ನವದೆಹಲಿ/ಲಕ್ನೋ: 2024ರ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹೆಚ್ಚು ಗಮನ ಸೆಳೆದ ವಿಚಾರವಾಗಿತ್ತು. 1980ರಿಂದಲೂ ರಾಮಮಂದಿರ ನಿರ್ಮಾಣ ಬಿಜೆಪಿ ಚುನಾವಣ ಪ್ರಣಾಳಿಕೆಯ ಪ್ರಮುಖ ವಿಷಯವಾಗಿತ್ತು. ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ರಾಮಮಂದಿರ ನಿರ್ಣಾಯಕ ವಿಚಾರವಾಗಲಿದೆ ಎಂಬುದು ಭಾರತೀಯ ಜನತಾ ಪಕ್ಷದ ಬೆಂಬಲಿಗರ ನಿರೀಕ್ಷೆಯಾಗಿತ್ತು.
ಇದನ್ನೂ ಓದಿ:ಮತ್ತೆ ಆಂಧ್ರ ಸಿಎಂ ಅಗಲಿದ್ದಾರೆ ಚಂದ್ರಬಾಬು ನಾಯ್ಡು: ಜೂನ್ 9ಕ್ಕೆ ಪ್ರಮಾಣ ವಚನ ಸ್ವೀಕಾರ
ಆದರೆ ಅಯೋಧ್ಯೆ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಲಲ್ಲು ಸಿಂಗ್ 56,137 ಮತಗಳ ಅಂತರದಿಂದ ಪರಾಜಯಗೊಂಡಿದ್ದಾರೆ.
ಫೈಜಾಬಾದ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅವದೇಶ್ ಪ್ರಸಾದ್ 5,31,009 ಮತಗಳನ್ನು ಪಡೆದು ಜಯಗಳಿಸಿದ್ದು, ಬಿಜೆಪಿಯ ಲಲ್ಲು ಸಿಂಗ್ 4,74,872 ಮತ ಪಡೆದಿದ್ದಾರೆ. ಬಹುಜನ್ ಸಮಾಜ್ ಪಕ್ಷದ ಸಚ್ಚಿದಾನಂದ ಪಾಂಡೆ 44,021 ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಲಲ್ಲು ಸಿಂಗ್ ಬರೋಬ್ಬರಿ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ರಾಮಮಂದಿರ ಉದ್ಘಾಟನೆ ಪಕ್ಷದ ಕೈಹಿಡಿಯಲಿದೆ ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ.