ಮಂಗಳೂರು/ಉಡುಪಿ: ಕರಾವಳಿ ಕರ್ನಾಟಕದ ಕೊಂಕಣಿ ಕೆಥೋಲಿಕರು ಸೆ. 8ರಂದು ಯೇಸು ಕ್ರಿಸ್ತರ ತಾಯಿ ಮೇರಿ ಅವರ ಜನ್ಮ ದಿನಾಚರಣೆ ಅಂಗವಾಗಿ “ಮೊಂತಿ ಫೆಸ್ತ್’ (ತೆನೆ ಹಬ್ಬ) ಆಚರಿಸುತ್ತಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷದ ಆಚರಣೆ ಸರಳವಾಗಿರುತ್ತದೆ.
ಆಚರಣೆ ಕುರಿತಂತೆ ಮಂಗಳೂರಿನ ಬಿಷಪ್ ರೈ ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸರಕಾರದ ಆದೇಶಗಳನ್ನು ಗಮನದಲ್ಲಿರಿಸಿ ಕೆಲವು ಮಾರ್ಗ ಸೂಚಿಗಳನ್ನು ಹೊರಡಿಸಿದ್ದಾರೆ.
ಹಬ್ಬದ ಸಂದರ್ಭ ಮೆರವಣಿಗೆಯಲ್ಲಿ ಹೂವು ಮತ್ತು ಭತ್ತದ ಕದಿರುಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ. ಮಕ್ಕಳು ಮತ್ತು ಹಿರಿಯರು ಒಂದೊಂದೇ ಹೂವುಗಳನ್ನು ಕೊಂಡೊ ಯ್ಯಲು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಒಬ್ಬೊಬ್ಬರೇ ಹೋಗಿ ಹೂವನ್ನು ಮೇರಿ ಮಾತೆಗೆ ಅರ್ಪಿಸ ಬೇಕು. ಆಶೀರ್ವದಿಸಿದ ಭತ್ತದ ಕದಿರನ್ನು ಬಲಿ ಪೂಜೆಯ ಬಳಿಕ ಭಕ್ತರಿಗೆ ವಿತರಿಸ ಲಾಗುತ್ತದೆ. ಅಂದು 2 ಅಥವಾ 3 ಬಲಿ ಪೂಜೆಗಳನ್ನು ನಡೆಸಬಹುದು.
ನೂರು ಜನರೊಳಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಬರಲು ಉಡುಪಿ ಧರ್ಮಪ್ರಾಂತದ ಎಲ್ಲ ಚರ್ಚ್‌ಗಳಿಗೆ ತಿಳಿಸಲಾಗಿದೆ. ಮೆರವಣಿಗೆ ಇರುವುದಿಲ್ಲ. ಆಯಾ ಚರ್ಚ್‌ಗಳ ಪರಿಸ್ಥಿತಿಗೆ ಅನುಗುಣವಾಗಿ ಒಬ್ಬೊಬ್ಬರು ಮನೆಯಿಂದ ಬಂದು ತೆನೆಯನ್ನು ಪಡೆದುಕೊಳ್ಳಲು ಬಿಷಪ್ ರೆ| ಜೆರಾಲ್ಡ್ ಐಸಾಕ್ ಲೋಬೋ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಪವಿತ್ರ ಶಿಲುಬೆಯ ಹಬ್ಬ
ಸೆ. 14ರಂದು ಪವಿತ್ರ ಶಿಲುಬೆಯ ಹಬ್ಬವನ್ನು ಆಚರಿಸಲಾಗುತ್ತಿದ್ದು, ಅದಕ್ಕೆ ಪೂರ್ವಭಾವಿಯಾಗಿ ಸೆ. 13ರಂದು ರವಿವಾರ ಬಲಿ ಪೂಜೆಯ ಸಂದರ್ಭದಲ್ಲಿ ಶಿಲುಬೆಯ ಆರಾಧನೆ ಕಾರ್ಯ ಕ್ರಮವನ್ನು ವ್ಯವಸ್ಥೆ ಮಾಡಲಾಗಿದೆ. ಶಿಲುಬೆಯ ಆರಾಧನೆ ಸಾಮಾನ್ಯವಾಗಿ ಗುಡ್‌ಫ್ತೈಡೆ ದಿನದಂದು ನಡೆಸಲಾಗು ತ್ತಿದ್ದು, ಈ ವರ್ಷ ಕೊರೊನಾ ಲಾಕ್‌ಡೌನ್ ಕಾರಣ ಗುಡ್‌ಫ್ತೈಡೆಯಂದು (ಎ. 10) ಚರ್ಚ್‌ಗಳಲ್ಲಿ ಯಾವುದೇ ಕಾರ್ಯಕ್ರಮ ಇರಲಿಲ್ಲ. ಶಿಲುಬೆಯ ಆರಾಧನೆಗೆ ವಿಶಿಷ್ಟ ಸ್ಥಾನವಿರುವುದರಿಂದ ಸೆ. 13ರಂದು ಶಿಲುಬೆಯ ಆರಾಧನೆಯ ವ್ಯವಸ್ಥೆ ಮಾಡಲಾಗಿದೆ ಎಂದು ಬಿಷಪ್ ಅವರು ಉದಯವಾಣಿಗೆ ತಿಳಿಸಿದ್ದಾರೆ.