ಮೂಡುಬಿದಿರೆ: ಮೂಡುಬಿದಿರೆ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ಕಂಬಳ ಕರೆಗೆ ಮುಖಮಾಡಿಕೊಂಡು 60 ಲಕ್ಷ ರೂ. ವೆಚ್ಚದಲ್ಲಿ ತುಳುನಾಡ ಗುತ್ತಿನ ಮನೆ ಶೈಲಿಯ ಶಾಶ್ವತ ವೇದಿಕೆ ನಿರ್ಮಾಣವಾಗಿದೆ.
ಡಿ. 11ರಂದು 19ನೇ ವರ್ಷದ “ಕೋಟಿ ಚೆನ್ನಯ ಹೊನಲು ಬೆಳಕಿನ ಕಂಬಳ’ ಇಲ್ಲಿ ಸಂಪನ್ನಗೊಳ್ಳಲಿದೆ. ನೂತನ ವೇದಿಕೆ ಅನಾವರಣ ಹಾಗೂ
“ಕಂಬಳ’ ಬಹುಭಾಷಾ ಸಿನೆಮಾದ ಚಿತ್ರೀಕರಣ ಈ ಬಾರಿಯ ವಿಶೇಷ ಎಂದು ಕಂಬಳ ಸಮಿತಿ ಅಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶನಿವಾರ ಬೆಳಗ್ಗೆ 7ಕ್ಕೆ ಕ್ರೈಸ್ತ ಧರ್ಮಗುರು ವಂ| ವಾಲ್ಟರ್ ಡಿ’ಸೋಜಾ, ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್, ಪುತ್ತಿಗೆ ನೂರಾನಿ ಮಸೀದಿಯ ಧರ್ಮಗುರು ಝೀಯಾವುಲ್ಲ ಹಾಗೂ ಕುಂಟಾಡಿ ಸು ಧೀರ್ ಹೆಗ್ಡೆ ಅವರು ಕಂಬಳ ಉತ್ಸವವನ್ನು ಉದ್ಘಾಟಿಸುವರು. 8 ಗಂಟೆಗೆ “ರಾಣಿ ಅಬ್ಬಕ್ಕ ಪ್ರತಿಮೆ’ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಲಾರ್ಪಣೆ ಮಾಡುವರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸಮ್ಮಾನಿಸಲಾಗುವುದು.
ಸಂಜೆ 5ಕ್ಕೆ ಕಂಬಳ ಸಭಾ ಕಾರ್ಯ ಕ್ರಮವನ್ನು ಸಮಿತಿ ಗೌರವಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು. ಸಚಿವರಾದ ಭೈರತಿ ಬಸವರಾಜ್, ಎಸ್. ಅಂಗಾರ, ಸಿ.ಟಿ. ರವಿ, ವಿ. ಸುನಿಲ್ ಕುಮಾರ್, ವಿವಿಧ ಶಾಸಕರು ಮುಖ್ಯ ಅತಿಥಿಗಳಾಗಿರುವರು. ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೊ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಸುರೇಶ್ ಕಟೀಲು ಅವರನ್ನು ಸಮ್ಮಾನಿಸಲಾಗುವುದು.
225 ಜೋಡಿ ಕೋಣಗಳು ಭಾಗ:
ವಹಿಸುವ ನಿರೀಕ್ಷೆ ಇದೆ ಎಂದು ಉಮಾನಾಥ ಕೋಟ್ಯಾನ್ ತಿಳಿಸಿದರು. ಕಂಬಳ ಸಮಿತಿಯ ಕೋಶಾಧಿ ಕಾರಿ ಭಾಸ್ಕರ್ ಎಸ್. ಕೋಟ್ಯಾನ್, ಕಾರ್ಯದರ್ಶಿಗಳಾದ ಕೆ.ಪಿ. ಸುಚರಿತ ಶೆಟ್ಟಿ, ರಂಜಿತ್ ಪೂಜಾರಿ, ಉಪಾಧ್ಯಕ್ಷ ಸುರೇಶ್ ಪೂಜಾರಿ, ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಕಂಬಳ ಪೂರ್ವಸಿದ್ಧತೆ ಸಭೆ ನಡೆದಿತ್ತು.