Advertisement

ಮೂಡಬೆಟ್ಟು : ಆಲಂದ ಕೆರೆಯ ಸಂರಕ್ಷಣೆ, ನಿರ್ಮಾಣಗೊಳ್ಳ ಬೇಕಿದೆ ಆವರಣಗೋಡೆ

08:42 PM May 19, 2019 | Sriram |

ಕಟಪಾಡಿ: ಕರ್ನಾಟಕ ಸರಕಾರದ ಕೆರೆಗಳ ಪುನರುಜ್ಜೀವನ ಯೋಜನೆಯನ್ವಯ ಕಟಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೂಡಬೆಟ್ಟು ಗ್ರಾಮದಲ್ಲಿರುವ ಆಲಂದ ಕೆರೆಯು ನವೀಕರಣಗೊಂಡಿದ್ದು, ಆವರಣೆ ಗೋಡೆ ಇಲ್ಲದೆ ಅಸುರಕ್ಷತೆ ಕಾಡುತ್ತಿದೆ.

Advertisement

ಅಂದಾಜು 20 ಲಕ್ಷ ರೂ ಅನುದಾನದಲ್ಲಿ ಪುನರು ಜ್ಜೀವನಗೊಂಡಿರುವ
ಮೂಡಬೆಟ್ಟು ಬ್ರಹ್ಮಸ್ಥಾನದ ಬಳಿಯ ಆಲಂದಕೆರೆಯನ್ನು 2013ರ ಜೂನ್‌ 23ರಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಅವರು ಉದ್ಘಾಟಿಸಿದ್ದರು.

ಸುಮಾರು ಆರು ವರ್ಷಗಳೇ ಉರುಳಿದರೂ ಇದುವರೆಗೂ ಈ ಕೆರೆಯು ಆವರಣ ಗೋಡೆಯನ್ನು ಕಂಡಿಲ್ಲ. ಅಥವಾ ಯಾವುದೇ ಪ್ರವೇಶ ನಿರ್ಬಂಧದ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಆವರಣ ಗೋಡೆಯೇ ಇಲ್ಲದ ಈ ಕೆರೆಯು ಭೂಮಿಯ ಮಟ್ಟದಲ್ಲಿಯೇ ಕಂಡು ಬರುತ್ತಿದ್ದು, ಮಳೆಗಾಲದಲ್ಲಿ ಮಳೆಯ ನೀರು ರಭಸದಿಂದ ಹರಿದು ಬಂದು ನೇರವಾಗಿ ಈ ಕೆರೆಯನ್ನು ಸೇರುವ ಜೊತೆಗೆ ಕೆಸರು, ಮಣ್ಣು, ಕಸ-ತ್ಯಾಜ್ಯಗಳೂ ಕೆರೆಯನ್ನು ಆವರಿಸುತ್ತದೆ. ಆ ಮೂಲಕ ಈಗಾಗಲೇ ನವೀಕರಣಕ್ಕಾಗಿ ವ್ಯಯಿಸಿದ ಸರಕಾರದ 20 ಲಕ್ಷ ರೂ. ನಿಷ್ಪÅಯೋಜಕವಾಗುವ ಸಾಧ್ಯತೆ ಹೆಚ್ಚಿದೆ ಎಂಬ ಕಳವಳ ವ್ಯಕ್ತವಾಗುತ್ತಿದೆ.

ವಿರಳ ಜನಸಂಚಾರ, ಕೆಲವೇ ಮನೆಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಇರುವ ವಿಶಾಲವಾದ ಕೆರೆಯು ಇದಾಗಿದ್ದು, ಯಾವುದೇ ರೀತಿಯಾದ ಪ್ರವೇಶದ ನಿರ್ಬಂಧ ಇಲ್ಲದೇ ಇದ್ದುದರಿಂದ, ಎಚ್ಚರಿಕೆಯ ಸೂಚನಾ ಫಲಕಗಳೂ ಅಳವಡಿಸದೇ ಇದ್ದು ಯಾರಾದರೂ ನೀರಾಟ-ಮೋಜಿನಾಟಕ್ಕೆ ಇಳಿದಲ್ಲಿ ಅಪಾಯವೂ ಸಂಭವಿಸಬಹುದು ಎಂಬ ಕಳವಳವನ್ನು ನೋಡುಗರು ವ್ಯಕ್ತಪಡಿಸುತ್ತಿದ್ದಾರೆ.

ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಕೆರೆಯು ಹೂಳೂ ತುಂಬುವ ಮುನ್ನವೇ ಹಾಗೂ ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತು ಯಾವುದೇ ಸುರಕ್ಷತೆ ಇಲ್ಲದೆ ಇರುವ ಆಲಂದ ಕೆರೆಯ ಸುರಕ್ಷತೆ, ಸಂರಕ್ಷಣೆಯ ಬಗ್ಗೆ ಸೂಕ್ತ ರೀತಿಯದ್ದಾದ ಕ್ರಮವನ್ನು ಕೈಗೊಳ್ಳಬೇಕಿದೆ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.

Advertisement

ಸುರಕ್ಷತೆ ಕಲ್ಪಿಸುವಲ್ಲಿ ಪ್ರಯತ್ನ
ಮಳೆಯ ನೀರಿನೊಂದಿಗೆ ಮಣ್ಣು ಕೆರೆಯನ್ನು ಸೇರಿ ಮತ್ತೆ ಹೂಳು ತುಂಬುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಆವಶ್ಯಕತೆ ಇದೆ. ಪಂಚಾಯತ್‌ ಸದಸ್ಯರು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸುರಕ್ಷತೆ ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
-ಜೂಲಿಯೆಟ್‌ ವೀರಾ ಡಿ’ಸೋಜಾ, ಅಧ್ಯಕ್ಷೆ , ಕಟಪಾಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next