Advertisement
ಧಾರ್ಮಿಕ, ಸಾಂಸ್ಕೃತಿಕವಾಗಿ ಈ ಮೊಂತಿ ಫೆಸ್ತ್ ಕೆಥೋಲಿಕ್ ಸಮುದಾಯದವರಿಗೆ ವಿಶಿಷ್ಟ ಹಬ್ಬ. ಕಳೆದ ವರ್ಷದಂತೆ ಈ ವರ್ಷವೂ ಕೊರೊನಾ ಸೋಂಕಿನ ಸಂಕಷ್ಟದ ನಡುವೆಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ. ಕೊರೊನಾ ಕಾರಣ ಸಂಭ್ರಮ, ಸಡಗರ ಇಲ್ಲದಿದ್ದರೂ ಸರಳವಾಗಿ ಆಚರಿಸಲು ಕರಾವಳಿಯ ಕೆಥೋಲಿಕರು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಹಬ್ಬಕ್ಕೆ ಪೂರ್ವಭಾವಿಯಾಗಿ ಚರ್ಚ್‌ಗಳಲ್ಲಿ 9 ದಿನಗಳ ನವೇನಾ ಪ್ರಾರ್ಥನೆಯ ಕಾರ್ಯಕ್ರಮ ಆ. 30ರಿಂದ ಪ್ರತಿ ದಿನ ಕೊರೊನಾ ಮಾರ್ಗಸೂಚಿಗಳನ್ವಯ ನಡೆದಿದೆ. ಮಕ್ಕಳು ಹೂವುಗಳ ರಾಶಿಯ ಬದಲು ಒಂದೊಂದು ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ ಅರ್ಚನೆ ಮಾಡಿ ಪ್ರಾರ್ಥಿಸಿದ್ದಾರೆ.
Related Articles
Advertisement
ತರಕಾರಿಗಳ ಬೆಲೆಗಳು ತುಸು ಏರಿಕೆ :
ಈ ವರ್ಷ ಮೊಂತಿ ಹಬ್ಬ ಮತ್ತು ಗಣೇಶೋತ್ಸವ ಒಂದೇ ವಾರದಲ್ಲಿ ಎರಡು ದಿನಗಳ ಆಂತರದಲ್ಲಿ (ಸೆ. 8 ಮತ್ತು ಸೆ. 10) ನಡೆಯುತ್ತಿದ್ದು, ಎರಡೂ ಹಬ್ಬಗಳಲ್ಲಿ ಸ್ಥಳೀಯ ತರಕಾರಿಗಳಿಗೆ ಪ್ರಾಮುಖ್ಯ ಇರುವುದರಿಂದ ಹಾಗೂ ಕೆಲವು ದಿನಗಳಿಂದ ಪ್ರತಿಕೂಲ ಹವಾಮಾನದ ಕಾರಣ ತರಕಾರಿ ಕೃಷಿಯ ಮೇಲೆ ದುಷ್ಪರಿಣಾಮ ಬೀರಿದ್ದರಿಂದ ತರಕಾರಿಗಳ ಬೆಲೆಗಳು ತುಸು ಏರಿಕೆ ಆಗಿವೆ. ಮಂಗಳೂರಿನ ಮಾರುಕಟ್ಟೆಯಲ್ಲಿಯೂ ಆಯ್ದ ಕೆಲವು ತರಕಾರಿ ದರ ಸಹಜವಾಗಿ ಜಾಸ್ತಿಯಾಗಿದೆ.
ಸೆ. 6ರ ದರಗಳು:
ಸ್ಥಳೀಯ ಬೆಂಡೆ 110 ರೂ. (ಸಾಮಾನ್ಯ ದರ 80 ರೂ.), ಹೀರೆಕಾಯಿ 60 ರೂ. (ಸಾಮಾನ್ಯ ದರ 40 ರೂ.), ಮುಳ್ಳು ಸೌತೆ 90 ರೂ. (ಸಾಮಾನ್ಯ ದರ 50/ 60 ರೂ.), ತೊಂಡೆ ಕಾಯಿ 80 ರೂ. (ಸಾಮಾನ್ಯ ದರ 50/60 ರೂ.), ಹರಿವೆ ದಂಟು 35 ರೂ. (ಸಾಮಾನ್ಯ ದರ 25), ಹಾಗಲಕಾಯಿ 70 ರೂ. (ಸಾಮಾನ್ಯ ದರ 50 ರೂ.), ಅಂಬಡೆ 60 ರೂ.
ಮಾರ್ಗಸೂಚಿಯನ್ವಯ ಹಬ್ಬ ಆಚರಣೆ :
ಮೊಂತಿ ಹಬ್ಬ ಆಚರಣೆಗೆ ಸಂಬಂಧಿಸಿ ಮಂಗಳೂರು ಧರ್ಮ ಪ್ರಾಂತದ ಬಿಷಪ್ ವಂ| ಪೀಟರ್ ಪಾವ್É ಸಲ್ಡಾನ್ಹಾ ಅವರು ಸರಕಾರದ ಆದೇಶಗಳನ್ನು ಗಮನದಲ್ಲಿರಿಸಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರಂತೆ ಆಚರಣೆ ನಡೆಯಲಿದೆ.
ಹಬ್ಬದ ಹಿನ್ನೆಲೆ :
ಸೆಪ್ಟಂಬರ್ ಮಳೆಗಾಲದ ಕೊನೆಯ ತಿಂಗಳಾಗಿದ್ದು, ಈ ಸಂದರ್ಭ ಪ್ರಕೃತಿಯ ಎಲ್ಲೆಡೆ ಹಸುರುಮಯ ವಾತಾವರಣ ಕಂಡು ಬರುತ್ತದೆ. ಬೆಳೆಗಳು ಹುಲುಸಾಗಿ ಬೆಳೆದು, ನಳ ನಳಿಸಿ, ಕೊಯ್ಲಿಗೆ ಸಿದ್ಧವಾಗಿರುತ್ತವೆ. ಪ್ರಕೃತಿಯ ಈ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸಲು ವಿವಿಧ ಆಚರಣೆಗಳು ನಡೆಯುತ್ತವೆ. ಕರಾವಳಿಯಲ್ಲಿ ಪ್ರಕೃತಿ ಮಾತೆಯನ್ನು ವಿಶಿಷ್ಟ ರೀತಿಯಲ್ಲಿ ವಂದಿಸಲಾಗುತ್ತದೆ. ಕೊಂಕಣಿ ಕೆಥೋಲಿಕರು ಇದನ್ನು “ಮೊಂತಿ ಫೆಸ್ತ್’ ಆಗಿ ಆಚರಿಸಿ ಸಂಭ್ರಮಿಸುತ್ತಾರೆ. ಅಂದು ಮೇರಿ ಮಾತೆಯ ಜಯಂತಿಯ ಜತೆಗೆ ಕೌಟುಂಬಿಕ ಸಮ್ಮಿಲನ, ಹೊಸ ಬೆಳೆಯ ಹಬ್ಬ ಹಾಗೂ ಹೆಣ್ಣು ಮಕ್ಕಳ ದಿನವನ್ನಾಗಿಯೂ ಆಚರಿಸುವುದು ಸಂಪ್ರದಾಯ.