ಮೂಡುಬಿದಿರೆ: ಮುರುಡೇಶ್ವರ ಠಾಣಾ ವ್ಯಾಪ್ತಿ ಮತ್ತು ಮೂಡುಬಿದಿರೆಯಿಂದ ಬೈಕ್ ಕಳವು ಮಾಡಿರುವ ಅಂತರ್ ಜಿಲ್ಲಾ ಚೋರರನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದ ಪೊಲೀಸರ ತಂಡವು ಶುಕ್ರವಾರ ಬಂಧಿಸಿದೆ. ಆರೋಪಿಗಳಿಂದ ಒಟ್ಟು 1.80 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಸ್ವಾ ಧೀನಪಡಿಸಿಕೊಳ್ಳಲಾಗಿದೆ.
ತುಮಕೂರು ಜಿಲ್ಲೆಯ ಆಕಾಶ್ ಕಲ್ಕಿ ಹಾಗೂ ವೀರೇಂದ್ರ ಬಂಧಿತರು.
ಮಹಾವೀರ ಕಾಲೇಜಿನ ಎದುರು ವಾಹನ ತಪಾಸಣೆ ನಡೆಸುತ್ತಿರುವ ಸಂದರ್ಭ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಇಬ್ಬರನ್ನು ನಿಲ್ಲಿಸಲು ಹೇಳಿದಾಗ ನಿಲ್ಲಿಸದೇ ಮರಳಿ ಹೋಗುವ ಯತ್ನದ ವೇಳೆ ಪೊಲೀಸ್ ನಿರೀಕ್ಷಕ ಸಂದೇಶ್ ಹಾಗೂ ಸಿಬಂದಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆಗ ಮುರುಡೇಶ್ವರ ಮತ್ತು ಜೈನ್ ಪಿ.ಯು. ಕಾಲೇಜಿನ ಎದುರು ನಿಲ್ಲಿಸಿದ ಮೋಟಾರು ಬೈಕ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂತು. ಈ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಇವರ ಮಾರ್ಗದರ್ಶನದಂತೆ, ಡಿಸಿಪಿಗಳಾದ ಸಿದ್ದಾರ್ಥ ಗೊಯಲ್, ದಿನೇಶ್ ಕುಮಾರ್, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ ಅವರ ನಿರ್ದೇಶನದಂತೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿದ್ದರು.