ಮೂಡುಬಿದಿರೆ: ಜೈನ ಕಾಶಿ ಮೂಡುಬಿದಿರೆಯಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಯವರ ಹಿರಿತನ, ಉಪಸ್ಥಿತಿಯಲ್ಲಿ ಜೈನರ 24ನೇ ತೀರ್ಥಂಕರ ಭ| ಮಹಾವೀರ ಸ್ವಾಮಿಯವರ 2,550ನೇ ಮೋಕ್ಷ ಕಲ್ಯಾಣ ದಿನವನ್ನು ನ. 13ರಂದು ನಿರ್ವಾಣ ಪೂಜೆಯೊಂದಿಗೆ ಆಚರಿಸಲಾಯಿತು.
18 ಬಸದಿಗಳಲ್ಲಿ ವಿಶೇಷ ಅಭಿಷೇಕ ಪೂಜೆ ಸಲ್ಲಿಸಿ ಶ್ರೀ ಜೈನ ಮಠದಲ್ಲಿ ಸ್ವಾಮೀಜಿಯವರು 24 ತೀರ್ಥಂಕರರ ಹೆಸರು ಹೇಳಿ ಶ್ರಾವಕ ಶ್ರಾವಿಕೆಯರ ಜತೆಗೆ ಸಾಮೂಹಿಕ ಪೂಜೆ ಸಲ್ಲಿಸಿ ಮಹಾ ಅರ್ಘ್ಯ ಎತ್ತಿದರು.
ಮಹಾವೀರ ಸ್ವಾಮಿಯವರಿಗೆ 2,550 ವರ್ಷಗಳ ಹಿಂದೆ ದೀಪಾವಳಿಯಂದು ಸಿದ್ಧತ್ವ ಲಭಿಸಿದ ದಿನದಿಂದ ಮಹಾವೀರ ಶಕೆ ಆರಂಭವಾಗಿದೆ. ಅದೇ ವೀರ ನಿರ್ವಾಣ ಶಕ ವರ್ಷವಾಗಿ ಪ್ರಸಿದ್ಧವಾಗಿದೆ. ಈ ಬಾರಿ ದೀಪಾವಳಿಯಿಂದ ಅಹಿಂಸಾ ವರ್ಷ ಆಚರಿಸಲಾಗುತ್ತಿದೆ. ದೀಪಾವಳಿಯು ಧರ್ಮ ಸಾಮರಸ್ಯ ಶಾಂತಿ, ಸೌಹಾರ್ದ, ರಾಷ್ಟ್ರ ಭಕ್ತಿ, ವಿಶ್ವ ಮೈತ್ರಿ ಪರಸ್ಪರ ವಿನಿಮಯ ಮಾಡುವ ಹಬ್ಬವಾಗಲಿ, ವಿಶ್ವದಲ್ಲಿ ಶಾಂತಿ ನೆಲೆಯಾಗಲಿ ಎಂದು ಭಟ್ಟಾರಕರು ಸಂದೇಶವಿತ್ತರು.
ಬಸದಿಗಳ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುಧೇಶ್ ಕುಮಾರ್, ದಿನೇಶ್ ಕುಮಾರ್ ಪಟ್ಟದ ಪುರೋಹಿತ ಪಾರ್ಶ್ವನಾಥ ಇಂದ್ರ ಮೊದಲಾದವರಿದ್ದರು.