Advertisement

ಅಂಧೇರಿ:ಮೇರಿ ಕನ್ಯಾಕುಮಾರಿ ಮಾತೆ ಜನ್ಮೋತ್ಸವಕ್ಕೆ ಭರದ ಸಿದ್ಧತೆ

01:38 PM Sep 06, 2017 | Team Udayavani |

ಮುಂಬಯಿ: ವಿಶ್ವದಾದ್ಯಂತ ಸೆ. 8ರಂದು ಆಚರಿಸಲ್ಪಡುವ ಯೇಸು ಕ್ರಿಸ್ತರ ಜನನಿದಾತೆ ಮೇರಿ ಕನ್ಯಾಕುಮಾರಿ ಜನ್ಮೋತ್ಸವ (ಮೊಂತಿ ಹಬ್ಬ-ಕುರಲ್‌ ಪರ್ಬ) ಇದರ ಪೂರ್ವಸಿದ್ಧತೆ ಎಲ್ಲೆಡೆ ಭಕ್ತಿಪೂರ್ವಕವಾಗಿ ನಡೆಯುತ್ತಿದ್ದು, ಆ ಪ್ರಯುಕ್ತ “ಮೊಂತಿ ಹಬ್ಬ’ದ ಮುನ್ನ ಸಾಂಪ್ರದಾಯಿಕವಾಗಿ ಸತತ ಒಂಭತ್ತು  ದಿನಗಳ ಆರಾಧನಾ ಪ್ರಕ್ರಿಯೆ ನಡೆಸುವ ಪದ್ಧತಿ ಇಂದಿಗೂ ಜಾರಿಯಲ್ಲಿದ್ದು,  ಇದರಂತೆ ಅಂಧೇರಿ ಪಶ್ಚಿಮದ ಇರ್ಲಾದ ವೆಲಂಕಣಿ ಮಾತೆಗೆ  ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರಗಿದವು.

Advertisement

“ಮೊಂತಿ ಹಬ್ಬ’ದ  ಪೂರ್ವಸಿದ್ಧತೆಯಾಗಿ ಇರ್ಲಾದಲ್ಲಿ ವಾರ್ಷಿಕವಾಗಿ ನಡೆಸಲ್ಪಡುವ ವಿಶೇಷವಾದ ಆರಾಧನೆ, ದಿವ್ಯ ಸಂಭ್ರಮಿಕ ಪೂಜೆಯನ್ನು ಪುಣ್ಯ ಕ್ಷೇತ್ರದ ಪ್ರಧಾನ ಗುರು ರೆ| ಫಾ| ರವಿ ಮರ್ನೆಣಿ ನೆರವೇರಿಸಿದರು. ಪೂಜೆಯ ಬಳಿಕ ಇಗರ್ಜಿಯ ಆವರಣದಲ್ಲಿ ಅತ್ಯಾಕರ್ಷಕವಾಗಿ ಶೃಂಗರಿಸಲ್ಪಟ್ಟ “ಕನ್ಯಾಕುಮಾರಿ ಮಾತೆಯ’ ಮೂರ್ತಿಯನ್ನು ನಮಿಸಿ ಆಶೀರ್ವಚಿಸಿ ನೆರೆದ ಭಕ್ತರಿಗೆ ಹರಸಿದರು. ನೃತ್ಯ ಸಂಯೋಜಕ ಹಾಗೂ ತರಬೇತುದಾರ ಟಾರೆನ್ಸ್‌ ಲೂಯಿಸ್‌ ಇಂದಿಲ್ಲಿ ವಿಶೇಷವಾಗಿ ಉಪಸ್ಥಿತರಿದ್ದು ಮಾತೆಯ ಪಾದಗಳಿಗೆ ಪುಷ್ಪವೃಷ್ಟಿಗೈದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಧರ್ಮಗುರುಗಳಾದ ರೆ| ಫಾ| ವಿಜಯ್‌ ಪ್ರತಾಪ್‌, ಎಡ್‌ಕಾರ್ಲೊàಸ್‌ ಎಂ. ಕಾಸ್ತೆಲಿನೋ, ಹತ್ತಾರು ಧರ್ಮಗುರು, ಭಗಿನಿಯರು ಉಪಸ್ಥಿತರಿದ್ದರು.

ಬಳಿಕ ವರ್ಷಂಪ್ರತಿಯಂತೆ ಸ್ಥಾನೀಯವಾಗಿ ನಡೆಸಲ್ಪಟ್ಟ ಜನಶ್ರೇಣಿಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.   ಅಲಂಕೃತ ಮಾತೆಯ ಪುತ್ಥಳಿಗೆ ಪುಟಾಣಿಗಳು, ಭಕ್ತರು ಪುಷ್ಪಾರ್ಚನೆಗೈದು ಪ್ರಾರ್ಥನೆ ನೆರವೇರಿಸಿದರು. ಈ ಕ್ಷೇತ್ರಕ್ಕೆ ಜಾತಿಮತ ಧರ್ಮದ ಅಂತರವಿಲ್ಲದೆ ದೇಶ-ವಿದೇಶಗಳಿಂದ ಮಾತೆಯ ಲಕ್ಷಾಂತರ ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಮುಂಜಾನೆ ಐದು ಗಂಟೆಯಿಂದ ರಾತ್ರಿ ಹತ್ತರವರೆಗೆ ನಿರಂತರ ನೊವೆನಾಗಳು ನಡೆಯುತ್ತಿದ್ದು, ಭಕ್ತರ ವಿಶ್ವಾಸದ ತಾಣವಾಗಿ ಪರಿಣಮಿಸಿ ಸರ್ವಧರ್ಮ ಸಮಭಾವದ ಪ್ರತೀಕ ಎಂದೇ ಕರೆಯಲ್ಪಡುತ್ತಿದೆ. ಇಲ್ಲಿ ಮಾತೆಯ ದರ್ಶನಕ್ಕೆ ನಿತ್ಯವೂ ಸರತಿ ಸಾಲಿನಲ್ಲಿ ಸಾಗುತ್ತಿರುವ ಭಕ್ತಾಧಿಗಳ ಸಂಖ್ಯೆ ಲಕ್ಷಕ್ಕೂ ಮಿಕ್ಕುತ್ತಿದೆ. 

   ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next