ಹೊಸದಿಲ್ಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ರಾಜಸ್ಥಾನದ ಇಬ್ಬರು ವ್ಯಕ್ತಿಗಳ ಹತ್ಯೆಗೆ ಸಂಬಂಧಿಸಿದಂತೆ ಮತ್ತು ಜುಲೈನಲ್ಲಿ ನುಹ್ ಜಿಲ್ಲೆಯಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದಲ್ಲಿ ಗೋರಕ್ಷಕ ಮೋನು ಮಾನೇಸರ್ ಎಂಬಾತನನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
ಭರತ್‌ಪುರದ ಪೊಲೀಸ್ ಅಧೀಕ್ಷಕ ಮೃದುಲ್ ಕಚವಾ ಅವರ ಪ್ರಕಾರ, “ಹರಿಯಾಣ ಪೊಲೀಸರು ನಾಸಿರ್ ಮತ್ತು ಜುನೈದ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮೋನು ಮಾನೇಸರ್‌ನನ್ನು ಬಂಧಿಸಿದ್ದಾರೆ. ನಮ್ಮ ಅಧಿಕಾರಿಗಳು ಅವರೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಅವರ ಕಾರ್ಯವಿಧಾನಗಳು ಮುಗಿದ ನಂತರ ನಮ್ಮ ಜಿಲ್ಲಾ ಪೊಲೀಸರು ಆತನನ್ನು ಸುಪರ್ದಿಗೆ ಪಡೆಯುತ್ತಾರೆ” ಎಂದರು.
ಬಜರಂಗ ದಳದೊಂದಿಗೆ ಸಂಬಂಧ ಹೊಂದಿರುವ ಮಾನೇಸರ್, ರಾಜಸ್ಥಾನದ ಇಬ್ಬರು ಮುಸ್ಲಿಮರ ಹತ್ಯೆಯಲ್ಲಿ ಆರೋಪಿಯಾಗಿದ್ದಾರೆ. 25 ವರ್ಷ ವಯಸ್ಸಿನ ನಾಸಿರ್ ಮತ್ತು 35 ವರ್ಷ ವಯಸ್ಸಿನ ಜುನೈದ್ ರನ್ನು ಫೆಬ್ರವರಿ 15 ರಂದು ಗೋರಕ್ಷಕರು ಅಪಹರಿಸಿದ್ದರು. ಮರುದಿನ ಹರಿಯಾಣದ ಲೋಹರುವಿನಲ್ಲಿ ಸುಟ್ಟ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಜಾಮೀನು ಪಡೆಯಬಹುದಾದ ಸೆಕ್ಷನ್ ಗಳ ಅಡಿಯಲ್ಲಿ ಮಂಗಳವಾರ ಮಾನೇಸರ್ ಅವರನ್ನು ಬಂಧಿಸಲಾಗಿದೆ ಎಂದು ಹರಿಯಾಣ ಪೊಲೀಸ್ ಮೂಲಗಳು ಸೂಚಿಸಿವೆ. ಸಂಜೆಯ ವೇಳೆಗೆ ಅವರು ಜಾಮೀನು ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ, ನಂತರ ರಾಜಸ್ಥಾನ ಪೊಲೀಸರು ಡಬಲ್ ಮರ್ಡರ್ ಪ್ರಕರಣಕ್ಕಾಗಿ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುತ್ತಾರೆ.
ಇದಕ್ಕೂ ಮೊದಲು ಫೆಬ್ರವರಿಯಲ್ಲಿ ಮೋನು ಮಾನೇಸರ್ ರಾಜಸ್ಥಾನದಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಮೇನಲ್ಲಿ ರಾಜಸ್ಥಾನ ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯಲ್ಲಿ ಮಾನೇಸರ್ ಹೆಸರಿತ್ತು.