Advertisement

ಅರ್ಹ ಕಲಾವಿದರಿಗೆ ಸರ್ಕಾರದಿಂದ ಮಾಸಾಶನ

04:55 PM Nov 11, 2019 | Suhan S |

ರಾಮನಗರ: ಅರ್ಹ ಜಾನಪದ ಕಲಾವಿದರಿಗೆ ಸರ್ಕಾರದಿಂದ ಮಾಸಾಶನ ದೊರಕಿಸಿಕೊಡುವ ನಿಟ್ಟಿನಲ್ಲಿ ಮಾಸಾಶನ ಕಾರ್ಯಾಗಾರ ಹಮ್ಮಿಕೊಳ್ಳುವುದಾಗಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಹೇಳಿದರು.

Advertisement

ನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ಲೋಕಸಿರಿ-ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರ್ಹ ಕಲಾವಿದರಿಗೆ ಮಾಸಾಶನದ ನೆರವು ಕಲ್ಪಿಸಲು ಪರಿಷತ್ತು ಮುಂದಾಗಲಿದೆ. ಜನಪದ ಕಲಾವಿದರು ಕಲೆಗಳನ್ನು ಪ್ರಶಸ್ತಿಗಾಗಿ ಕಲಿಯಲಿಲ್ಲ. ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೆ ಸಮಾಜದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಂಶಗಳನ್ನು ಒಳಗೊಂಡಿರುವ ಕಲೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕೊಂಡಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟರು.

ಕರ್ನಾಟಕ ಜಾನಪದ ಪರಿಷತ್‌ ವತಿಯಿಂದ ಪ್ರತಿಯೊಂದು ಜಿಲ್ಲೆಯಲ್ಲಿರುವ ಜನಪದ ಕಲಾವಿದರನ್ನು ಕುರಿತು ‘ಜನಪದ ಕಲಾವಿದರ ಕೈಪಿಡಿ’ ತರಲಾಗುತ್ತಿದೆ. ಜತೆಗೆ ‘ಲೋಕೋತ್ಸವ ಪ್ರಶಸ್ತಿ’ ಪಡೆದವರು ಹಾಗೂ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಕುರಿತು ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದರು.

ಲಾವಣಿಗಿಂತ ಕೊಂಚ ಭಿನ್ನ ದುಂದುಮೇ ಪದ: ಲಕ್ಷ್ಮಣ ಗುತ್ತೆದಾರ್‌ ಲೋಕಸಿರಿ-58, ತಿಂಗಳ ಅತಿಥಿಯಾಗಿ ಭಾಗವಹಿಸಿದ್ದ ದುಂದುಮೇ ಪದ ಕಲಾವಿದ ಬಿ.ಲಕ್ಷ್ಮಣ ಗುತ್ತೇದಾರ್‌ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಹಾಡುವ ಜನಪದ ಕಲೆಗಳಲ್ಲಿ ದುಂದುಮೆ ಪದವು ಒಂದು. ಇದು ಒಂದು ಉತ್ಸಾಹದಾಯಕ ವೀರ ಪ್ರಧಾನ ಗೀತೆಯಾಗಿದೆ. ಸುರಪುರದ ನಾಯಕ (ರಾಜ) ನಾಲ್ವಡಿ ವೆಂಕಟಪ್ಪನ ನಾಯಕನ ಕುರಿತಾದ ಗೀತವೆ ದುಂದುಮೆ ಪದ. ಇದು ಲಾವಣಿಗಿಂತ ಸ್ವಲ್ಪ ಭಿನ್ನವಾಗಿದೆ ಎಂದು ತಿಳಿಸಿದರು.

Advertisement

ಬ್ರಿಟಿಷರು ಹಾಗೂ ನಿಜಾಮರು ವಿರುದ್ಧ ಹೋರಾಡಿ ಕೊನೆಗೆ ಬ್ರಿಟಿಷರಿಂದ ಹತನಾಗುವ ರಾಜನ ಕಥೆ. ಬ್ರಿಟಿಷರ ವಿರುದ್ಧ ಹೋರಾಡಿ ಗಾಯಗೊಂಡು ಬಣವೆಯಲ್ಲಿ ಅವಿತು ಕುಳಿತಾಗ ವೆಂಕಟಪ್ಪನ ಕೈಗೆ ಗೂಟ ಹೊಡೆಯುವರು. ಆ ಕೈಯ್ಯನ್ನೇ ಕತ್ತರಿಸಿ ಹಾಕಿ, ಅಲ್ಲಿಂದ ಅವನು ಓಡಿ ಹೋಗುತ್ತಾನೆ. ನಂತರ ಬ್ರಿಟಿಷರ ಗುಂಡಿಗೆ ಹತನಾಗುತ್ತಾನೆ. ಈ ಪದ ಹಾಡಲು ತಾಳ ಮತ್ತು ಹಲಗೆ (ದಪ್ಪು) ಬಳಸುತ್ತೇವೆ ಎಂದು ತಿಳಿಸಿದರು.

ತಮ್ಮ ಕುಂಟುಂಬಕ್ಕೆ “ದುಂದುಮೆ ಪದ’ ವಂಶಪಾರಂಪರ್ಯವಾಗಿ ಬಂದ ಕಲೆಯಾಗಿದೆ. ತಾವು ವಾಸಿಸುವ ಎರಡು ಕಿ.ಮೀ. ಹತ್ತಿರದಲ್ಲೇ ಸುರಪುರವಿದೆ. ಇವರ ವಂಶಸ್ಥರು ನೇರವಾಗಿ ಇದನ್ನು ಕಂಡು ಪದ ಕಟ್ಟಿದ್ದಾರೆ. 56 ಸಾಲುಗಳ ಗೀತೆ ಇದಾಗಿದೆ ಎಂದು ತಿಳಿಸಿದರು. ತಮಗೆ 76 ವರ್ಷ. ಈ ಪದವನ್ನು ವಿಶೇಷವಾಗಿ ಹೋಳಿ ಹುಣ್ಣಿಮೆ ಸಮಯದಲ್ಲಿ ಹಾಡುವುದಾಗಿ, ತಮ್ಮ ಊರಿನಲ್ಲಿ ವೆಂಕಟಪ್ಪ ನಾಯಕನ ವಂಶಸ್ಥರು ಇರುವುದರಿಂದ ಅವರ ಮನೆಗಳಿಗೆ ಹೋಗಿ ಹಾಡುವುದಾಗಿ, ಅವರು ನೀಡಿದ ಗೌರವ ಧನ ತೆಗೆದುಕೊಳ್ಳುತ್ತೇವೆ. ದುಂದುಮೆ ಪದವನ್ನು ಹಾಡಲು 15 ಜನರ ತಂಡವಿದೆ. ಕನಿಷ್ಠ 10 ಜನರು ಇದ್ದರೆ ದುಂದುಮೆ ಪದ ಹಾಡಬಹುದು ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತೆ ಬಿ. ಶುಭಾ ಮಾತನಾಡಿ, ಜನಪದ ಕಲೆಗಳು ಸಾಮಾಜಿಕ ಸಂದೇಶಗಳನ್ನು ಒಳಗೊಂಡಿವೆ. ಕಲೆಗಳ ಪ್ರದರ್ಶನದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಬಹುದು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರನ್ನು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ದುಂದುಮೆ ಪದ ಕಲಾವಿದರಾದ ಪಾರಪ್ಪ

ಗುತ್ತೇದಾರ್‌, ತಿಪ್ಪಣ್ಣ ಗುತ್ತೇದಾರ್‌, ರವಿ ಗುತ್ತೇದಾರ್‌, ಜೋಗಿ ಗುತ್ತೇದಾರ್‌, ಪ್ರವೀಣ್‌ ಗುತ್ತೇದಾರ್‌, ಅಭಿಷೇಕ್‌ ಗುತ್ತೇದಾರ್‌, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ವ್ಯವಸ್ಥಾಪಕ ಟ್ರಸ್ಟಿ ಆದಿತ್ಯನಂಜರಾಜ್‌, ಜಿಲ್ಲಾ ಘಟಕದ ಅಧ್ಯಕ್ಷ ಸು.ತ. ರಾಮೇಗೌಡ, ಜಾನಪದ ಲೋಕದ ಆಡಳಿತಾಧಿಕಾರಿ ಸಿ.ಎನ್‌. ರುದ್ರಪ್ಪ, ಆಡಳಿತಾಧಿಕಾರಿ ಡಾ. ಕುರುವ ಬಸವರಾಜ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next