಗಾರ್ ಬಳಗದವರು ಸ್ಥಳೀಯರ ಸಹಕಾರದೊಂದಿಗೆ ಮನೆಗಳಿಗೆ ಶೀಟ್ ಹೊದೆಸಲು ಸಹಕರಿಸಿದ್ದಾರೆ.
ಬಗ್ಗಜಾಲು ಪ್ರದೇಶದಲ್ಲಿ 5 ಮನೆಗಳ ಸೂರು ಗಾಳಿಗೆ ಹಾರಿಹೋಗಿವೆ. ಹುಡ್ಕೊà ಕಾಲನಿಯಲ್ಲಿ ಶಾಂತಾ ಅವರ ಮನೆಯ ಮುಕ್ಕಾಲಂಶ ಸಿಮೆಂಟ್ ಶೀಟ್ ಎಲ್ಲೋ ಹೋಗಿ ಬಿದ್ದಿವೆ. ಹತ್ತಿರದ ಶಿವಪ್ಪ ಅವರ ಮನೆಯ ಶೀಟ್‌ಗಳೂ ಕೆಳಗೆ ಬಿದ್ದಿವೆ. ವೇಣುಗೋಪಾಲ ಕಾಲನಿಯಲ್ಲಿ ಮುಖ್ಯ ರಸ್ತೆಗೆ ಬಿದ್ದ ಮರವನ್ನು ಸಾರ್ವಜನಿಕರು ತೆರವುಗೊಳಿಸಿದ್ದಾರೆ.
ಕಟೀಲೇಶ್ವರೀ ಕನ್‌ಸ್ಟ್ರಕ್ಷನ್ ಆವರಣದ ಹಲಸಿನ ಮರ ಮನೆಯ ಎದುರಿನ ಚಪ್ಪರದ ಮೇಲೆ ಬಿದ್ದಿದೆ. ಮರಿಯಾಡಿಯ ಹಲವು ಮನೆಗಳಿಗೆ ಹಾನಿಯಾಗಿದೆ. ಸುರೇಂದ್ರನ್ ಅವರ ಅಡಿಕೆ, ರಬ್ಬರ್ ತೋಟ, ಬಿರಾವುನಲ್ಲಿ ಅಡಿಕೆ ಮರಗಳು ನೆಲಕಚ್ಚಿವೆ. ಮೂಡುಬಿದಿರೆ ಪೇಟೆಯಲ್ಲಿ ಸ್ವರಾಜ್ಯ ಮೈದಾನದ ತಗಡಿನ ತಾತ್ಕಾಲಿಕ ಚಪ್ಪರ ಹಾರಿ ಹೋಗಿದೆ. ತರಕಾರಿ ಮಾರುಕಟ್ಟೆಗೂ ಹಾನಿಯಾಟಾಗಿದೆ.
ಮಾಜಿ ಸಚಿವ ಕೆ. ಅಭಯಚಂದ್ರ, ತಹಶೀಲ್ದಾರ್ ಅನಿತಾ ಲಕ್ಷ್ಮೀ, ಪುರಸಭಾ ಸದಸ್ಯರು ಸುಂಟರಗಾಳಿ ಪೀಡಿತ ವಿವಿಧೆಡೆಗಳಿಗೆ ಭೇಟಿದ್ದಾರೆ.