Advertisement

ಸ್ಮಶಾನ ಭೂಮಿ ಮಂಜೂರಿಗೆ ತಿಂಗಳ ಗಡುವು

10:05 AM Jul 05, 2019 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಸ್ಮಶಾನ ಉದ್ದೇಶಕ್ಕಾಗಿ ಭೂಮಿ ಗುರುತಿಸುವ ಹಾಗೂ ಮಂಜೂರು ಮಾಡುವ ಪ್ರಕ್ರಿಯೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಗಡುವು ನೀಡು ವುದಾಗಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪ.ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿರ್ದಿಷ್ಟ ಜಾಗವಿಲ್ಲ:ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಾಂಗದವರಿಗೆ ಬಹುತೇಕ ಕಡೆ ಸ್ಮಶಾನಕ್ಕೆ ನಿರ್ದಿಷ್ಟ ಜಾಗ ಇಲ್ಲ. ಎಷ್ಟೋ ಕಡೆ ಖಾಸಗಿ ಯವರಿಗೆ ಮನವಿ ಮಾಡಿಕೊಂಡು ಶವಸಂಸ್ಕಾರ ಮಾಡಲಾಗುತ್ತಿದೆ. ಇನ್ನು ಕೆಲವೆಡೆ ಜಾಗದ ಕುರಿತು ಇರುವ ಅನೇಕ ತಕರಾರುಗಳನ್ನು ಇತ್ಯರ್ಥಗೊಳಿಸದೆ ವಿಳಂಬ ಮಾಡಲಾಗುತ್ತಿದೆ. ಕಾಲಮಿತಿಯೊಳಗೆ ಸ್ಮಶಾನ ಮಂಜೂರು ಮಾಡುವ ಪ್ರಕ್ರಿಯೆ ನಡೆ ಯುತ್ತಿಲ್ಲ ಎಂಬ ಪ್ರಸ್ತಾಪ ಸಭೆಯಲ್ಲಿ ಹಾಜರಿದ್ದ ಮುಖಂಡರಿಂದ ವ್ಯಕ್ತವಾಯಿತು.

ತಹಶೀಲ್ದಾರ್‌ಗೆ ಸೂಚನೆ:ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಎಲ್ಲ ತಹಶೀಲ್ದಾರರು ಒಂದು ತಿಂಗ ಳೊಳಗೆ ಸ್ಮಶಾನಕ್ಕಾಗಿ ಜಾಗ ಗುರುತಿಸಿ ಮಂಜೂರು ಪ್ರಕ್ರಿಯೆಗೆ ಮುಂದಾಗಬೇಕು. ಒತ್ತುವರಿ ಇನ್ನಿತರ ಏನೇ ತೊಡಕುಗಳಿದ್ದರೂ ಬಗೆಹರಿಸಿ ಕೂಡಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಾಂಗದವರಿಗೆ ಸ್ಮಶಾನಕ್ಕಾಗಿ ಭೂಮಿ ನೀಡುವ ಕೆಲಸವನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

ಸರಿಯಾಗಿ ನ್ಯಾಯ ಸಿಗುತ್ತಿಲ್ಲ: ದೌರ್ಜನ್ಯ ಪ್ರಕರಣಗಳ ಕುರಿತು ಪ್ರಸ್ತಾಪಿಸಿದ ವೇಳೆ ಅನೇಕ ಮುಖಂಡರು ಮಾತನಾಡಿ, ದೌರ್ಜನ್ಯ ಪ್ರಕರಣಗಳ ಇತ್ಯರ್ಥವನ್ನು ನಿರ್ವಹಿಸುವಲ್ಲಿ ನ್ಯಾಯಯುತ ಪರಿಹಾರ ಸಿಗುತ್ತಿಲ್ಲ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯ ಸಿಕ್ಕಿಲ್ಲ. ಸಂತೆಮರಹಳ್ಳಿ ಜೋಡಿ ಕೊಲೆ ಪ್ರಕರಣವೂ ಸಹ ಈ ಪೈಕಿ ಒಂದಾಗಿದೆ. ಗುಂಡ್ಲುಪೇಟೆಯಲ್ಲಿ ನಡೆದ ಬೆತ್ತಲೆ ಪ್ರಕರಣದಲ್ಲೂ ವಿಳಂಬವಾಗಿ, ಕ್ರಮ ಕೈಗೊಳ್ಳಲಾಯಿತು ಎಂಬುದೂ ಸೇರಿದಂತೆ ಜಿಲ್ಲೆಯಲ್ಲಿ ನಡೆದ ಇತರ ಪ್ರಕರಣಗಳನ್ನು ಸಭೆಯ ಗಮನಕ್ಕೆ ತಂದರು.

Advertisement

ಮರು ತನಿಖೆಗೆ ಕೋರಲಾಗುತ್ತದೆ: ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ಸಂತೆಮರಹಳ್ಳಿ ಜೋಡಿ ಕೊಲೆ ಪ್ರಕರಣ ಸಂಬಂಧ ಮರು ತನಿಖೆಗೆ ಕೋರಲಾಗುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆ ನಡೆಸಲಾಗುವುದು. ದಲಿತರ ಮೇಲಿನ ಯಾವುದೇ ದೌರ್ಜನ್ಯ ಪ್ರಕರಣಗಳೂ ವರದಿಯಾದಾಗ ಕೂಡಲೇ ಅಗತ್ಯ ಕ್ರಮಕ್ಕೆ ಸ್ಪಂದಿಸಲಾಗುವುದು ಎಂದರು.

ತಪ್ಪಿತಸ್ಥರ ವಿರುದ್ಧ ಕ್ರಮ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್‌ ಮಾತನಾಡಿ, ಗುಂಡ್ಲುಪೇಟೆ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಕಾರ್ಯ ಸಂಪೂರ್ಣವಾಗಿ ಮುಗಿಸದೇ ಯಾವುದೇ ವಿವರಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಸಾಲ ಸೌಲಭ್ಯ ಸಿಗುತ್ತಿಲ್ಲ: ಬ್ಯಾಂಕುಗಳಲ್ಲಿ ವಿವಿಧ ಯೋಜನೆಗಳಡಿ ಆಯ್ಕೆಯಾದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಫ‌ಲಾನುಭವಿಗಳಿಗೆ ಸಾಲ ಸೌಲಭ್ಯ ಸಿಗುತ್ತಿಲ್ಲ. ಹತ್ತಾರು ತಿಂಗಳು ಅಲೆದಾಡಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಆರ್ಥಿಕ ಸೌಲಭ್ಯಕ್ಕಾಗಿ ಬ್ಯಾಂಕುಗಳಿಗೆ ಕಳುಹಿಸಲಾದ ಅರ್ಜಿಗಳು ಏನಾಗಿವೆ? ಫ‌ಲಾನು ಭವಿಗೆ ಸೌಲಭ್ಯ ಲಭಿಸಿದೆಯೇ ಎಂಬ ಬಗ್ಗೆ ನೋಡು ತ್ತಿಲ್ಲವೆಂದು ಮುಖಂಡರು ಗಮನ ಸೆಳೆದರು.

ಆದ್ಯತೆ ಮೇರೆಗೆ ಸಾಲಸೌಲಭ್ಯ ನೀಡಿ: ಜಿಲ್ಲಾಧಿ ಕಾರಿಯವರು ಮಾತನಾಡಿ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಜನತೆಗೆ ಆದ್ಯತೆ ಮೇರೆಗೆ ಸಾಲಸೌಲಭ್ಯ ನೀಡಬೇಕು. ಸಕಾರಣವಿಲ್ಲದೆ ಸಾಲ ನೀಡಲು ಸತಾಯಿಸುವುದು, ನಿರಾಕರಿಸುವುದು ಸರಿಯಲ್ಲ. ಸಾಲ ನೀಡಲು ಹಿಂದೇಟು ಹಾಕಿದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕಾಯಿದೆ ವ್ಯಾಪ್ತಿಗೆ ತರಬೇಕಾಗುತ್ತದೆ ಎಂಬುದನ್ನು ಬ್ಯಾಂಕ್‌ ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಡಬೇಕು ಎಂದರು.

ಸುದೀರ್ಘ‌ವಾಗಿ ಚರ್ಚೆ: ಎಚ್.ಡಿ. ಫಾರೆಸ್ಟ್‌ ಪ್ರಕರಣ, ಜೀತ ವಿಮುಕ್ತರಿಗೆ ಸೌಲಭ್ಯ, ಸಮಾಜ ಕಲ್ಯಾಣ ಇಲಾಖೆಯಲ್ಲಿ ನೀಡಲಾಗುತ್ತಿರುವ ಟೆಂಡರ್‌, ಪರಿಶಿಷ್ಟ ವರ್ಗದ ಜನತೆಯ ಭೂಮಿ, ನಿಗಮಗಳಿಂದ ನೀಡಲಾಗುತ್ತಿರುವ ಸೌಲಭ್ಯಗಳು, ಸುಳ್ವಾಡಿ ಪ್ರಕರಣ, ಆರೋಗ್ಯ, ತೋಟಗಾರಿಕೆ, ಕೃಷಿ ಇಲಾಖೆ, ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘ‌ವಾಗಿ ಚರ್ಚೆ ನಡೆಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್‌, ಉಪವಿಭಾಗಾಧಿಕಾರಿ ನಿಖೀತಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಕಾಶ್‌, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಕೃಷ್ಣಪ್ಪ, ನಗರಸಭೆ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಮುಖಂಡರಾದ ಕೆ.ಎಂ. ನಾಗ ರಾಜು, ಸಿ.ಎಂ. ಕೃಷ್ಣಮೂರ್ತಿ, ಸಿ.ಕೆ. ಮಂಜುನಾಥ್‌, ಅರಕಲವಾಡಿ ನಾಗೇಂದ್ರ, ಸುರೇಶ್‌ ನಾಯಕ, ಪರ್ವತರಾಜು, ಸಂಘಸೇನ, ಚಾ.ಗು. ನಾಗರಾಜು, ಸುಂದರ್‌, ಡಾ.ಮಾದೇಗೌಡ, ದೊಡ್ಡಿಂದುವಾಡಿ ಸಿದ್ಧರಾಜು, , ಶೇಖರ್‌ ಬುದ್ಧ, ಮಹದೇವಯ್ಯ, ಶಿವಣ್ಣ, ಕಂದಹಳ್ಳಿ ನಾರಾಯಣ, ಸಿ.ಎಂ. ನರಸಿಂಹ ಮೂರ್ತಿ, ರಾಮಸಮುದ್ರ ಸುರೇಶ್‌, ಬಸವನಪುರ ರಾಜಶೇಖರ್‌, ಅಂಬರೀಶ, ಆಲೂರು ನಾಗೇಂದ್ರ, ಚಿನ್ನಸ್ವಾಮಿ, ಬ್ಯಾಡಮೂಡ್ಲು ಬಸವಣ್ಣ, ಸಿದ್ಧರಾಜು, ಅಣಗಳ್ಳಿ ಬಸವರಾಜು, ಸುಭಾಷ್‌ ಮಾಡ್ರಹಳ್ಳಿ, ಶ್ರೀಕಂಠ, ಸೋಮಣ್ಣ, ಕಣ್ಣೇಗಾಲ ಮಹದೇವ ನಾಯಕ, ಮುತ್ತಯ್ಯ, ಕೃಷ್ಣ ನಾಯಕರಾಜಣ್ಣ, ಇತರ ಮುಖಂಡರು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next