ಇಂಗ್ಲೆಂಡ್ ಕ್ರಿಕೆಟ್ ತಂಡದ ಎಡಗೈ ಸ್ಪಿನ್ನರ್ ಮಾಂಟಿ ಪೆನಸರ್ ಭಾರತದಲ್ಲಿ ರಣಜಿ ಕ್ರಿಕೆಟ್ ಆಡಲಿದ್ದಾರೆ. ಹೌದು, ಭಾರತ ಮೂಲದ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವ ಉದ್ದೇಶದಿಂದ ರಣಜಿಯಲ್ಲಿ ಆಡಲು ಸಿದ್ದತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಪಾಂಡಿಚೇರಿ ತಂಡದ ಪರವಾಗಿ ರಣಜಿ ಕ್ರಿಕೆಟ್ ಆಡಲು ಮಾಂಟಿ ಪೆನಸರ್ ಇಚ್ಚಿಸಿದ್ದಾರೆ. 37ರ ಹರೆಯದ ಸ್ಪಿನ್ನರ್ ಈಗಾಗಲೇ 50 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 167 ವಿಕೆಟ್ ಪಡೆದಿರುವ ಮಾಂಟಿ 2012ರ ಭಾರತ ವಿರುದ್ಧ ಸರಣಿಯಲ್ಲಿ ಅವಿಸ್ಮರಣೀಯ ಪ್ರದರ್ಶನ ನೀಡಿದ್ದರು.
ನಾನು ಇನ್ನೂ ಹಲವು ವರ್ಷ ವೃತ್ತಿಪರ ಕ್ರಿಕೆಟ್ ಆಡಲು ಬಯಸಿದ್ದೇನೆ. ಆದರೆ ನನಗೆ ಯಾವುದೇ ಕೌಂಟಿ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ಹಾಗಾಗಿ ರಣಜಿಯತ್ತ ಕಣ್ಣು ಹಾಯಿಸಿದ್ದೇನೆ. ಪಾಂಡಿಚೇರಿ ತಂಡ ಹೊರಗಿನ ಆಟಗಾರರಿಗೆ ಸ್ಥಾನ ನೀಡುವುದರಿಂದ ನಾನು ಅದರಲ್ಲಿ ಆಡುತ್ತೇನೆ ಎಂದು ಮಾಂಟಿ ಪೆನಸರ್ ಹೇಳಿಕೆ ನೀಡಿದ್ದಾರೆ.
ರಣಜಿ ಕೂಟಕ್ಕೆ ಇತ್ತೀಚಿನ ವರ್ಷಗಳಲ್ಲಿ ಸೇರ್ಪಡೆಯಾದ ಪಾಂಡಿಚೇರಿ ತಂಡ, ರಾಜ್ಯದ ಹೊರಗಿನ ಮೂವರಿಗೆ ಅವಕಾಶ ನೀಡುತ್ತಿದೆ. ಆದರೆ ಪಾಂಡಿಚೇರಿ ತಂಡ ಈ ವರ್ಷದ ಆಟಗಾರರ ಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಿದೆ.
ಕರ್ನಾಟಕದ ಆರ್. ವಿನಯ್ ಕುಮಾರ್, ತಮಿಳುನಾಡಿನ ಅರುಣ್ ಕಾರ್ತಿಕ್ ಮತ್ತು ಹಿಮಾಚಲ ಪ್ರದೇಶದ ಪರಾಸ್ ಡೋಗ್ರ ಅವರನ್ನು ಆಯ್ಕೆ ಮಾಡಿದೆ.
ಪೆನಸರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪಾಂಡಿಚೇರಿ ತಂಡ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.